ನವದೆಹಲಿ:ಕುಖ್ಯಾತ ಭೂಗತ ಜಗತ್ತಿನ ಕ್ರಿಮಿನಲ್ ರಾಜೇಂದ್ರ ಸಾದಾಶಿವ ನಿಕಲಾಜೆ ಅಲಿಯಾಸ್ ಚೋಟಾ ರಾಜನ್ ಹಾಗೂ ಇತರರು ನಕಲಿ ಪಾಸ್ ಪೋರ್ಟ್ ಪ್ರಕರಣದಲ್ಲಿ ದೋಷಿತರು ಎಂದು ಸಿಬಿಐ ಕೋರ್ಟ್ ಸೋಮವಾರ ಆದೇಶ ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಮಂಗಳವಾರ ಘೋಷಿಸುವುದಾಗಿ ತಿಳಿಸಿದೆ.
ನಕಲಿ ಪಾಸ್ ಪೋರ್ಟ್ ಹೊಂದಿದ ಆರೋಪದಲ್ಲಿ ಚೋಟಾ ರಾಜನ್ ದೋಷಿ ಎಂದು ಸಿಬಿಐ ವಿಶೇಷ ಕೋರ್ಟ್ ನ ನ್ಯಾಯಾಧೀಶರಾದ ವೀರೇಂದ್ರ ಕುಮಾರ್ ಗೋಯಲ್ ಆದೇಶ ನೀಡಿದರು.
3 ಮಂದಿ ಸರ್ಕಾರಿ ಅಧಿಕಾರಿಗಳ ನೆರವಿನಿಂದ ಮೋಹನ್ ಕುಮಾರ್ ಎಂಬ ಹೆಸರಿನ ನಕಲಿ ಪಾಸ್ ಪೋರ್ಟ್ ಅನ್ನು ಹೊಂದಿದ್ದ ಆರೋಪ ಚೋಟಾ ರಾಜನ್ ಮೇಲಿತ್ತು. ಈ ಕೇಸ್ ಬಗ್ಗೆ ಸಿಬಿಐ ತಂಡ ತನಿಖೆ ನಡೆಸಿ ಚೋಟಾ ಹಾಗೂ ಮೂವರು ನಿವೃತ್ತ ಸರ್ಕಾರಿ ಅಧಿಕಾರಿಗಳ ಮೇಲೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ಪಾಸ್ ಪೋರ್ಟ್ ಇಲಾಖೆಯ ಮಾಜಿ ಅಧಿಕಾರಿಗಳಾದ ಜಯಶ್ರೀ ದತ್ತಾತ್ರೇಯ್ ರಾಹಟೆ, ದೀಪಕ್ ನಟವರಲಾಲ್ ಶಾ ಮತ್ತು ಲಲಿತಾ ಲಕ್ಷ್ಮಣನ್ ದೋಷಿತರಾಗಿದ್ದಾರೆ. ಮೂವರನ್ನು ಏಪ್ರಿಲ್ 25ರವರೆಗೆ ನ್ಯಾಯಾಂಗ ಬಂಧನಕ್ಕೆ ತೆಗೆದುಕೊಳ್ಳುವಂತೆ ಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದೆ.
ಚೋಟಾ ರಾಜನ್ ವಿರುದ್ಧ ಮಹಾರಾಷ್ಟ್ರ, ದೆಹಲಿ, ಉತ್ತರಪ್ರದೇಶ ಹಾಗೂ ಗುಜರಾತ್ ರಾಜ್ಯಗಳು ಸೇರಿದಂತೆ ಸುಮಾರು 70 ಪ್ರಕರಣಗಳನ್ನು ಸಿಬಿಐ ದಾಖಲಿಸಿತ್ತು.