ರಾಂಚಿ: ಪ್ರೊ ಕಬಡ್ಡಿ ಮಾಜಿ ಚಾಂಪಿಯನ್ ಯು ಮುಂಬಾ ಪರಿಸ್ಥಿತಿ ಈ ಬಾರಿ ಬಹಳ ಕಷ್ಟದಲ್ಲಿದೆ. 5ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಅದರ ಗ್ರಹಗತಿಗಳು ಸ್ಥಿರವಾಗಿಲ್ಲ. ಒಂದು ಪಂದ್ಯ ಗೆದ್ದರೆ 2 ಪಂದ್ಯ ಸೋಲುವಂತಹ ಹಣೆ ಬರಹ ಹೊಂದಿದಂತಿದೆ. ಬುಧವಾರ ಅದು ವಲಯ 1ರ ಅಗ್ರಸ್ಥಾನಿ ಗುಜರಾತ್ ಫಾರ್ಚೂನ್‌ಜೈಂಟ್ಸ್ ವಿರುದ್ಧ ಅನುಭವಿಸಿದ 23-45 ಅಂತರದ ಹೀನಾಯ ಸೋಲು ಇದನ್ನು ಮತ್ತೂಮ್ಮೆ ಸಾಬೀತುಪಡಿಸಿತು.
ಪ್ರೊ ಕಬಡ್ಡಿ 5ನೇ ಆವೃತ್ತಿ ರಾಂಚಿ ಚರಣದ ಬುಧ ವಾರದ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡ ಮೂರು ಬಾರಿ ಆಲೌಟಾಗಿ, ಪಂದ್ಯದ ಕೊನೆಯ ನಿಮಿಷದಲ್ಲಿ ಒಮ್ಮೆ ಆಲೌಟ್ ತಪ್ಪಿಸಿಕೊಂಡು ನಿಟ್ಟುಸಿರುಬಿಟ್ಟಿತು. ಇದಕ್ಕೆ ತದ್ವಿರುದ್ಧವಾಗಿ ನಾಯಕ ಸುಕೇಶ್ ಹೆಗ್ಡೆ ಅನುಪಸ್ಥಿತಿಯಲ್ಲಿ ಆಡಿದರೂ ಗುಜರಾತ್ ಅಬ್ಬರ ಸ್ವಲ್ಪವೂ ಕಡಿಮೆಯಾಗಲಿಲ್ಲ. ಅಗ್ರಸ್ಥಾನಿ ಪಟ್ಟಕ್ಕೆ ಸರಿಯಾಗಿ ಆಡಿದ ಅದು ಅಕ್ಷರಶಃ ಮುಂಬೈಯನ್ನು ಹೊಸಕಿ ಹಾಕಿತು. ಒಮ್ಮೆಯೂ ಆಲೌಟಾಗದೆ ಅದು ಮೆರೆದಾಡಿತು.
ಪಂದ್ಯದ ಮೊದಲರ್ಧದ 11ನೇ ಮತ್ತು 19ನೇ ನಿಮಿಷದಲ್ಲಿ ಮುಂಬಾ 2 ಬಾರಿ ಆಲೌಟಾಯಿತು. ಆಗ ಗುಜರಾತ್ 23, ಮುಂಬಾ 12 ಅಂಕ ಗಳಿಸಿದ್ದವು. ಇಂತಹ ಭಾರೀ ಅಂತರವನ್ನು 2ನೇ ಅವಧಿಯಲ್ಲಿ ಹಿಂದಿಕ್ಕುವುದು ಯಾವುದೇ ತಂಡಕ್ಕಾದರೂ ಕಷ್ಟಕರ. ಅದರಲ್ಲೂ ಗುಜರಾತ್‌ನಂತಹ ಬಲಿಷ್ಠ ತಂಡದೆದುರು ಬಹುತೇಕ ಸಾಧ್ಯವೇ ಇಲ್ಲ. ಈ ಹಂತದಲ್ಲೇ ಮುಂಬಾ ಸೋತಾಗಿತ್ತು!
