Advertisement

ಮಧ್ಯರಾತ್ರಿ ಮಿಶನ್‌ ಕಾಶ್ಮೀರ: ಮೆಹಬೂಬಾ,ಒಮರ್‌ ಗೃಹ ಬಂಧನ

05:21 PM Aug 05, 2019 | Sriram |

ಹೊಸದಿಲ್ಲಿ/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ರವಿವಾರ ತಡರಾತ್ರಿ ನಡೆದ ಬೆಳವಣಿಗೆಯಲ್ಲಿ ಪ್ರಮುಖ ರಾಜಕೀಯ ನಾಯಕರಾದ ಮೆಹಬೂಬಾ ಮುಫ್ತಿ, ಒಮರ್‌ ಅಬ್ದುಲ್ಲಾ, ಸಜ್ಜದ್‌ ಲೋನ್‌, ಶಾಸಕ ಎಂ.ವೈ. ತಾರಿಗಾಮಿ, ಉಸ್ಮಾನ್‌ ಮಜೀದ್‌ ಸಹಿತ ಪ್ರಮುಖರನ್ನು ಗೃಹ ಬಂಧನಕ್ಕೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ತಮ್ಮನ್ನು ಗೃಹ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಒಮರ್‌ ಟ್ವೀಟ್‌ ಮಾಡಿದ್ದರೂ, ಅದನ್ನು ಅಧಿಕೃತವಾಗಿ ಖಚಿತಪಡಿಸಲಾಗಿಲ್ಲ. ಬೆಳವಣಿಗೆಗೆ ಮುನ್ನ ಟ್ವೀಟ್‌ ಮಾಡಿದ್ದ
ಒಮರ್‌ ಅಬ್ದುಲ್ಲಾ, “ಇನ್ನು, ಕೆಲವೇ ಕ್ಷಣಗಳಲ್ಲಿ ನನ್ನ ಗೃಹ ಬಂಧನವಾಗುವ ಸಾಧ್ಯತೆಗಳಿವೆ. ಇದಕ್ಕಾಗಿ ಇಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಕೆಲವು ನಾಯಕರ ಗೃಹ ಬಂಧನವಾಗಿರುವುದನ್ನು ಕೇಳಿದ್ದು, ನನ್ನ ಬಂಧನವೂ ಮಧ್ಯರಾತ್ರಿಯಿಂದ ಜಾರಿ ಗೊಳ್ಳಬಹುದು’ ಎಂದಿದ್ದರು.

ರಾಜ್ಯಪಾಲರಿಂದ ಸಭೆ
ಈ ಎಲ್ಲ ಬೆಳವಣಿಗೆಗಳ ನಡುವೆ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರು ಮಧ್ಯರಾತ್ರಿ ಜಮ್ಮು ಮತ್ತು ಕಾಶ್ಮೀರ ಡಿಜಿಪಿ, ಮುಖ್ಯ ಕಾರ್ಯದರ್ಶಿ ಸಹಿತ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ.

ಸಂಪುಟ ಸಭೆಗೂ ಮುನ್ನ ರೋಚಕತೆ
ಜಮ್ಮು ಕಾಶ್ಮೀರದ ಇತ್ತೀಚಿನ ಬೆಳವಣಿಗೆಗಳ ಕುರಿತಂತೆ ಚರ್ಚಿಸಲು ಸೋಮವಾರ ಬೆಳಗ್ಗೆ 9.30ಕ್ಕೆ ಕೇಂದ್ರ ಸಚಿವ ಸಂಪುಟದ ಸಭೆ ಕರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯು ಕಾಶ್ಮೀರ ವಿಚಾರದಲ್ಲಿ ಸರಕಾರ ಕೈಗೊಳ್ಳಬೇಕಿರುವ ಮುಂದಿನ ಕ್ರಮಗಳು ಚರ್ಚೆಯಾಗಲಿವೆ ಎಂದು ಅಂದಾಜಿಸಲಾಗಿದೆ. ಆದರೆ ಅದಕ್ಕೂ ಮೊದಲೇ ಆ ರಾಜ್ಯದ ನಾಯಕರನ್ನು ಗೃಹಬಂಧನದಲ್ಲಿ ಇರಿಸಿರುವುದು, ಸೆಕ್ಷನ್‌ 144 ಜಾರಿಗೊಳಿಸಿರುವುದು ಸರಕಾರದ ನಡೆಯನ್ನು ಮತ್ತಷ್ಟು ನಿಗೂಢವಾಗಿಸಿದೆ.

