ಮಂಗಳೂರು: ಮೀನುಗಾರಿಕಾ ಬೋಟ್‌ಗಳನ್ನು ದಡಕ್ಕೆ ತರದೇ ನೀರಿನಲ್ಲಿಯೇ ದುರಸ್ತಿ ಮಾಡುವ ಅಂಡರ್ ವಾಟರ್ ಸರ್ವೀಸ್ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಆರಂಭವಾಗಿದೆ. ಆ ಮೂಲಕ ಕರಾವಳಿ ಕರ್ನಾಟಕದಲ್ಲಿಯೂ ಪ್ರಥಮ ಬಾರಿಗೆ ನೀರಿನಲ್ಲೇ ಬೋಟ್‌ಗಳನ್ನು ದುರಸ್ತಿಗೊಳಿಸುವ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.
ಮಂಗಳೂರಿನ ಮೀನುಗಾರಿಕಾ ದಕ್ಕೆಯಲ್ಲಿ ಈ ಅಂಡರ್ ವಾಟರ್ ಗ್ಯಾರೇಜನ್ನು ಮತ್ಸ್ಯೋದ್ಯಮಿ ರಾಜರತ್ನ ಸನಿಲ್ ಆರಂಭಿಸಿದ್ದಾರೆ. ಬೋಟ್‌ಗಳನ್ನು ಸಾಮಾನ್ಯವಾಗಿ ನೀರಿನಿಂದ ಮೇಲೆತ್ತಿ ದುರಸ್ತಿ ಮಾಡುವುದು ಈವರೆಗಿನ ಕ್ರಮ. ಬೋಟ್‌ಗಳ ಅಡಿಯಲ್ಲಿ ಲೋಪದೋಷಗಳಿದ್ದರೆ ನೀರಿನಲ್ಲಿ ಮುಳುಗಿ ಅದನ್ನು ಸರಿಪಡಿಸಲು ಸಾಧ್ಯವಾಗುತ್ತಿರಲಿಲ್ಲ. ಇದಕ್ಕೆ ಪರಿಹಾರ ಎಂಬಂತೆ ಇದೀಗ ನೀರಿನ ಒಳಗಿದ್ದುಕೊಂಡೇ ದುರಸ್ತಿ ಮಾಡುವ ತಂತ್ರಜ್ಞಾನ ಹಾಗೂ ಈ ಬಗ್ಗೆ ತರಬೇತಿ ಪಡೆದ ಸಿಬಂದಿ ಮಂಗಳೂರಿನಲ್ಲಿ ಲಭ್ಯರಿದ್ದಾರೆ.
ಬೋಟ್‌ಗಳ ತಳದಲ್ಲಿರುವ ಲೋಹದ ಪ್ರೊಫೆಲ್ಲರ್‌ಗೆ ಕಪ್ಪೆ ಚಿಪ್ಪುಗಳು ಮುತ್ತಿಕೊಂಡು ಬೋಟ್‌ನ ವೇಗಕ್ಕೆ ತಡೆಯಾಗಿ ಹೆಚ್ಚು ಡೀಸೆಲ್ ಖರ್ಚಾಗುವುದು ಅಥವಾ ಬೋಟ್‌ನ ಚಲನೆಗೆ ಅಡ್ಡಿ ಆತಂಕ ಎದುರಾಗುವುದು ಸಾಮಾನ್ಯ. ಇದೀಗ ಸ್ಕೂಬಾ ಡೈವರ್‌ಗಳ ಮಾದರಿಯಲ್ಲಿ ನೀರಿನಲ್ಲಿ ಮುಳುಗಿಕೊಂಡೇ ತಂತ್ರಜ್ಞರು ಈ ಸಮಸ್ಯೆಯನ್ನು ಪರಿಹರಿಸಲಿದ್ದಾರೆ.
ರಾಜರತ್ನ ಸನಿಲ್ ಸ್ವತಃ ಈ ತಂತ್ರಜ್ಞಾನದ ತರಬೇತಿ ಪಡೆದಿರುವುದಲ್ಲದೆ, ಮೂವರು ಸಿಬಂದಿಯನ್ನು ತರಬೇತುಗೊಳಿಸಿ ನೇಮಕ ಮಾಡಿದ್ದಾರೆ. ಇನ್ನೂ ನಾಲ್ವರು ತರಬೇತಿ ಪಡೆಯುತ್ತಿದ್ದಾªರೆ. ಉಸಿರಾಟಕ್ಕೆ ಆಕ್ಸಿಜನ್ ಸಿಲಿಂಡರ್ ಮತ್ತು ದೇಹ ಮುಚ್ಚುವ ಜಾಕೆಟ್ ಧರಿಸಿಕೊಂಡು ನೀರಿಗಿಳಿದು ಬೋಟ್ ದುರಸ್ತಿ ಮಾಡುತ್ತಾರೆ.
ದೊಡ್ಡ ಬೋಟ್‌ಗಳನ್ನು ನೀರಿನಿಂದ ಮೇಲಕ್ಕೆತ್ತಿ ದುರಸ್ತಿಪಡಿಸಲು 1 ಲಕ್ಷ ರೂ.ಗಳಿಗೂ ಹೆಚ್ಚು ಖರ್ಚಾಗುತ್ತದೆ. ಆದ್ದರಿಂದ ಮಾಲಕರು ವರ್ಷಕ್ಕೊಮ್ಮೆ ಅಥವಾ 2 ವರ್ಷಕ್ಕೊಮ್ಮೆ ಈ ರೀತಿಯ ದುರಸ್ತಿ ಮಾಡಿಸುತ್ತಿದ್ದರು. ಇದೀಗ ಅಂಡರ್ ವಾಟರ್ ಸರ್ವೀಸ್ ಲಭ್ಯವಿರುವುದರಿಂದ ಇನ್ನು ಬೋಟ್‌ಗಳನ್ನು ಮೇಲೆತ್ತಿ ದುರಸ್ತಿ ಮಾಡುವ ಪ್ರಮೇಯ ಬರಲಾರದು ಜತೆಗೆ ಬಹಳಷ್ಟು ಖರ್ಚು ವೆಚ್ಚ ಉಳಿತಾಯ ಆಗಲಿದೆ. ನಿಯಮಿತ ನಿರ್ವಹಣೆಯಿಂದ ಬೋಟ್‌ಗಳನ್ನು ಸುಸ್ಥಿತಿಯಲ್ಲಿಡಬಹುದಾಗಿದೆ. ತಳಭಾಗ ಸಂಪೂರ್ಣ ಸ್ವತ್ಛಗೊಳಿಸಲು 20 ಸಾವಿರದಿಂದ 30 ಸಾವಿರ ರೂ. ಶುಲ್ಕ ಪಡೆಯಲಾಗುತ್ತಿದೆ. ಬಹಳಷ್ಟು ಬೇಡಿಕೆ ಬರುತ್ತಿದ್ದು, ಮಲ್ಪೆ ಮತ್ತು ಇತರ ಬಂದರುಗಳಿಗೂ ಸೇವೆಯನ್ನು ವಿಸ್ತರಿಸಲಾಗುವುದು.
– ರಾಜರತ್ನ ಸನಿಲ್