Advertisement

ಬಂಜೆತನಕ್ಕೆ ಕಾರಣಗಳನ್ನು ತಿಳಿಯುವುದು ಮತ್ತು ಯಶಸ್ಸಿನ ಸಾಧ್ಯತೆಗಳು

05:37 PM Aug 15, 2022 | Team Udayavani |

ಸ್ತ್ರೀಯ ದೇಹದ ಹೊರಗೆ, ಪ್ರಯೋಗಾಲಯದಲ್ಲಿ ಫ‌ಲಿತಗೊಳ್ಳುವ ಶಿಶುವನ್ನು ಪ್ರನಾಳ ಶಿಶು ಎನ್ನುತ್ತೇವೆ. 1978ರಲ್ಲಿ ಮೊತ್ತಮೊದಲ ಪ್ರನಾಳ ಶಿಶು ಜನನವಾಯಿತು. ಇದಾದ ಬಳಿಕ ಜಾಗತಿಕವಾಗಿ ಲಕ್ಷಾಂತರ ಪ್ರನಾಳ ಶಿಶುಗಳ ಜನನವಾಗಿದೆ. ಈ ಪ್ರಕ್ರಿಯೆಯನ್ನು “ಇನ್‌-ವಿಟ್ರೊ (ದೇಹದ ಹೊರಗೆ) ಫ‌ರ್ಟಿಲೈಸೇಶನ್‌’ ಎಂದು ಕರೆಯಲಾಗುತ್ತದೆ. ಇದನ್ನು ಸರಳವಾಗಿ ವಿವರಿಸುವುದಾದರೆ, ತಾಯಿಯ ಅಂಡಾಶಯದಿಂದ ಅಂಡಗಳನ್ನು ಹೊರತೆಗೆದು ಪ್ರಯೋಗಾಲಯದಲ್ಲಿ ಕೃತಕ ಗರ್ಭದಲ್ಲಿ ತಂದೆಯ ವೀರ್ಯಾಣುವಿನೊಂದಿಗೆ ಫ‌ಲಿತಗೊಳಿಸಲಾಗುತ್ತದೆ. ಫ‌ಲದೀಕರಣದ ಬಳಿಕ “ಭ್ರೂಣಾಂಕುರ ಪೂರ್ವ’ಯಲ್ಲಿರುವ ಫ‌ಲಿತಗೊಂಡ ಅಂಡವು 2ರಿಂದ 4 ಬಾರಿ ಅಭಿವೃದ್ಧಿಗೊಳ್ಳಲು ಬಿಡಲಾಗುತ್ತದೆ ಮತ್ತು ಆ ಬಳಿಕ ಅದನ್ನು ತಾಯಿಯ ಗರ್ಭಕೋಶಕ್ಕೆ ಮರಳಿಸಿ ಅಲ್ಲಿ ಸಹಜವಾಗಿ ಬೆಳೆಯಲು ಅನುವು ಮಾಡಿಕೊಡಲಾಗುತ್ತದೆ. ತಾಯಿ/ ತಂದೆ ಅಥವಾ ಇಬ್ಬರಲ್ಲಿಯೂ ಸಂತಾನೋತ್ಪತ್ತಿಗೆ ಸಂಬಂಧಿಸಿದ ಸಮಸ್ಯೆಗಳಿದ್ದ ಸಂದರ್ಭದಲ್ಲಿ

