ಕುಂದಾಪುರ: ಶಾಸ್ತ್ರೀ ಸರ್ಕಲ್ ಬಳಿಯಿರುವ ಮೇಲ್ಸೆತುವೆ ಕಾಮಗಾರಿ ಮಾಚ್ ಅಂತ್ಯಕ್ಕೆ ಹಾಗೂ ಬಸ್ರೂರು ಮೂರುಕೈ ಬಳಿಯಿರುವ ಅಂಡರ್‌ಪಾಸ್ ಕಾಮಗಾರಿ ಮೇ ಅಂತ್ಯದೊಳಗೆ ಪೂರ್ಣ ಗೊಳ್ಳುವ ಭರವಸೆಯನ್ನು ಸಂಬಂಧಪಟ್ಟ ಅಧಿಕಾರಿಗಳು, ಇಂಜಿನಿಯರ್‌ಗಳು ಕೊಟ್ಟಿದ್ದಾರೆ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಅವರು ಶನಿವಾರ ಬಸ್ರೂರು ಮೂರು ಕೈ ಬಳಿ ನಿರ್ಮಾಣವಾಗುತ್ತಿರುವ ಅಂಡರ್‌ಪಾಸ್ ಕಾಮಗಾರಿಯನ್ನು ಕುಂದಾಪುರದ ಹೆದ್ದಾರಿ ಹೋರಾಟ ಸಮಿತಿಯ ಪದಾಧಿಕಾರಿಗಳೊಂದಿಗೆ ವೀಕ್ಷಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ಇನ್ನು ಕೋಡಿಗೆ ವಿನಾಯಕದ ಬಳಿ ಸಂಪರ್ಕ ರಸ್ತೆ ಕಲ್ಪಿಸುವ ಬಗ್ಗೆ ಈಗಾಗಲೇ ಸಂಸದರ ಗಮನಕ್ಕೆ ತರಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡ ಈ ಸಂಬಂಧ ಗಮನವಹಿಸಲಿದ್ದಾರೆ. ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿದೆ. ನಿಗದಿತ ಅವಧಿಯೊಳಗೆ ಮುಗಿ ಯುವ ಸಾಧ್ಯತೆಯಿದೆ ಎಂದರು.
ಈ ಸಂದರ್ಭದಲ್ಲಿ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಕೆಂಚನೂರು ಸೋಮಶೇಖರ್ ಶೆಟ್ಟಿ ಮಾತನಾಡಿ, ಅಂಡರ್‌ಪಾಸ್ ಹಾಗೂ ಮೇಲ್ಸೆತುವೆ ಕಾಮಗಾರಿ ಭರದಿಂದ ಸಾಗುತ್ತಿದೆ. ಆದರೆ ಇನ್ನೂ ಕೂಡ ಕುಂದಾಪುರದ ಜನರಿಗೆ ಕೆಲವೊಂದು ಅಡೆ – ತಡೆಗಳಿದ್ದು, ಇದನ್ನು ನಿವಾರಿಸಬೇಕು ಎಂದವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹೆದ್ದಾರಿ ಹೋರಾಟ ಸಮಿತಿಯ ಕಿಶೋರ್ ಕುಮಾರ್, ರಾಜೇಶ್ ಕಾವೇರಿ, ಜಿ.ಕೆ. ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.
ಮಾ.7ಕ್ಕೆ ರೈಲು ಸಂಚಾರ
ಜಯಪ್ರಕಾಶ್ ಹೆಗ್ಡೆ ಮಾತನಾಡಿ ವಾಸ್ಕೋ – ಕುಂದಾಪುರ -ಉಡುಪಿ – ಬೆಂಗಳೂರು ಹೊಸ ರೈಲು ಸಂಚಾರ ಮಾ. 7 ರಂದು ಆರಂಭ ಗೊಳ್ಳಲಿದೆ. ಆ ದಿನ ಬೆಳಗ್ಗೆ 9 ಗಂಟೆಗೆ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿಯವರು ಚಾಲನೆ ನೀಡಲಿ ದ್ದಾರೆ ಎಂದರು.