2ನೇ ಅವಧಿಯಲ್ಲಿ ಮುಂಬಾ ತಿರುಗಿ ಬೀಳುವ ಯತ್ನವನ್ನೇ ಮಾಡಲಿಲ್ಲ. ನಾಯಕ ಅನೂಪ್ ಕುಮಾರ್ ದಾಳಿಯಲ್ಲಿ ಪೂರ್ಣ ವಿಫಲರಾಗಿದ್ದು, ಕಾಶಿಲಿಂಗ್ ಕೂಡ ಸಾಮರ್ಥ್ಯಕ್ಕೆ ತಕ್ಕ ಆಟವಾಡ ದಿದ್ದದ್ದು ಮುಂಬೈಗೆ ಮುಳುವಾಯಿತು. ಇನ್ನು ಗುಜರಾತ್ ಪ್ರದರ್ಶನವನ್ನು ವರ್ಣಿ ಸುವುದೇ ಅಗತ್ಯವಿಲ್ಲ. ಬಹುತೇಕ ಹೊಸ ಹುಡುಗರಿಂದ ತುಂಬಿದ್ದರೂ ಅನುಭವಿಗಳ ಪಡೆಯಂತೆ ಆಡಿತು. ದಾಳಿಯಲ್ಲಿ ಸಚಿನ್ ಕೆಲ ಆಕರ್ಷಕ ಪ್ರದರ್ಶನ ನೀಡಿ ದರು. ರಕ್ಷಣೆಯಲ್ಲಿ ಎಂದಿನಂತೆ ಅದರ ಪ್ರಮುಖ ಕ್ಯಾಚರ್ ಫಜೆಲ್ ಅಟ್ರಾಚೆಲಿ ಮಿರಿಮಿರಿ ಮಿಂಚಿದರು.
ಪಾಟ್ನಾ ಜಯಭೇರಿ
ರಾಂಚಿ: ತವರಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಭರ್ಜರಿ ಆಟದ ಪ್ರದರ್ಶನ ನೀಡಿದೆ. ತನ್ನ ವಲಯದ ಕೊನೆಯ ಸ್ಥಾನಿ ತಮಿಳ್ ತಲೈವಾಸ್ ವಿರುದ್ಧ ಬುಧವಾರ ನಡೆದ ಪಂದ್ಯದ ಆರಂಭದಲ್ಲಿ ಆಲೌಟ್ ಆದರೂ ಪಾಟ್ನಾ ತಿರುಗೇಟು ನೀಡಿ ಪಂದ್ಯವನ್ನು 41-39 ಅಂಕಗಳಿಂದ ಗೆಲ್ಲಲು ಯಶಸ್ವಿ ಯಾಯಿತು.
ಆರಂಭದಲ್ಲಿ ತಲೈವಾಸ್ ಭರ್ಜರಿ ಆಟವಾಡಿತು. ಆದರೆ ಪಾಟ್ನಾ ತಂಡವನ್ನು ಆಲೌಟ್ ಮಾಡಿಸಿ ಮೇಲುಗೈ ಸಾಧಿಸಿದ್ದ ತಲೈವಾಸ್ ಕೊನೆ ಹಂತದಲ್ಲಿ ಎಡವಿತು. ಇದರಿಂದ ಗೆಲ್ಲುವ ಪಂದ್ಯವನ್ನು ತಲೈವಾಸ್ ಕಳೆದುಕೊಂಡಿತು. ಪಾಟ್ನಾ ಗುರುವಾರ ನಡೆಯುವ ಪಂದ್ಯ ದಲ್ಲಿ ಯುಪಿಯನ್ನು ಎದುರಿಸಲಿದೆ.
ಕೆ.ಪೃಥ್ವಿಜಿತ್