Advertisement

ಸಹಾಯಕ್ಕೆ ಬರುವ ಅನೇಕ ಕೃತಕ ಗರ್ಭಧಾರಣೆಯ ವಿಧಾನಗಳಲ್ಲಿ ಈ ಪ್ರನಾಳ ಶಿಶು ವಿಧಾನವೂ ಒಂದು.ಗರ್ಭಧಾರಣೆ ಎಂಬುದು ಸದಾ ಒಂದು ಅದೃಷ್ಟದ ವಿಚಾರ. ಸಹಜ ಗರ್ಭಧಾರಣೆಗೆ ಸ್ತ್ರೀ ಜನನಾಂಗದೊಳಗೆ ಸ್ಖಲನಗೊಂಡ ವೀರ್ಯದಲ್ಲಿರುವ ವೀರ್ಯಾಣುಗಳು ಗರ್ಭಕಂಠ, ಗರ್ಭಕೋಶ ಮತ್ತು ಫಾಲೊಪಿಯನ್‌ ನಾಳದ ಮೂಲಕ ಈಜುತ್ತ ತೆರಳಬೇಕು; ಅಲ್ಲಿ ಅಂಡಾಶಯದಿಂದ ಬಿಡುಗಡೆಗೊಂಡು ಫಾಲೊಪಿಯನ್‌ ನಾಳದ ಮಧ್ಯದ ವರೆಗೆ ಸಾಗಿ ಬಂದಿರುವ ಅಂಡವನ್ನು ಸಂಧಿಸಬೇಕು. ಇದರ ಪರಿಣಾಮವಾಗಿ ಫ‌ಲಿತಗೊಂಡ ಭ್ರೂಣಾಂಕುರವು  ಮೂರು ದಿನಗಳ ವರೆಗೆ ಫಾಲೊಪಿಯನ್‌ ನಾಳದಲ್ಲಿಯೇ ಬೆಳವಣಿಗೆ ಕಾಣುತ್ತದೆ, ಆ  ಬಳಿಕ ಗರ್ಭಕೋಶಕ್ಕೆ ತೆರಳುತ್ತದೆ, ಅಲ್ಲಿ ಮತ್ತೆ ಮೂರರಿಂದ ನಾಲ್ಕು ದಿನಗಳ ಕಾಲ ತೇಲುತ್ತ ಬೆಳೆಯುತ್ತದೆ; ಆ ಬಳಿಕವಷ್ಟೇ ಗರ್ಭಕೋಶದ  ಭಿತ್ತಿಗೆ ಅಂಟಿಕೊಳ್ಳುವ ಮೂಲಕ ಗರ್ಭಧಾರಣೆಯು ಸ್ಥಿರ ಮತ್ತು ಖಚಿತವಾಗುತ್ತದೆ. ತಪ್ಪಿಹೋದ ಋತುಚಕ್ರಕ್ಕಿಂತ ಕೆಲವು ದಿನ ಹಿಂದೆ ನಡೆಸುವ ಗರ್ಭಧಾರಣೆಯ ರಕ್ತಪರೀಕ್ಷೆಯು ಪಾಸಿಟಿವ್‌ ಫ‌ಲಿತಾಂಶವನ್ನು ನೀಡುತ್ತದೆ. ಇದು ಈ ಗರ್ಭಧಾರಣೆಯು ಸ್ಥಿರ-ಖಚಿತಗೊಳ್ಳುವ ಸಮಯ. ಫ‌ಲದೀಕರಣದ ಒಂದು ವಾರದ ಬಳಿಕ “ಭ್ರೂಣಾಂಕುರ’ದ ಕೇಂದ್ರದಲ್ಲಿರುವ ಕೆಲವು ಜೀವಕೋಶಗಳು ನೈಜ ಭ್ರೂಣವಾಗಿ ಅಭಿವೃದ್ಧಿ ಹೊಂದುತ್ತವೆ; ಇನ್ನುಳಿದ ಎಲ್ಲ ಜೀವಕೋಶಗಳು ಜನನಾಂತರ ರೂಪ ಅಥವಾ  ತಾಯಿಮಾಸುವಿನ ರೂಪಕ್ಕೆ ಪರಿವರ್ತನೆ ಹೊಂದುತ್ತವೆ.

ದಂಪತಿ ಸಂಭಾವ್ಯ ಸಂತಾನಶಕ್ತಿ ಕುಂದಿರುವ (ಗರ್ಭಧಾರಣೆ ಮಾಸಿಕ ಸಾಧ್ಯತೆ ಕಡಿಮೆ ಇರುವ) ಅಥವಾ ಸಂಪೂರ್ಣವಾಗಿ ಸಂತಾನಶಕ್ತಿ ರಹಿತರಾಗಿರುವ (ಗರ್ಭಧಾರಣೆಯ ಸಾಧ್ಯತೆ ಇಲ್ಲದಿರುವ, ಕೆಲವೊಮ್ಮೆ ಬಂಜೆತನ ಎನ್ನಲಾಗುತ್ತದೆ) ಸ್ಥಿತಿಗೆ ಸಾಮಾನ್ಯ ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು:

