Advertisement

ದಕ್ಷಿಣ ಕನ್ನಡ-ಉಡುಪಿ ಖಾರ್‌ ಲ್ಯಾಂಡ್‌ ಯೋಜನೆ ವ್ಯಾಪ್ತಿಗೆ

08:19 PM Dec 27, 2022 | Team Udayavani |

ಸುವರ್ಣ ವಿಧಾನಸೌಧ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನು ಖಾರ್‌ ಲ್ಯಾಂಡ್‌’ ಯೋಜನೆ ವ್ಯಾಪ್ತಿಗೆ ತರಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

Advertisement

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ ಶಾಸಕ ಯು.ಟಿ. ಖಾದರ್‌ ಪ್ರಶ್ನೆಗೆ ಉತ್ತರಿಸಿದ ಸಚಿವರು, ಖಾರ್‌ ಲ್ಯಾಂಡ್‌ ಯೋಜನೆಯಡಿ ಈವರೆಗೆ ಉತ್ತರ ಕನ್ನಡ ಜಿಲ್ಲೆ ಮಾತ್ರ ಇತ್ತು. ಈಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನೂ ಸೇರಿಸಿಕೊಳ್ಳಲಾಗುವುದು ಎಂದರು.

ಖಾರ್‌ ಲ್ಯಾಂಡ್‌ ಯೋಜನೆಯನ್ನು ಈ ವರ್ಷ ವಿಸ್ತರಣೆ ಮಾಡಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಗೆ 300 ಕೋಟಿ ಬೇಕಾಗಬಹುದು. ಎರಡೂ ಜಿಲ್ಲೆಗಳಲ್ಲಿನ ನದಿ ಪ್ರದೇಶದ ವಿಸ್ತಾರ ಆಧರಿಸಿ ಖಾರ್‌ ಲ್ಯಾಂಡ್‌ ಯೋಜನೆ ಜಾರಿಗೆ ತರಲಾಗುವುದು ಎಂದು ಹೇಳಿದರು.

ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಯು.ಟಿ. ಖಾದರ್‌, ಅನುದಾನ ಹಂಚಿಕೆಯಲ್ಲಿ ನನ್ನ ಕ್ಷೇತ್ರಕ್ಕೆ ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಮಾಧುಸ್ವಾಮಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ ವಿವಿಧ 82 ಕಾಮಗಾರಿಗಳು ಮಂಜೂರಾಗಿದ್ದು, ಈ ಪೈಕಿ 26 ಕಾಮಗಾರಿಗಳು ಪ್ರಗತಿಯಲ್ಲಿವೆ. 28 ಕಾಮಗಾರಿಗಳು ಪ್ರಾರಂಭಿಸಬೇಕಾಗಿದೆ. ಬಾಕಿ 28 ಕಾಮಗಾರಿಗಳು ಟೆಂಡರ್‌ ಪ್ರಕ್ರಿಯೆಯಲ್ಲಿವೆ. ಪ್ರಸಕ್ತ ಸಾಲಿನಲ್ಲಿ ಮಂಜೂರಾದ ಒಟ್ಟು ಕಾಮಗಾರಿಗಳ ಅಂದಾಜು 65.87 ಕೋಟಿ ಆಗಿದ್ದು, 2022-23ನೇ ಸಾಲಿನಲ್ಲಿ ದಕ್ಷಿಣ ಕನ್ನಡ ವಿಧಾನಸಭಾ ಕ್ಷೇತ್ರಕ್ಕೆ 77.08 ಕೋಟಿ ಬಿಡುಗಡೆಯಾಗಿದೆ. ಅನುದಾನ ಹಂಚಿಕೆಯಲ್ಲಿ ಖಾದರ್‌ ಅವರ ಕ್ಷೇತ್ರಕ್ಕೆ ಅನ್ಯಾಯವಾಗಿದ್ದು ಅದನ್ನು ಸರಪಡಿಸಲಾಗುವುದು ಎಂದು ಭರವಸೆ ನೀಡಿದರು.

ನೀರು ಪೂರೈಕೆ ಯೋಜನೆ ಪ್ರಸ್ತಾಪ ಪರಿಶೀಲನೆಯಲ್ಲಿ- ಮಾಧುಸ್ವಾಮಿ
ಸುವರ್ಣ ವಿಧಾನಸೌಧ: ತುಂಗಾಭದ್ರಾ ನದಿಯ ನೀರನ್ನು ಸಿಂಧನೂರು ತಾಲೂಕಿನ ಚನ್ನಳ್ಳಿ, ಸಿದ್ದರಾಮಪುರ, ಹೂಡ ಮತ್ತು ಮಾವಿನಮಡು ಗ್ರಾಮಗಳ ಕೆರೆಗಳನ್ನು ತುಂಬಿಸುವ ಪ್ರಸ್ತಾವನೆ ಕರ್ನಾಟಕ ನೀರಾವರಿ ನಿಗಮದ ಪರಿಶೀಲನೆಯಲ್ಲಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

Advertisement

ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಜೆಡಿಎಸ್‌ ಶಾಸಕ ವೆಂಕಟರಾವ್‌ ನಾಡಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಾಗೂ ಉಪ ವಿತರಣಾ ಕಾಲುವೆ 31/6 ಮತ್ತು ವಿತರಣಾ ಕಾಲುವೆ 32ರ ನೀರಾವರಿ ವಂಚಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸುವ ಯೋಜನೆಯ 80.90 ಕೋಟಿ ರೂ.ಗಳ ವಿಸ್ತೃತ ಯೋಜನಾ ವರದಿಯು ಸಿದ್ಧವಾಗಿದೆ ಎಂದು ಹೇಳಿದರು.

