ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕಿಳಿದಿದೆ. ಬತ್ತಿ ಹೋಗಿರುವ ಕೊಳವೆ ಬಾವಿಗಳಿಗೆ ಮರುಜೀವ ನೀಡುವ ಸಂಜೀವಿನಿ ಇಂಗು ಗುಂಡಿ ಯೋಜನೆಯು ಅನುಷ್ಠಾನಕ್ಕೆ ಬಂದರೆ ಮಾತ್ರ ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸುತ್ತದೆ ಹೊರತು, ಬೇರೆ ದಾರಿ ಇಲ್ಲವಾಗಿದೆ.
ಭೀಕರ ಬರದ ಛಾಯೆ ತಾಲೂಕಿನಲ್ಲಿ ಮನೆ ಮಾಡಿದ್ದು, ವರ್ಷದಿಂದ ವರ್ಷಕ್ಕೆ ಅಂತರ್ಜಲ ಪಾತಾಳಕ್ಕಿಳಿಯುತ್ತಿದೆ. ಸಾವಿರ ಆಡಿ ಕೊಳವೆ ಬಾವಿ ಕೊರೆದರೂ ನೀರು ಬರುತ್ತಿಲ್ಲ. ಬಿಸಿಲಿಗೆ ದಿನದಿಂದ ದಿನಕ್ಕೆ ಬಹುತೇಕ ಕೊಳವೆ ಬಾವಿ ಬತ್ತಿ ಹೋಗುತ್ತಿದೆ. ಅಂತರ್ಜಲ ಕುಸಿತದಲ್ಲಿ ರಾಜ್ಯದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ಎರಡನೇ ಸ್ಥಾನದಲ್ಲಿ ಇದೆ. ತಾಲೂಕಿನಲ್ಲಿ ಜಲಕ್ಷಾಮ ಆವರಿಸಿಕೊಂಡು ರೈತರನ್ನು ಕಂಗಾಲು ಮಾಡಿದೆ.
ಮಳೆ ನೀರು ಸಂಗ್ರಹಿಸಿ: ತಾಲೂಕಿನಲ್ಲಿ ಸರ್ಕಾರದ ಅಧಿನದಲ್ಲಿ ಕುಡಿಯುವ ನೀರಿನ ಸುಮಾರು 1475 ಕೊಳವೆ ಬಾವಿಗಳು ಇದೆ. ಇವುಗಳ ಪೈಕಿ ಸುಮಾರು 650 ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ. 2 ಲಕ್ಷ ಜನಸಂಖ್ಯೆ ಇರುವ ತಾಲೂಕಿನಲ್ಲಿ ನೀರಿನ ಹಾಹಕಾರ ಹೆಚ್ಚಾಗಿದ್ದು, ಸಾವಿರಾರು ಆಡಿ ಕೊಳವೆ ಬಾವಿ ಕೊರೆಸುವ ಮುನ್ನ ಬತ್ತಿ ಹೋಗಿರುವ ಕೊಳವೆ ಬಾವಿಗಳಿಗೆ ಮಳೆ ನೀರು ಸಂಗ್ರಹವಾಗುವಂತೆ ಮಾಡಿದರೆ, ಅಂತರ್ಜಲ ಮಟ್ಟ ಸುಧಾರಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ನೀರು ಇಂಗಿಸುವ ಪದ್ಧತಿ ಆರಂಭಿಸಿ: ತಾಲೂಕಿನಲ್ಲಿ ಕಳೆದ 15 ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷ 450ರಿಂದ 750 ಮಿ.ಮಿ ಮಳೆಯಾಗುತ್ತಿದೆ. ಆದರೆ, ಮಳೆ ನೀರನ್ನು ಸಂಗ್ರಹಿಸುವಲ್ಲಿ ವಿಫಲವಾದ ಕಾರಣದಿಂದ ಇಂದು ಭೀಕರ ಬರ ಬಂದಿದೆ. ಪ್ರತಿ ಕೊಳವೆ ಬಾವಿಗಳಿಗೂ ಮಳೆ ಬಂದ ವೇಳೆ ನೀರನ್ನು ಇಂಗಿಸುವ ಪದ್ಧತಿ ಆರಂಭವಾಗಬೇಕಿದೆ. ನೀರು ಇಂಗಿಸುವ ಕ್ರಮವನ್ನು ಅನುಷ್ಠಾನಕ್ಕೆ ತಂದರೆ ಮಾತ್ರ ಮುಂದಿನ ದಿನಗಳಲ್ಲಿ ತಾಲೂಕಿನ ಅಂತರ್ಜಲ ಮಟ್ಟ ಸುಧಾರಿಸುತ್ತದೆ.
ನೀರು ಇಂಗಿಸುವುದು ಹೇಗೆ?: 8 ಆಡಿ ಆಗಲ 10 ಆಡಿ ಆಳದ ಕೊಳವೆ ಬಾವಿ ಹೊಂಡಕ್ಕೆ 180 ರಂಧ್ರಗಳಿರುವ ಕೇಸಿಂಗ್ ಪೈಪ್ ಆಳವಡಿಸಿಕೊಳ್ಳಬೇಕು. ಇದಕ್ಕೆ ನೈಲನ್ ಮೆಷ್ ಮರಳು ಹೊದಿಕೆಯ ಮೂರು ಫಿಲ್ಟರ್‌ಗಳನ್ನು ಆಳವಡಿಸಬೇಕು. 5 ಆಡಿ ಎತ್ತರದಷ್ಟು ದಪ್ಪ ಕಲ್ಲು, 40 ಎಂಎಂ ಜಲ್ಲಿಕಲ್ಲುನ್ನು ಒಂದು ಆಡಿ ಎತ್ತರಕ್ಕೆ ತುಂಬಬೇಕು. ಇದರ ಮೇಲ್ಬಾಗಕ್ಕೆ 20 ಎಂಎಂ ಜಲ್ಲಿಕಲ್ಲನ್ನು 1 ಆಡಿಗಳಷ್ಟು ತುಂಬಬೇಕು. ಮೇಲ್ಬಾಗದಲ್ಲಿ ಗೊಜ್ಜುಕಲ್ಲು ತುಂಬಬೇಕು. ಅನಂತರ ಮಳೆ ನೀರನ್ನು ನೇರವಾಗಿ ಇಂಗುಗುಂಡಿಗೆ ತುಂಬಿಸಬಹುದು. ಹೀಗೆ ಮಾಡುವುದರಿಂದ ಕೊಳವೆ ಬಾವಿ ಸುತ್ತಲೂ 1 ಕಿ.ಮೀ ವ್ಯಾಪ್ತಿಯ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ. ಇದರಲ್ಲಿ 15 ಪ್ರಕಾರದ ಮಾದರಿಗಳಿವೆ. 20ರಿಂದ 40 ಸಾವಿರ ರೂ. ವೆಚ್ಚವಾಗಲಿದೆ.
ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಬತ್ತಿ ಹೋಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಾಲೂಕಿನಲ್ಲಿ ನೀರು ಇಂಗಿಸುವ ಪದ್ಧತಿಯನ್ನು ಜಾರಿಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಕುಸಿಯುವುದರಲ್ಲಿ ಅನುಮಾನವಿಲ್ಲ.
● ಚೇತನ್ ಪ್ರಸಾದ್