  1. ಅಂಡಗಳ ಬಿಡುಗಡೆಯಲ್ಲಿ ತೊಂದರೆ (ಅಂಡಾಶಯದಿಂದ ಅಂಡ ಬಿಡುಗಡೆಗೊಳ್ಳುವುದಕ್ಕೆ ಸಂಬಂಧಿಸಿದ್ದು) : ಋತುಸ್ರಾವವೇ ಇಲ್ಲದಿರುವ ಸ್ಥಿತಿ ಇದ್ದರೆ (ಅಮನೊರಿಯಾ) ಸಂತಾನೋತ್ಪತ್ತಿ ಸಾಮರ್ಥ್ಯ ಸಂಪೂರ್ಣವಾಗಿ ಇರುವುದಿಲ್ಲ. ಆದರೂ ಇಂತಹ ಸ್ತ್ರೀಯರಿಗೆ ಕೂಡ ಹಾರ್ಮೋನ್‌ಗಳು ಅಥವಾ ಔಷಧಗಳ ಮೂಲಕ ಚಿಕಿತ್ಸೆ ನೀಡಬಹುದಾಗಿದೆ. ಗರ್ಭಕೋಶದಲ್ಲಿ ಪ್ರತಿಸ್ಪಂದನೆ ರಹಿತ ಅಂಡಗಳಿದ್ದಲ್ಲಿ (“ಅಂಡಾಶಯ ವೈಫ‌ಲ್ಯ’), ಲಭ್ಯವಿರುವ ಏಕೈಕ ಚಿಕಿತ್ಸಾವಿಧಾನವೆಂದರೆ ದಾನಿಯಿಂದ ಪಡೆದ ಅಂಡದ ಉಪಯೋಗ.
  2. ವೀರ್ಯೋತ್ಪತ್ತಿಗೆ ಸಂಬಂಧಿಸಿದ ಸಮಸ್ಯೆಗಳು: ವೀರ್ಯದಲ್ಲಿ ವೀರ್ಯಾಣುಗಳೇ ಇಲ್ಲದಿದ್ದಲ್ಲಿ (ಅಝೂಸ್ಪರ್ಮಿಯಾ) ಸಂತಾನೋತ್ಪತ್ತಿ ಶಕ್ತಿ ಇರುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಕೃತಕ ಫ‌ಲದೀಕರಣದಿಂದ ಚಿಕಿತ್ಸೆ ಸಾಧ್ಯ. ವೀರ್ಯ ಸಾಗಿ ಬರುವ ಮಾರ್ಗದಲ್ಲಿ ತಡೆಗಳು ಇರುವುದರಿಂದ ಈ ಸಮಸ್ಯೆ ಆಗಿದ್ದರೆ ಅದಕ್ಕೆ ಚಿಕಿತ್ಸೆಯಿದೆ.
  3. ಯೋನಿ ಮತ್ತು ಅಂಡಾಶಯದ ನಡುವೆ ಇರುವ ತಡೆಯಿಂದಾಗಿ ಫ‌ಲದೀಕರಣವು ಸಾಧ್ಯವಾಗದೆ ಇದ್ದಾಗ (ಇಂತಹ ತಡೆಗಳು ಕಂಡುಬರುವ ಬಹುಸಾಮಾನ್ಯ ಸ್ಥಳವೆಂದರೆ ಪಾಲೊಪಿಯನ್‌ ನಾಳಗಳು – ಇದಕ್ಕೆ ಕೆಲವೊಮ್ಮೆ ಸೂಕ್ಷ್ಮಶಸ್ತ್ರಕ್ರಿಯೆಯ ಮೂಲಕ ಚಿಕಿತ್ಸೆ ನೀಡಬಹುದು; ಇನ್ನುಳಿದ ಪ್ರಕರಣಗಳಲ್ಲಿ ಕೃತಕ ಗರ್ಭಧಾರಣೆ ಮೊರೆಹೊಗಬಹುದು).
  4. ಎಂಡೋಮೆಟ್ರಿಯೋಸಿಸ್‌: ಗರ್ಭಕೋಶದ ಭಿತ್ತಿ (ಎಂಡೋಮೆಟ್ರಿಯಂ) ಯನ್ನು ಹೋಲುವ ಅಂಗಾಂಶಗಳು ಗರ್ಭಕೋಶದ ಹೊರಗೆ ಬೆಳವಣಿಗೆ ಕಾಣುವ ಸ್ಥಿತಿ; ಇದರಿಂದಾಗಿ ಅಂಡವು ಫ‌ಲಿತಗೊಂಡು ಭ್ರೂಣಾಂಕುರವು ಗರ್ಭಕೋಶದಲ್ಲಿ ಸ್ಥಾಪನೆಗೊಳ್ಳುವುದರ ನಡುವಣ ಹಲವು ಪ್ರಕ್ರಿಯೆಗಳಿಗೆ ಅಡಚಣೆಯುಂಟಾಗುತ್ತದೆ. ಈ ಸಮಸ್ಯೆಯನ್ನು ಔಷಧ, ಶಸ್ತ್ರಕ್ರಿಯೆ ಅಥವಾ ಕೃತಕ ಗರ್ಭಧಾರಣೆಯ ಮೂಲಕ ಪರಿಹರಿಸಬಹುದಾಗಿದೆ. ಇಂತಹ ಸಂದರ್ಭಗಳಲ್ಲಿ ಸಂತಾನೋತ್ಪತ್ತಿ ಕುಂದಿರುತ್ತದೆಯೇ ವಿನಾ ಇದು ಸಂಪೂರ್ಣ ಬಂಜೆತನವಲ್ಲ.

