Advertisement

ಜಿಲ್ಲೆಯಲ್ಲಿ ಅಂತರ್ಜಲ 1 ಮೀ. ಕುಸಿತ:  ಹಿಂಗಾರು ಮಳೆ ಕೊರತೆ ಕುಸಿತಕ್ಕೆ ಕಾರಣ

10:19 PM Dec 10, 2022 | Team Udayavani |

ಉಡುಪಿ: ಜಿಲ್ಲೆಯ ಅಂತರ್ಜಲ ಮಟ್ಟದಲ್ಲಿ ಪ್ರಸಕ್ತ ಸಾಲಿನಲ್ಲಿ ಕುಸಿತ ಕಂಡಿರುವುದು ಕೊಳವೆ ಬಾವಿಗಳ ಜಲಮಟ್ಟದ ಅಧ್ಯಯನದಿಂದ ತಿಳಿದುಬಂದಿದೆ.

Advertisement

ಕೊಳವೆ ಬಾವಿಗಳ ಜಲಮಟ್ಟ ಕಳೆದ ವರ್ಷಕ್ಕೆ ಹೋಲಿಸಿದರೆ ಅಂತರ್ಜಲದ ಮಟ್ಟ ಸುಮಾರು 1 ಮೀ.ನಷ್ಟು ಕುಸಿತವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಮುಂದಿನ ದಿನಗಳಲ್ಲಿ ನೀರಿನ ಮಿತ ಬಳಕೆ, ಜಲಮೂಲಗಳ ಸಂರಕ್ಷಣೆಯಾಗದಿದ್ದರೆ ಸಾಕಷ್ಟು ನೀರಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಭೂವಿಜ್ಞಾನಿಗಳು ಎಚ್ಚರಿಸಿದ್ದಾರೆ.
2021ರ ಅಕ್ಟೋಬರ್‌ನಲ್ಲಿ 4.59 ಮೀ. 2022ರ ಅಕ್ಟೋಬರ್‌ನಲ್ಲಿ 5.73 ಮೀ. ಅಂತರ್ಜಲಮಟ್ಟವಿತ್ತು. 2021ರ ನವೆಂಬರ್‌ನಲ್ಲಿ 5.73 ಮೀ. ಅಂತರ್ಜಲ ಮಟ್ಟವಿದ್ದರೇ 2022ರ ನವೆಂಬರ್‌ ತಿಂಗಳಲ್ಲಿ 6.71 ಮೀ. ಜಲಮಟ್ಟವಿದೆ. ಒಂದು ಮೀಟರ್‌ವರೆಗೆ ಅಂತರ್ಜಲ ಮಟ್ಟ ಕುಸಿದಿದೆ. ಹಿಂಗಾರಿನಲ್ಲಿ ಮಳೆ ಉತ್ತಮವಾಗದಿರುವುದು ಇದಕ್ಕೆ ಮುಖ್ಯ ಕಾರಣ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 2022ರ ಜನವರಿ, ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿ ತೀರ ಕನಿಷ್ಠ ಪ್ರಮಾಣದಲ್ಲಿ ಮಳೆಯಾಗಿದೆ. ಎಪ್ರಿಲ್‌, ಮೇ ತಿಂಗಳಲ್ಲಿ ಅಂತರ್ಜಲ ತೀರ ತಳಮಟ್ಟದಲ್ಲಿರುತ್ತದೆ. ಅಲ್ಲದೆ ನೀರಿನ ಅನಿಯಮಿತ ಬಳಕೆ ಜತೆಗೆ ಜಲಮರುಪೂರಣ ವ್ಯವಸ್ಥೆಯಾಗದಿರುವುದು ಪ್ರಮುಖ ಕಾರಣವಾಗಿದೆ.

