ಮೈಸೂರು: ಉಂಡುವಾಡಿ ಕುಡಿಯುವ ನೀರಿನ ಯೋಜನೆ ಜಾರಿಯಾದರೆ ಮೈಸೂರು ನಗರ ಹಾಗೂ ತಾಲೂಕಿಗೆ ಮುಂದಿನ 50 ವರ್ಷಗಳವರೆಗೆ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ವಿಜಯನಗರ 3ನೇ ಹಂತದ ಜಿ ಬ್ಲಾಕ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಗಣೇಶೋತ್ಸವದಲ್ಲಿ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ನೀರಿನ ಸಮಸ್ಯೆ ತನಗೆ ಗೊತ್ತಿದೆ. ಕಬಿನಿಯಿಂದ ವಿಜಯನಗರ 4ನೇ ಹಂತಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಕಾಮಗಾರಿ ನಡೆಯುತ್ತಿದೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿರುವುದರಿಂದ ಉಂಡುವಾಡಿ ಯೋಜನೆ ಜಾರಿಯ ಅಗತ್ಯತೆಯನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದೇನೆ. ಅವರಿಗೂ ನೀರಿನ ಸಮಸ್ಯೆಯ ಅರಿವಿದೆ. ಅಲ್ಲಿಯವರೆಗೆ ಜಿ ಬ್ಲಾಕ್‌ಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತೇನೆಂದರು.
ಸಂಘದ ಅಧ್ಯಕ್ಷ ರಂಗೇಗೌಡ, ಜಿ ಬ್ಲಾಕ್ ವಿಜಯನಗರ 3ನೇ ಹಂತಕ್ಕೆ ಸೇರಿದ್ದರೂ ವರ್ತುಲ ರಸ್ತೆಯಿಂದ ಆಚೆ ಇದೆ ಎಂದು ನಗರಪಾಲಿಕೆ ಕೆಲಸ ಮಾಡುತ್ತಿಲ್ಲ. ಮುಡಾದವರು ಸ್ಪಂದಿಸುತ್ತಿಲ್ಲ ಎಂದು ದೂರಿದರು. ಕುಡಿಯುವ ನೀರಿನ ಬೋರ್‌ವೆಲ್‌ಗಳು ನೀರಿಲ್ಲದೆ ಬತ್ತಿಹೋಗಿ ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಂಡೆವು.
ನಂತರ ನಾವೇ ಹಣ ಹಾಕಿ ಒಂದು ಬೋರ್‌ವೆಲ್ ಕೊರೆಸಿಕೊಂಡೆವು. ಈಗ ನೀರು ಬರುತ್ತಿದೆ. ನಮಗೆ ಒಂದು ಓವರ್‌ಹೆಡ್ ಟ್ಯಾಂಕ್ ನಿರ್ಮಿಸಿ, ನೀರು ಸರಬರಾಜು ಮಾಡಬೇಕು. ಇಲ್ಲವೇ ಕಬಿನಿ ನೀರನ್ನು ಕೊಡಿಸಬೇಕೆಂದು ಮನವಿ ಮಾಡಿದರು. ಇದೇ ವೇಳೆ ವಿವಿಧ ವೇಷಭೂಷಣ, ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಕಾರ್ಯದರ್ಶಿ ರೇವಣ್ಣ ಮತ್ತಿತರರಿದ್ದರು.