ಈ ಕೆಳಕಂಡ ಪರೀಕ್ಷೆಗಳನ್ನು ನಡೆಸಬಹುದಾಗಿದೆ:

 ರಕ್ತದಲ್ಲಿರುವ ಹಾರ್ಮೋನ್‌ ಪ್ರಮಾಣಗಳು

Advertisement

 ವೀರ್ಯಾಣು ಸಂಖ್ಯೆ (ವೀರ್ಯ ವಿಶ್ಲೇಷಣೆ)

 ಗರ್ಭಕೋಶ ಮತ್ತು ಫಾಲೊಪಿಯನ್‌ ಕೊಳವೆಗಳ ಎಕ್ಸ್‌-ರೇ (ಹಿಸ್ಟಿರೊಸಾಲ್ಪಿಂಗೊಗ್ರಾಮ್‌) ಅಥವಾ

 ಫಾಲೊಪಿಯನ್‌ ಕೊಳವೆಗಳ ಅಡೆತಡೆ ಮುಕ್ತತೆ, ಪರೀಕ್ಷೆ ಮತ್ತು ಎಂಡೋಮೆಟ್ರಿಯೋಸಿಸ್‌ ಇದೆಯೇ ಎಂದು ತಿಳಿಯಲು ಲ್ಯಾಪರೊಸ್ಕೋಪಿ.

ಈ ಪರೀಕ್ಷೆಗಳ ಮೂಲಕ ತಿಳಿಯಬಹುದಾದದ್ದು :

ಎ. ಸಂಪೂರ್ಣ ಸಂತಾನೋತ್ಪತ್ತಿಶಕ್ತಿ ರಾಹಿತ್ಯ (“ಬಂಜೆತನ’); ಅಂದರೆ,

(ಎ) ಅಂಡಾಶಯ ವೈಫ‌ಲ್ಯ, ಅಂಡ ಬಿಡುಗಡೆಯನ್ನು ಪ್ರಚೋದಿಸುವ ಸಾಧ್ಯತೆಯೇ ಇಲ್ಲದಿರುವ ಸ್ಥಿತಿ;

(ಬಿ) ವೀರ್ಯಾಣುಗಳೇ ಇಲ್ಲದಿರುವಿಕೆ (“ಅಝೂಸ್ಪರ್ಮಿಯಾ’), ಅಥವಾ

ಬಿ) ಕುಂದಿದ ಸಂತಾನೋತ್ಪತ್ತಿ ಶಕ್ತಿ: ಅಂದರೆ, ಈ ಕೆಳಗಿನ ಒಂದು ಅಥವಾ ಒಂದಕ್ಕಿಂತ ಹೆಚ್ಚು ಸಮಸ್ಯೆಗಳು:

(ಎ) ಅನಿಯಮಿತ ಅಂಡ ಬಿಡುಗಡೆ ಅಥವಾ ಚಿಕಿತ್ಸೆಯ ಮೂಲಕ ಭಾಗಶಃ ಪರಿಹರಿಸಲ್ಪಟ್ಟ ಶೂನ್ಯ ಅಂಡ ಬಿಡುಗಡೆ.

(ಬಿ) ವೀರ್ಯಾಣು ಸಂಖ್ಯೆ ಕಡಿಮೆ ಇರುವುದು

(ಸಿ) ನಾಳಗಳಲ್ಲಿ ಭಾಗಶಃ ತಡೆ ಅಥವಾ ನಾಳ ಯಾ ಅಂಡಾಶಯದ ಸನಿಹದಲ್ಲಿ ಗಾಯಗೊಂಡ ಅಂಗಾಂಶ ಇರುವುದು

(ಡಿ) ಯಾವುದೇ ಹಂತದ ಎಂಡೋಮೆಟ್ರಿಯೋಸಿಸ್‌

(ಇ) ಫೈಬ್ರಾಯ್ಡಗಳು, ಪಾಲಿಪ್‌ಗ್ಳು ಅಥವಾ ಭಿತ್ತಿಯಲ್ಲಿ ಗಾಯದಂತಹ ಗರ್ಭಕೋಶದ ಅಸಹಜ ಸ್ಥಿತಿಗಳು

(ಎಫ್) ಹಿಂದೆ ಮಾಡಲಾದ ಕೋನ್‌ ಬಯಾಪ್ಸಿ ಅಥವಾ ಉರಿಯೂತದಂತಹ ಗರ್ಭಕಂಠದ ಅಸಹಜತೆಗಳು

(ಜಿ) ಪುರುಷ ಅಥವಾ ಸ್ತ್ರೀಯಲ್ಲಿ ವೀರ್ಯದ ಅಂಗಾಂಶಗಳ ವಿರುದ್ಧ ರೋಗನಿರೋಧಕ ಶಕ್ತಿಯ ಪ್ರತಿವರ್ತನೆ (“ಆ್ಯಂಟಿ -ಸ್ಪರ್ಮ್ ಆ್ಯಂಟಿಬಾಡಿಗಳು’)