ಇಂಟರ್‌ನೆಟ್‌ ಸೇವೆ ಕಡಿತ
ಕಣಿವೆ ರಾಜ್ಯದಲ್ಲಿ ಮೊಬೈಲ್‌ ಇಂಟರ್‌ನೆಟ್‌ ಸೇವೆಯನ್ನು ಕಡಿತಗೊಳಿಸಲಾಗಿದೆ. ಸಾರ್ವಜನಿಕರು ಮನೆಗಳಿಂದ ಹೊರ ಬರದಂತೆ ಪೊಲೀಸರು ಧ್ವನಿವರ್ಧಕದ ಮೂಲಕ ಮಾಹಿತಿ ನೀಡಿದ್ದಾರೆ.

Advertisement

ಕರ್ಫ್ಯೂ ಜಾರಿ ಮಾಡಿಲ್ಲ
ಕಾಶ್ಮೀರದಲ್ಲಿ ಸೆಕ್ಷನ್‌ 144 ಜಾರಿಗೊಂಡ ಹಿನ್ನೆಲೆಯಲ್ಲಿ ಪ್ರಕಟನೆ ಹೊರಡಿಸಿರುವ ಜಮ್ಮು ಕಾಶ್ಮೀರ ಸರಕಾರವು ಶ್ರೀನಗರ, ರಿಯಾಸಿ ಜಿಲ್ಲೆಗಳಲ್ಲಿ ರವಿವಾರ ಮಧ್ಯರಾತ್ರಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ನಾಲ್ವರಿಗಿಂತ ಹೆಚ್ಚು ಜನರು ಗುಂಪುಗೂಡುವಂತಿಲ್ಲ. ಸಭೆಗಳು, ರ್ಯಾಲಿಗಳನ್ನು ನಡೆಸುವಂತಿಲ್ಲ. ತುರ್ತು ಸಿಬಂದಿ ಕಡ್ಡಾಯವಾಗಿ ತಮಗೆ ನೀಡಿರುವ ಗುರುತಿನ ಚೀಟಿಗಳನ್ನು (ಐಡಿ ಕಾರ್ಡ್‌ಗಳನ್ನು) ಧರಿಸಿಕೊಂಡೇ ಓಡಾಡಬೇಕು ಎಂದಿದೆ. ಆದರೆ ಎಲ್ಲೆಡೆ ಕರ್ಫ್ಯೂ ಹೇರಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾಗಿದ್ದು, ಎಲ್ಲೂ ಕರ್ಫ್ಯೂ ಹೇರಿಲ್ಲ ಎಂದು ಸ್ಪಷ್ಟಪಡಿಸಿದೆ. ಪೊಲೀಸರು ಮೈಕ್‌ ಮೂಲಕ ಸೆಕ್ಷನ್‌ ಜಾರಿಯನ್ನು ಘೋಷಿಸಿದ್ದಾರೆ.

ಶ್ರೀನಗರ ಹಾಗೂ ರಿಯಾಸಿ ಜಿಲ್ಲೆಯಲ್ಲಿ ರವಿವಾರ ಮಧ್ಯರಾತ್ರಿಯಿಂದ ಜಾರಿಗೊಳ್ಳುವಂತೆ ಅನಿರ್ದಿ ಷ್ಟಾವಧಿಯವರೆಗೆ 144ನೇ ಸೆಕ್ಷನ್‌ ಜಾರಿಗೊಳಿಸಲಾಗಿದೆ. ಜಮ್ಮುವಿಗೆ ಹೆಚ್ಚುವರಿ ಸೇನಾ ತುಕಡಿಗಳನ್ನು ಕರೆಯಿಸಿಕೊಳ್ಳಲಾಗಿದೆ. ಶಾಲಾ, ಕಾಲೇಜು ಸಹಿತ ಎಲ್ಲ ರೀತಿಯ ಶೈಕ್ಷಣಿಕ ಸಂಸ್ಥೆಗಳಿಗೆ ಮುಂದಿನ ಆದೇಶದ ವರೆಗೆ ರಜೆ ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next