ಕಲಬುರಗಿ: ಏನ್ರಿ ಸರಕಾರಿ ಆಸ್ಪತ್ರೆಗೆ ಬರೋ ಜನರನ್ನು ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡ್ತಿರಿ? ಆರೋಗ್ಯ ಕವಚ(108) ವಾಹನಗಳು ಖಾಸಗಿ ಆಸ್ಪತ್ರೆಗೆ ಕಡೆಗೆ ಹೆಚ್ಚು ಓಡ್ತವಲ್ಲ? ಇನ್ನೂ ಸರಕಾರಿ ವೈದ್ಯರು ಕರ್ತವ್ಯದ ವೇಳೆಯಲ್ಲಿ ತಮ್ಮ ಕ್ಲಿನಿಕ್‌ಗಳಲ್ಲಿ ಇರ್ತಾರೆ. ದೊಡ್ಡನಾಚಿಕೆಗೇಡಿನ ಸಂಗತಿ ಎಂದರೆ ಸರಕಾರಿ ಆಸ್ಪತ್ರೆಗೂ ಸಚಿವ, ಶಾಸಕರ ರೆಕೆoಡ್ ಬೇಕೇನ್ರಿ? ಹೀಗೆ ಇಡೀ ಆರೋಗ್ಯ ಇಲಾಖೆ ಸಂಪೂರ್ಣ ವಿಚಾರಣೆ ಮಾಡಿದವರು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಪ್ರಿಯಾಂಕ ಖರ್ಗೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕರ್ನಾಟಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಇಬ್ಬರು ಸಚಿವರು ಆರೋಗ್ಯ ಇಲಾಖೆ ಕಾರ್ಯ ಚಟುವಟಿಕೆಗಳ ಪರಿಶೀಲನೆ ಮಾಡಿದರು. ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರು ಅಪೌಷ್ಟಿಕತೆಯಿಂದ ಹಿಡಿದು ಹಸುಗೂಸುಗಳು, ಗರ್ಭಿಣಿ, ಬಾಣಂತಿಯರ ಸಾವುಗಳು, ಖಾಸಗಿ ಹಾಗೂ ಸರಕಾರಿ ದವಾಖಾನೆಗಳಲ್ಲಿ ನಡೆಯುವ ಹೆರಿಗೆ, ಮಡಿಲು ಕಿಟ್ ವಿತರಣೆ, ಅಂಧತ್ವ ನಿವಾರಣೆ, ಮಲೇರಿಯಾ ನಿರ್ಮೂನೆ, ಡೆಂಘಿ ಜ್ವರ ಹತೋಟಿ, ವೈದ್ಯರ ಕಾರ್ಯವೈಖರಿ, ತಾಲೂಕು ವೈದ್ಯಾಧಿಕಾರಿಗಳ ಹಾಜರಾತಿ, ನರ್ಸ್, ಆಶಾ ಕಾರ್ಯಕರ್ತೆಯರ ಕರ್ತವ್ಯ ನಿರ್ವಹಣೆ ಕುರಿತು ಸಮಗ್ರವಾಗಿ ವಿವರ ಪಡೆದರು.
ಬಹುತೇಕ ಹೆರಿಗೆಗಳು ಖಾಸಗಿ ದವಾಖಾನೆಗಳಲ್ಲಿಯೇ ಆಗುತ್ತಿವೆಯಲ್ಲ ಏಕೆ. ಯಾಕೆ ಸರಕಾರಿ ಆಸ್ಪತ್ರೆಯಲ್ಲಿ ಸೌಲಭ್ಯ, ಸೌಕರ್ಯಗಳಿಲ್ಲವೇನು? ಯಾಕೆ ಹೀಗಾಗುತ್ತಿದೆ. ಏನು ನಡೆಯುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಶಿವರಾಜ ಸಜ್ಜನಶೆಟ್ಟಿ ಮತ್ತು ಜಿಲ್ಲಾ ಶಸ್ತ್ರಜ್ಞ ಡಾ| ಜೋಶಿ ಅವರನ್ನು ಪ್ರಶ್ನಿಸಿದರು. ಉಭಯ ಅಧಿಕಾರಿಗಳು ಉತ್ತರ ನೀಡಿ, ಪ್ರತಿ ತಿಂಗಳು 800 ಹೆರಿಗಳು ನಡೆಯುತ್ತಿವೆ. ತಾಲೂಕುಗಳಿಂದಲೂ ಜಿಲ್ಲಾ ಕೇಂದ್ರಕ್ಕೆ ಹೆಚ್ಚು ಪ್ರಕರಣಗಳು ಬರುತ್ತವೆ. ಆಯಾ ತಾಲೂಕು ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಶೇ.50ರಷ್ಟು ಹೆರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತದೆ ಎಂದರು.