(ಎಚ್‌) ನಾಳದಲ್ಲಿರುವ ಕೆಲವು ಕಾರಣಗಳು

ಈ ಅಸಹಜ ಸ್ಥಿತಿಗಳಲ್ಲಿ ಕೆಲವನ್ನು ಮಾತ್ರ ಸುಲಭವಾಗಿ ಚಿಕಿತ್ಸೆಗೊಳಪಡಿಸಿ ಪರಿಹರಿಸಬಹುದು. ಅಲ್ಲದೆ, ಈ ಅಸಹಜ ಸ್ಥಿತಿಗಳು ಜತೆಯಾಗಿ ಕಂಡುಬಂದರೆ ಸಂತಾನೋತ್ಪತ್ತಿಯ ಇತರ ಅಂಶಗಳಿಗೆ ಅಡಚಣೆ ಉಂಟಾಗದಂತೆ ಚಿಕಿತ್ಸೆ ನೀಡುವುದು ಇನ್ನಷ್ಟು ಕ್ಲಿಷ್ಟವಾಗುತ್ತದೆ.

ಕೆಲವೊಮ್ಮೆ ಯಾವುದೇ ಅಸಹಜ ಸ್ಥಿತಿಗಳು ಇರುವುದಿಲ್ಲ, ಆದರೂ “ವಿವರಿಸಲಾಗದ ಸಂತಾನೋತ್ಪತ್ತಿ ಶಕ್ತಿ ನಷ್ಟ’ ಕಂಡುಬರುತ್ತದೆ; ಇದು ಸಂತಾನೋತ್ಪತ್ತಿ ಶಕ್ತಿಗುಂದಿರುವುದರ ಒಂದು ರೂಪ. ಸಂತಾನೋತ್ಪತ್ತಿ ಶಕ್ತಿ ಇಲ್ಲದಿರುವಿಕೆಗೆ ಕೆಲವು ಕಾರಣಗಳನ್ನು ಸರಳ ಔಷಧಗಳ ಮೂಲಕ ಅಥವಾ ಸಂತಾನಶಕ್ತಿ ತಜ್ಞ ವೈದ್ಯರಿಂದ ಶಸ್ತ್ರಚಿಕಿತ್ಸೆಯ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ. ಈ ಚಿಕಿತ್ಸೆಯ ಗುರಿ ಸ್ತ್ರೀಯು ಗರ್ಭಧರಿಸುವ ಸಾಧ್ಯತೆಯನ್ನು ಹೆಚ್ಚು ಸಹಜ ಸ್ಥಿತಿಗೆ ತರುವುದು; ಇದು ಸಾಧ್ಯವಾಗಲು ಕಾಲಾವಕಾಶ ಬೇಕಾಗಬಹುದು.

ಇತರ ಪ್ರಕರಣಗಳಲ್ಲಿ “ನೆರವಿನ ಫ‌ಲದೀಕರಣ’ ಅಗತ್ಯವಾಗಬಹುದು. “ನೆರವಿನ ಫ‌ಲದೀಕರಣ’ ಎಂದರೆ ಗರ್ಭಧರಿಸಲು ಉದ್ದೇಶಿಸಿದ ತಿಂಗಳಿನಲ್ಲಿ ಅದರ ಸಾಧ್ಯತೆಯನ್ನು ಗಮನಾರ್ಹವಾಗಿ ಹೆಚ್ಚಿಸಲು ಸಂತಾನೋತ್ಪತ್ತಿ ತಂತ್ರಜ್ಞಾನವನ್ನು ಉಪಯೋಗಿಸಿಕೊಳ್ಳುವುದು.

ನೆರವಿನ ಫ‌ಲದೀಕರಣದ  ವರ್ಗೀಕರಣ :

