ಲಕ್ನೋ: ಭೂಗತಪಾತಕಿ, ರಾಜಕಾರಣಿ ಮುಖ್ತಾರ್ ಅನ್ಸಾರಿ ಇರುವ ಉತ್ತರಪ್ರದೇಶದ ಬಾಂಡಾ ಜೈಲಿನಿಂದ ವಿಚಾರಣಾಧೀನ ಕೈದಿಯೊಬ್ಬ ಪರಾರಿಯಾಗಿರುವ ಘಟನೆ ನಡೆದಿದೆ ಎಂದು ಸೋಮವಾರ(ಜೂನ್ 07) ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ನಾಯಕತ್ವ ಬದಲಾವಣೆ ವಿಚಾರ ಸತ್ಯಕ್ಕೆ ದೂರ ; ಆ ಬಗ್ಗೆ ಚರ್ಚೆಯೇ ನಡೆದಿಲ್ಲ; ಜಗದೀಶ್ ಶೆಟ್ಟರ್
ಭಾನುವಾರ ಸಂಜೆ ವೇಳೆ ವಿಚಾರಣಾಧೀನ ಕೈದಿ ಜೈಲು ಆವರಣದಲ್ಲಿ ತಪ್ಪಿಸಿಕೊಂಡು ಹೋಗಿರುವುದು ಪತ್ತೆಯಾದ ನಂತರ ಜೈಲಿನಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.
“ವಿಚಾರಣಾಧೀನ ಕೈದಿ ವಿಜಯ್ ಅರಾಖ್ ಜೈಲಿನಿಂದ ತಪ್ಪಿಸಿಕೊಂಡು ಹೋಗಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ಈತ ಗಿರ್ವಾನ್ ಪ್ರದೇಶದ ಬರ್ಸಾಡಾ ಬುಜುರ್ಗ್ ಗ್ರಾಮದ ನಿವಾಸಿಯಾಗಿದ್ದಾನೆ” ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಪ್ರತಾಪ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಅಧಿಕಾರಿಗಳು ಈವರೆಗೂ ಎಫ್ ಐಆರ್ ದಾಖಲಿಸಿಲ್ಲ ಎಂದು ಹೇಳಿದರು. ಅರಾಖ್ ಹೇಗೆ ಮತ್ತು ಎಲ್ಲಿಗೆ ಪರಾರಿಯಾಗಿದ್ದಾನೆ ಎಂಬ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಡಕಾಯಿತಿ ಹಾಗೂ ಇತರ ಪ್ರಕರಣಗಳಲ್ಲಿ ಅರಾಖ್ ನನ್ನು ಫೆಬ್ರುವರಿಯಲ್ಲಿ ಜೈಲಿಗೆ ಹಾಕಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.