ತಾಲೂಕಲ್ಲಿ ಎನ್‌ಐಸಿಯು: 27 ಪ್ರಸವ ಸಂದರ್ಭದಲ್ಲಿ ನಡೆದ ಸಾವುಗಳ ಕುರಿತು ಕಳವಳ ವ್ಯಕ್ತಪಡಿಸಿದ ಸಚಿವ ಪಾಟೀಲ, ಇನ್ನು ಮುಂದೆ ಇಂತಹ ಸಾವು ತಪ್ಪಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕು ಕೇಂದ್ರದಲ್ಲಿ ನವಜಾತ ಶಿಶುಗಳ ತುರ್ತು ನಿಗಾ ಘಟಕ (ಎನ್‌ಐಸಿಯು) ಆರಂಭಿಸಲಾಗುವುದು. ಅದಕ್ಕಾಗಿ ಬೇಕಾಗುವ ವೆಚ್ಚ ಹಾಗೂ ಉಪಕರಣಗಳ ಪೂರ್ಣ ಕ್ರಿಯಾ ಯೋಜನೆ ಸಿದ್ಧಪಡಿಸಿ ಆದಷ್ಟು ಬೇಗ ಸಲ್ಲಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸಜ್ಜನಶೆಟ್ಟಿ ಅವರಿಗೆ ಸೂಚಿಸಿದರು.
ಹೆರಿಗೆ ನಂತರ ಬಾಣಂತಿಯರಿಗೆ ಮಡಿಲು ಕಿಟ್‌ನ್ನು ಸರಿಯಾಗಿ ವಿತರಿಸದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಪಾಟೀಲ, ಎಷ್ಟು ಕಿಟ್ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ಪಡೆದರು. ಈ ವೇಳೆ ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಅರವಿಂದ ಚವ್ಹಾಣ ಧನಿಗೂಡಿಸಿ, ಜಿಲ್ಲೆಯಲ್ಲಿ ಮಡಿಲು ಕಿಟ್‌ಗಳ ಕೊರತೆ ಇದೆ. ಅವುಗಳನ್ನು ಬಾಣಂತಿಯರಿಗೆ 3 ತಿಂಗಳ ಬಳಿಕ ನೀಡಲಾಗುತ್ತಿದೆ ಎಂದು ದೂರಿದರು. ಪ್ರತಿಯಾಗಿ ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್, ಇಲ್ಲ.
ಜಿಲ್ಲೆಯಲ್ಲಿ ಕಿಟ್‌ಗಳ ಕೊರತೆ ಇಲ್ಲ ಎಂದಾಗ, ಚಿಂಚೋಳಿ ಶಾಸಕ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ, ನಮ್ಮ ತಾಲೂಕಿನಲ್ಲೂ ಕಿಟ್‌ಗಳು ಸಮಯಕ್ಕೆ ಸರಿಯಾಗಿ ವಿತರಣೆ ಆಗುತ್ತಿಲ್ಲ. ತಾಲೂಕು ವೈದ್ಯಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರುವುದೇ ಇಲ್ಲ ಎಂದು ದೂರಿದರು. ಸಚಿವ ಪಾಟೀಲ ಮಾತನಾಡಿ, ಇನ್ನು ಮುಂದೆ ತಾಲೂಕು ಕೇಂದ್ರಗಳಲ್ಲಿನ ವೈದ್ಯರು ಕರ್ತವ್ಯದ ವೇಳೆ ಕೇಂದ್ರ ಸ್ಥಾನದಲ್ಲಿಯೇ ಇರಬೇಕು.
ಅಲ್ಲದೆ, ಅವರ ವಸತಿಗೃಹ ಹಾಗೂ ಇತರೆ ಸೌಕರ್ಯಗಳು ಕುರಿತು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಹೇಳಿದರಲ್ಲದೆ, ಕಿಟ್ ಮುಟ್ಟಿವೆಯೋ ಇಲ್ಲ ಎಂದು ಅಧಿಕಾರಿಗಳು ನೇರವಾಗಿ ಬಾಣಂತಿ ಕುಟುಂಬದ ಸದಸ್ಯರೊಂದಿಗೆ ಮಾತಾಡಿ ಮಾಹಿತಿ ಸಂಗ್ರಹಿಸಬೇಕು. ತಪ್ಪಿದ್ದರೆ ಶಿಕ್ಷೆಯಾಗಲಿ ಎಂದರು. ಶಾಸಕ ಬಿ.ಆರ್. ಪಾಟೀಲ, ಎಂಎಲ್‌ಸಿ ಬಿ.ಜಿ. ಪಾಟೀಲ, ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿರಸಗಿ ಇದ್ದರು.