ಇಂಟ್ರಾ ಯುಟೆರೈನ್‌ ಇನ್ಸೆಮಿನೇಶನ್‌ (ಐಯುಐ) ಇಂಟ್ರಾ ಯುಟೆರೈನ್‌ ಇನ್ಸೆಮಿನೇಶನ್‌ (ಐಯುಐ) ಒಂದು ಸರಳ ಮತ್ತು ಶಸ್ತ್ರಕ್ರಿಯೆ ಕಡಿಮೆ ಅಗತ್ಯವುಳ್ಳ ವಿಧಾನವಾಗಿದೆ. ಇದರಲ್ಲಿ ಪತಿ ಅಥವಾ ದಾನಿಯ ವೀರ್ಯಾಣುಗಳನ್ನು ಕ್ಯಾಥೆಟರ್‌ ಉಪಯೋಗಿಸಿ ಗರ್ಭದೊಳಗೆ ಸ್ಥಾಪಿಸಲಾಗುತ್ತದೆ. ವೀರ್ಯಾಣು ಸಂಖ್ಯೆ ಕಡಿಮೆ ಇದ್ದ ಪ್ರಕರಣಗಳಲ್ಲಿ ಅಥವಾ ನಿಶ್ಚಿತ ಕಾರಣಗಳು ಸಿಗದ ಸಂತಾನಶಕ್ತಿ ಹೀನತೆಯ ಪ್ರಕರಣಗಳಲ್ಲಿ ಐಯುಐಯನ್ನು ಉಪಯೋಗಿಸಲಾಗುತ್ತದೆ. ಸಮರ್ಪಕವಾದ ಪ್ರಯೋಗಾಲಯ ತಂತ್ರಜ್ಞಾನದ ಸಹಕಾರದೊಂದಿಗೆ, ವೀರ್ಯದಿಂದ ವೀರ್ಯಾಣುಗಳನ್ನು ಪ್ರತ್ಯೇಕಿಸಲಾಗುತ್ತದೆ, ಆ ಬಳಿಕ ಅದನ್ನು ಸಣ್ಣ ಪ್ರಮಾಣದ ಸ್ಟರೈಲ್‌ ಮಾಧ್ಯಮದಲ್ಲಿ ಇರಿಸಲಾಗುತ್ತದೆ. ಈ ಮಾಧ್ಯಮದಲ್ಲಿ ವೀರ್ಯಾಣುಗಳು ಸಜೀವ ಮತ್ತು ಸಕ್ರಿಯ ಚಲನಶೀಲವಾಗಿರುತ್ತವೆ.

ಇನ್‌ ವಿಟ್ರೊ ಫ‌ರ್ಟಿಲೈಸೇಶನ್‌ (ಐವಿಎಫ್) :

ಚಿಕಿತ್ಸೆ ನೀಡಲು ಸಾಧ್ಯವಿಲ್ಲದ ಗರ್ಭಧಾರಣೆಗೆ ಅಡಚಣೆ ಅಥವಾ ಫಾಲೊಪಿಯನ್‌ ಕೊಳವೆ ಇಲ್ಲದಿರುವಿಕೆ (ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಿದ ಬಳಿಕ) ಯಂತಹ ಸಂದರ್ಭಗಳಲ್ಲಿ ಇನ್‌ ವಿಟ್ರೊ ಫ‌ರ್ಟಿಲೈಸೇಶನ್‌ (ಐವಿಎಫ್) ಅನುಸರಿಸಲಾಗುತ್ತದೆ. ವಿವರಣೆಗೆ ಸಿಗದಿರುವ ಸಂತಾನಶಕ್ತಿ ಹೀನತೆ ಅಥವಾ ಇತರ ಆರಂಭಿಕ ವಿಧಾನಗಳು ವಿಫ‌ಲಗೊಂಡ ಸಂದರ್ಭಗಳಲ್ಲಿ ಇದನ್ನು ಅನುಸರಿಸಲಾಗುತ್ತದೆ. ಐವಿಎಫ್ಗಾಗಿ ಸಾಕಷ್ಟು ಅಂಡಗಳನ್ನು ಪಡೆಯಲು ಎರಡು ವಾರಗಳ ಕಾಲ ಅಂಡಾಶಯಗಳನ್ನು ಹಾರ್ಮೋನ್‌ಗಳಿಂದ ಚೋದಿಸಲಾಗುತ್ತದೆ.

ಉದ್ದೇಶಿತ ಫ‌ಲದೀಕರಣಕ್ಕಿಂತ ಸುಮಾರು 2 ತಾಸುಗಳಿಗೆ ಮುನ್ನ ಅಲ್ಟ್ರಾಸೌಂಡ್‌ ಸಹಾಯದಿಂದ ಯೋನಿಯ ಮೂಲಕ ಫಾಲಿಕಲ್‌ಗ‌ಳ ನೆರವು ಪಡೆದು ಅಂಡಗಳನ್ನು ಅಂಡಾಶಯದಿಂದ ನೇರವಾಗಿ ಪಡೆಯಲಾಗುತ್ತದೆ. ಬಳಿಕ ಪ್ರಯೋಗಾಲಯದಲ್ಲಿ ಕಲ್ಚರ್‌ ಧಾರಕದಲ್ಲಿ ಅಂಡಗಳನ್ನು ಇರಿಸಿ ವೀರ್ಯಾಣುಗಳನ್ನು ಸೇರಿಸಿ ಫ‌ಲದೀಕರಣ ನಡೆಸಲಾಗುತ್ತದೆ. ಎರಡು ದಿನಗಳ ಬಳಿಕ ಕೆಲವು ಪೂರ್ವ ಭ್ರೂಣಾಂಕುರಗಳನ್ನು ಗರ್ಭಕಂಠದ ಮೂಲಕ ಗರ್ಭಕೋಶದ ಒಳಕ್ಕೆ ವರ್ಗಾಯಿಸಲಾಗುತ್ತದೆ.