ಸಿಂಧನೂರು ತಾಲೂಕಿನ ಚನ್ನಳ್ಳಿ, ಸಿದ್ದರಾಮಪುರ, ಹೂಡ ಮತ್ತು ಮಾನವಿನಮಡು ಗ್ರಾಮಗಳ ಕೆರೆಗಳಿಗೆ ಮತ್ತು ಬಾಧಿತ ಅಚ್ಚುಕಟ್ಟಿಗೆ ತುಂಗಾ ಭದ್ರಾ ನದಿಯಿಂದ ನೀರನ್ನು ಒದಗಿಸಲು 50 ಕೋಟಿ ರೂ. ಮೊತ್ತದ ಯೋಜನೆಯನ್ನು 2019-20ನೇ ಸಾಲಿನಲ್ಲಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಈಗ ವಿಸ್ತೃತ ಯೋಜನಾ ವರದಿ ನಿಗಮದ ಪರಿಶೀಲನೆಯಲ್ಲಿದೆ ಎಂದರು.

ಕಾಡುಗೊಲ್ಲರನ್ನು ಪ.ಪಂಗಡ ಪಟ್ಟಿಗೆ ಸೇರ್ಪಡೆ ವಿಚಾರ ಅಂತಿಮ ಹಂತದಲ್ಲಿ
ಸುವರ್ಣ ವಿಧಾನಸೌಧ: ಪ್ರಸ್ತುತ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರ್ಪಡೆಗೊಳಿಸುವ ವಿಚಾರ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದ್ದು, ಶೀಘ್ರ ಕಾರ್ಯಗತಗೊಳ್ಳುವ ನಿರೀಕ್ಷೆಯಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದರು.

ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಶಾಸಕರಾದ ಗೂಳಿಹಟ್ಟಿ ಶೇಖರ್‌, ಪೂರ್ಣಿಮಾ, ಅತ್ಯಂತ ಹಿಂದುಳಿದವರಾದ ಕಾಡುಗೊಲ್ಲ ಜನಾಂಗದವರು ಕುರಿಮೇಯಿಸಿಕೊಂಡು ಬದುಕುತ್ತಿದ್ದಾರೆ. ಅವರ ಹಳ್ಳಿಗಳೂ ಬಹಳ ಹಿಂದುಳಿದಿವೆ. ಇವರನ್ನು ಪ.ಪಂಗಡಕ್ಕೆ ಸೇರಿಸುವ ಪ್ರಸ್ತಾಪದ ಬಗ್ಗೆ ಕೇಂದ್ರ ಸಚಿವ ಅರ್ಜುನ್‌ ಮುಂಡಾ ಅವರನ್ನೂ ಭೇಟಿಯಾಗಿದ್ದೇವೆ. ಅವರು ಈ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಸಿಎಂ ನೇತೃತ್ವದಲ್ಲಿ ನಿಯೋಗ ತೆರಳಿ ಈ ಪ್ರಕ್ರಿಯೆಗೆ ವೇಗ ಕೊಡಬೇಕೆಂದು ಒತ್ತಾಯಿಸಿದರು.

2010ರಲ್ಲಿ ಮೈಸೂರು ವಿಶ್ವವಿದ್ಯಾಲಯದವರು ಕುಲಶಾಸ್ತ್ರ ಅಧ್ಯಯನ ನಡೆಸಿದ್ದು, ಅದರಂತೆ 2014ರಲ್ಲಿ ಪ.ಪಂಗಡಕ್ಕೆ ಸೇರಿಸಲು ಸರ್ಕಾರ ಶಿಫಾರಸು ಮಾಡಿದೆ. ಅಧ್ಯಯನದ ವರದಿ ಸಮರ್ಪಕವಾಗಿಲ್ಲ, ಪರಿಷ್ಕರಿಸಬೇಕೆಂದು ವರದಿಯನ್ನು ಹಿಂದೆ ಕಳುಹಿಸಲಾಗಿತ್ತು, ಹೀಗೆ ಮೂರು ಬಾರಿ ಪರಿಷ್ಕೃತ ವರದಿ ಕಳುಹಿಸಲಾಗಿದೆ. ಮುಂದಿನ ತಿಂಗಳು ಮುಖ್ಯಮಂತ್ರಿ ಮತ್ತು ನಾನು ಸಚಿವ ಮುಂಡಾ ಅವರನ್ನು ಭೇಟಿಯಾಗಿ ಮತ್ತೆ ಒತ್ತಾಯಿಸುವುದಾಗಿ ಮಾಧುಸ್ವಾಮಿ ಉತ್ತರಿಸಿದರು. ಕಾಡುಗೊಲ್ಲರಲ್ಲಿ ಆದಿವಾಸಿಗಳ ಎಲ್ಲಾ ಲಕ್ಷಣಗಳೂ ಇರುವುದರಿಂದ ಅವರು ಪ.ಪಂಗಡಕ್ಕೆ ಸೇರಿಸಲು ಅತ್ಯಂತ ಅರ್ಹರಾಗಿರುತ್ತಾರೆ ಎಂದೂ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next