ಉಡುಪಿಯಲ್ಲಿ ಮುಂಗಾರು ಮಳೆ ಅಧಿಕವಾದರೂ ಇಲ್ಲಿನ ಭೌಗೋಳಿಕತೆಗೆ ಅನುಸಾರವಾಗಿ ಜಲ ಮೂಲಕ್ಕೆ ಅದರಿಂದ ಪ್ರಯೋಜನವಿಲ್ಲ. ಈ ಪರಿಸರದಲ್ಲಿ ಮಳೆಯ ತೀವ್ರತೆಗಿಂತಲೂ ಡಿಸೆಂಬರ್‌, ಜನವರಿ, ಫೆಬ್ರವರಿ ತಿಂಗಳಲ್ಲಿ ಆಗುವ ಸಣ್ಣಸಣ್ಣ ಮಳೆ ಅಂತರ್ಜಲ ವೃದ್ಧಿಗೆ ಸಹಕಾರಿ ಎನ್ನುತ್ತಾರೆ ತಜ್ಞರು.

ಅಂತರ್ಜಲ ಮಟ್ಟ ಮಾಪನ ಹೇಗೆ ?
ಅಂತರ್ಜಲ ನಿರ್ದೇಶನಾಲಯದ ಭೂ ವಿಜ್ಞಾನಿಗಳು ಅಂತರ್ಜಲ ಮಟ್ಟದ ಅಳತೆಯನ್ನು ಪ್ರತೀ ತಿಂಗಳು “ವಾಟರ್‌ ಲೆವೆಲ್‌ ಇಂಡಿಕೇಟರ್‌’ ಸಾಧನದಿಂದ ಅಂತರ್ಜಲ ಮಟ್ಟ ಮಾಪನ ನಡೆಸ ಲಾಗುತ್ತದೆ. ಜಿಲ್ಲೆಯ 7 ತಾಲೂಕಿನಲ್ಲಿ 16 ಕೊಳವೆ ಬಾವಿ, 26 ತೆರೆದ ಬಾವಿ ಸಹಿತ ಒಟ್ಟು 42 ಬಾವಿಗಳಿದ್ದು, ಇದರಲ್ಲಿ ಆಯ್ಕೆ ಮಾಡಿ ಅಧ್ಯಯನ ನಡೆಸಲಾಗುತ್ತದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

Advertisement

ನೀರಿನ ಮಿತ ಬಳಕೆಗೆ ಒತ್ತು ನೀಡಿ
ಮಳೆಯ ತೀವ್ರತೆಗಿಂತಲೂ ಆಗಾಗ ಮಳೆಯಾಗುವುದರಿಂದ ಅದರಲ್ಲಿಯೂ ಹಿಂಗಾರಿನಲ್ಲಿ ಉತ್ತಮ ಮಳೆಯಾದರಲ್ಲಿ ನೀರಿನ ಸಮಸ್ಯೆ ಇಲ್ಲ.ಪ್ರಸ್ತುತ ಸಾಲಿನಲ್ಲಿ ಹಿಂಗಾರು ಮಳೆ ಪ್ರಮಾಣ ಕಡಿಮೆಯಾಗಿರುವುದು ಅಂತರ್ಜಲ ಮಟ್ಟ ಕುಸಿತವಾಗಲು ಕಾರಣ. ಅಂತರ್ಜಲ ಬಳಕೆ ಮತ್ತು ಪೂರೈಕೆ ನಡುವಿನ ವ್ಯತ್ಯಾಸ ಆಗಾಧವಾಗಿದ್ದು, ಬಳಕೆ ಮಾಡುವಷ್ಟು ನೀರು ಅಷ್ಟೇ ಪ್ರಮಾಣದಲ್ಲಿ ಭೂಮಿಗೆ ಮರು ಪೂರಣ ವ್ಯವಸ್ಥೆಯಾಗಬೇಕು. ನೀರಿನ ಮಿತ ಬಳಕೆಗೆ ಒತ್ತು ನೀಡಬೇಕು. ಜಲಮೂಲಗಳ ಸಂರಕ್ಷಣೆಯಾಗಬೇಕು.
– ಡಾ| ದಿನಕರ ಶೆಟ್ಟಿ, ಹಿರಿಯ ಭೂ ವಿಜ್ಞಾನಿಗಳು, ಅಂತರ್ಜಲ ನಿರ್ದೇಶನಾಲಯ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next