ಐವಿಎಫ್ನಲ್ಲಿ ವೀರ್ಯಾಣುಗಳನ್ನು ಅಂಡಗಳ ತತ್‌ಕ್ಷಣ ಸಂಪರ್ಕಕ್ಕೆ ಒಳಪಡಿಸುವುದರಿಂದ ಫ‌ಲದೀಕರಣ ಸಾಮಾನ್ಯವಾಗಿ ನಿಶ್ಚಿತವಾಗಿರುತ್ತದೆ ಮತ್ತು ಬೆಳೆಯುತ್ತಿರುವ ಭ್ರೂಣಾಂಕುರಗಳನ್ನು ಗರ್ಭಕೋಶಕ್ಕೆ ವರ್ಗಾಯಿಸಲಾಗುತ್ತದೆ. ಮಹಿಳೆಯ ವಯಸ್ಸನ್ನು ಅವಲಂಬಿಸಿ ಗರ್ಭಧಾರಣೆಯ ಸಾಧ್ಯತೆಗಳು ಪ್ರತೀ ಚಿಕಿತ್ಸೆಯ ಚಕ್ರದಲ್ಲಿ ಶೇ. 40ರಷ್ಟಿರುತ್ತವೆ.

ವೀರ್ಯಾಣು ಅಸಹಜತೆಯ ತೀವ್ರ ಸ್ವರೂಪದ ಪ್ರಕರಣಗಳಲ್ಲಿ, ಅದರಲ್ಲೂ ವೀರ್ಯದಿಂದ ಕೆಲವೇ ಸಹಜ ವೀರ್ಯಾಣುಗಳನ್ನು ಬೇರ್ಪಡಿಸಲು ಸಾಧ್ಯ ಎಂಬ ಸ್ಥಿತಿ ಇದ್ದಾಗ (ಅಥವಾ, ಅಗತ್ಯ ಬಿದ್ದರೆ ವೃಷಣಗಳಿಂದಲೇ ನೇರವಾಗಿ ವೀರ್ಯಾಣುಗಳನ್ನು ತೆಗೆದಿದ್ದಾಗ), ಅಂಡಗಳ ಒಳಗೆ ವೀರ್ಯಾಣುಗಳನ್ನು ಸೇರಿಸಲು ಮೈಕ್ರೊಮ್ಯಾನಿಪ್ಯುಲೇಶನ್‌ ವಿಧಾನವನ್ನು ಅನುಸರಿಸಲಾಗುತ್ತದೆ (“ಐಸಿಎಸ್‌ಐ’= ಇಂಟ್ರಾ ಸೈಟೊಪ್ಲಾಸ್ಮಿಕ್‌ ಸ್ಪರ್ಮ್ ಇಂಜೆಕ್ಷನ್‌).

ತಮ್ಮ ಅಂಡಾಶಯದ ಚಟುವಟಿಕೆಯಲ್ಲಿ ವೈಫ‌ಲ್ಯ ಹೊಂದಿರುವವರು ಮತ್ತು 40 ವರ್ಷಕ್ಕಿಂತ ಮೇಲ್ಪಟ್ಟು ವಯಸ್ಸಾಗಿದ್ದು, ಅಂಡಗಳ ಗುಣಮಟ್ಟ ಕಳಪೆಯಾಗಿರುವ ಮಹಿಳೆಯರಿಗೆ ದಾನಿಗಳ ವೀರ್ಯಾಣು ಮತ್ತು ಅಂಡಗಳ ಬಳಕೆಯನ್ನು ಶಿಫಾರಸು ಮಾಡಲಾಗುತ್ತದೆ. ಗರ್ಭಧಾರಣೆಯನ್ನು ಸಾಧಿಸಲು ಸ್ತ್ರೀಯ ಸಹೋದರಿ ಅಥವಾ ಇನ್ನಿತರ ಸ್ತ್ರೀಯರಿಂದ ಪಡೆದ ಅಂಡಗಳ ಬಳಕೆ ಉತ್ತಮ ಆಯ್ಕೆಯಾಗಿದೆ.

ಪತಿಯಲ್ಲಿ ವೀರ್ಯಾಣುಗಳಿಲ್ಲದೆ ಇದ್ದಾಗ ಅಥವಾ ವಂಶವಾಹಿ ಕಾಯಿಲೆಗಳಿದ್ದಾಗ ಬಂಜೆತನ ಪರಿಹಾರ ಕೇಂದ್ರಗಳಲ್ಲಿ ಇರುವ ವೀರ್ಯಾಣು ಬ್ಯಾಂಕ್‌ನಿಂದ ಐಯುಐ ಮತ್ತು ಐವಿಎಫ್ಗಾಗಿ ದಾನಿ ವೀರ್ಯಾಣುವನ್ನು ಪಡೆಯಲಾಗುತ್ತದೆ.

