ಸಿಂದಗಿ: ವಿದ್ಯಾರ್ಥಿಗಳು ಶೈಕ್ಷಣಿಕ ಅಕಾಡೆಮಿ ಸಾಧನೆ ಮಾಡಿದರೆ ಸಾಲದು, ಅದರ ಜತೆಗೆ ಬದುಕಿನ ಓದನ್ನು ಅರ್ಥೈಸಿಕೊಳ್ಳಬೇಕು ಎಂದು ಸಮರ್ಥ ವಿದ್ಯಾ ವಿಕಾಸ ವಿವಿಧೋದ್ದೇಶಗಳ ಸಂಸ್ಥೆ ಅಧ್ಯಕ್ಷ ಆರ್.ಡಿ. ಕುಲಕರ್ಣಿ ಹೇಳಿದರು.
ಸಮರ್ಥ ವಿದ್ಯಾ ವಿಕಾಸ ವಿವಿಧೋದ್ದೇಶಗಳ ಸಂಸ್ಥೆಯ ಪ್ರೇರಣಾ ಪಬ್ಲಿಕ್ ಆಂಗ್ಲ್ ಮಾಧ್ಯಮ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಿ ಅವರು ಮಾತನಾಡಿದರು.
ಒಬ್ಬ ವ್ಯಕ್ತಿಯ ಸ್ವಭಾವ, ನಡವಳಿಕೆ, ಸಂದರ್ಭಕ್ಕೆ ಅನುಗುಣವಾಗಿ ಪ್ರತಿಕ್ರಿಯೆ ಹೀಗೆ ಎಲ್ಲವನ್ನೂ ತಿಳಿದುಕೊಳ್ಳಬೇಕು. ಇದನ್ನು ನಿತ್ಯದ ಜೀವನದಲ್ಲಿ ದಿನದಿಂದ ದಿನಕ್ಕೆ ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗಲಿದೆ ಎಂದರು.
ಶಾಲೆಯ ಶಿಕ್ಷಕರ ಸತತ ಶ್ರಮ ಮತ್ತು ವಿದ್ಯಾರ್ಥಿಗಳ ಪರಿಶ್ರಮದಿಂದ 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಶೇ. 100ರಷ್ಟಾಗಿದೆ. ಅಲ್ಲದೇ ಅವರಲ್ಲಿ 46 ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಈ ಪುರಸ್ಕಾರ ಕಾರ್ಯಕ್ರಮ ಮುಂಬರುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.
ಮುಖ್ಯೋಪಾಧ್ಯಾಯಿನಿ ಸಾವಿತ್ರಿ ಅಸ್ಕಿ ಮಾತನಾಡಿ, ಸಂಸ್ಥೆ ಆಡಳಿತ ಮಂಡಳಿಯ ಸಹಕಾರ, ಮಾರ್ಗದರ್ಶನದಿಂದ ಶಾಲೆ ಅಭಿವೃದ್ಧಿ ಹೊಂದುತ್ತಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಬೋಧನೆ ಜೊತೆಗೆ ಪಠ್ಯಪೂರಕ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿತವಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ 46 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡಲಾಯಿತು. ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.