ರೋಗಿಗಳು ತಮ್ಮ ವೈದ್ಯಕೀಯ ಸಮಸ್ಯೆಯನ್ನು ಸಂಪೂರ್ಣ ಅರ್ಥ ಮಾಡಿಕೊಂಡಾಗ ಹಾಗೂ ಅದಕ್ಕೆ ಒದಗಿಸಬಹುದಾದ ಚಿಕಿತ್ಸೆಗಳ ಇತಿಮಿತಿಗಳನ್ನು ತಿಳಿದುಕೊಂಡಾಗ ಈಗಿನ ವೈದ್ಯರು ಅತ್ಯಂತ ನಿರಾಳರಾಗಿ ಉತ್ತಮ ಚಿಕಿತ್ಸೆಯನ್ನು ಒದಗಿಸುವುದು ಸಾಧ್ಯವಾಗು ತ್ತದೆ. ಫ‌ಲಿತಾಂಶಗಳು ಯಾವಾಗಲೂ ಖಚಿತ ವಾಗಿ ರುವುದಿಲ್ಲ ಮತ್ತು ಇಂದಿನ ವೈದ್ಯರು ಇಂತಹ ಅನಿಶ್ಚಿತತೆಗಳನ್ನು ತಮ್ಮ ರೋಗಿಗಳ ಜತೆಗೆ ಮುಕ್ತವಾಗಿ ಹಂಚಿಕೊಳ್ಳಬೇಕಿದೆ. ಈ ಮೂಲಕ ವೈದ್ಯಕೀಯ ಚಿಕಿತ್ಸೆಯಲ್ಲಿ ವಿವೇಚನೆಯುಕ್ತ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ.

ಐವಿಎಫ್ ಮತ್ತು ಐಸಿಎಸ್‌ಐ ಇತ್ಯಾದಿಗಳ ಮೂಲಕ ಚಿಕಿತ್ಸೆಯನ್ನು ನಡೆಸಲಾದ ತಿಂಗಳಿನಲ್ಲಿ ಗರ್ಭಧಾರಣೆಯ ಸಾಧ್ಯತೆಯನ್ನು ಸುಮಾರು ನಾಲ್ಕೈದು ಪಟ್ಟು ಹೆಚ್ಚಿಸಬಹುದಾಗಿದೆ. ಇದರಿಂದ ಗರ್ಭಧಾರಣೆ ಚಿಕಿತ್ಸೆ ಇಲ್ಲದಿದ್ದರೆ ಏನಾಗುತ್ತಿತ್ತು ಎಂಬುದು ಹಾಗೂ ಅದೃಷ್ಟವನ್ನು ಆಧರಿಸಿದೆ. ಪ್ರತೀ ನಿರ್ಧಾರವೂ ಅಗತ್ಯ, ಆತಂಕ ಮತ್ತು ಪರ್ಯಾಯ ಸಾಧ್ಯತೆಗಳನ್ನು ಆಧರಿಸಿ ವ್ಯಕ್ತಿಗತವಾಗಿರಬೇಕು. ಇದು ಸಂಗಾತಿ, ಕುಟುಂಬ ಮತ್ತು ನಿಮ್ಮ ವೈದ್ಯರ ಜತೆಗೂಡಿ ತೆಗೆದುಕೊಳ್ಳಬೇಕಾದ ನಿರ್ಧಾರವಾಗಿದೆ.

ಇಷ್ಟೆಲ್ಲ ಇದ್ದರೂ ಆಧುನಿಕ ತಂತ್ರಜ್ಞಾನವು ಸಂತಾನಶಕ್ತಿ ಹೀನತೆಯನ್ನು ನಿಭಾಯಿಸುವ ವಿಧಾನಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ ಮತ್ತು ಅನೇಕ ದಂಪತಿಗೆ ಮಕ್ಕಳನ್ನು ಪಡೆಯಲು ಸಹಾಯ ಮಾಡಿದೆ.

ಡಾ| ಪ್ರತಾಪ್‌ ಕುಮಾರ್‌

ಪ್ರೊಫೆಸರ್‌ ಮತ್ತು ಹೆಡ್‌, ರಿಪ್ರೊಡಕ್ಟಿವ್‌ ಮೆಡಿಸಿನ್‌ ಮತ್ತು ಸರ್ಜರಿ ವಿಭಾಗ

ಕೆಎಂಸಿ ಕಾಲೇಜು ಮತ್ತು ಆಸ್ಪತ್ರೆ,

ಮಾಹೆ, ಮಣಿಪಾಲ

 

Advertisement

Udayavani is now on Telegram. Click here to join our channel and stay updated with the latest news.

Next