Advertisement

ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ: 2ಬಲಿ

12:30 AM Mar 20, 2019 | Team Udayavani |

ಧಾರವಾಡ: ನಿರ್ಮಾಣ ಹಂತದ ನಾಲ್ಕು ಮಹಡಿಯ ವಾಣಿಜ್ಯ ಸಂಕೀರ್ಣ ಕುಸಿದು ಇಬ್ಬರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಇನ್ನೂ 35ಕ್ಕೂಹೆಚ್ಚು ಜನರು ಅವಶೇಷಗಳಡಿ ಸಿಲುಕಿರುವ ಶಂಕೆ ಇದ್ದು ರಕ್ಷಣಾ ಕಾರ್ಯ ಮುಂದುವರಿದಿದೆ. ಇಲ್ಲಿನ ಬೆಳಗಾವಿ ರಸ್ತೆಯ ಹೊಸ ಬಸ್‌ನಿಲ್ದಾಣ ಪಕ್ಕದಲ್ಲಿರುವ ವಾಣಿಜ್ಯ ಸಂಕೀರ್ಣ ಮಂಗಳವಾರ ಮಧ್ಯಾಹ್ನ 3:21ಕ್ಕೆ ದಿಢೀರ್‌ ಕುಸಿದು ಬಿದ್ದಿದೆ. ಹುಬ್ಬಳ್ಳಿ ಆನಂದ ನಗರ ನಿವಾಸಿ ಸಲೀಂ ಮಕಾನದಾರ ಮೃತಪಟ್ಟಿದ್ದು, ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ. ತೀವ್ರವಾಗಿ ಗಾಯಗೊಂಡ ಧಾರವಾಡ ನಿವಾಸಿಗಳಾದ ಮಂಜುನಾಥ್‌ (43) ಆಸೀಫ್‌(37) ಮತ್ತು ಮಮತಾ (38) ಅವರನ್ನು ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡ ನಿವಾಸಿಗಳಾದ ಮುನ್ವರ್‌ ನಜೀರ್‌ ಅಹ್ಮದ್‌ ಬಸಾಪೂರ (32), ಧಾರವಾಡ ಕುರುಬರ ಓಣಿ ನಿವಾಸಿ ಸಾಧೀಕ್‌ ಡಂಬಳ(46) ಸ್ಥಿತಿ ಚಿಂತಾಜನಕವಾಗಿದ್ದು, ಹುಬ್ಬಳ್ಳಿಯಲ್ಲಿ ಕಿಮ್ಸ್‌ಗೆ ದಾಖಲಿಸಲಾಗಿದೆ.

Advertisement

ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರ ಮಾವ ಸವದತ್ತಿ ನಿವಾಸಿ ಗಂಗಾಧರ ಶಿಂತ್ರಿ ಹಾಗೂ ಇತರರ ಪಾಲುಗಾರಿಕೆಯಲ್ಲಿ ಈ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗುತ್ತಿತ್ತು. ಇಪ್ಪತ್ನಾಲ್ಕು ಸಾವಿರ ಚದರಡಿಯ ದೈತ್ಯ ಕಟ್ಟಡ ನೆಲಕ್ಕುರುಳಲು ಕಳಪೆ ಕಾಮಗಾರಿಯೇ ಕಾರಣ ಎನ್ನುವುದು ಮೇಲ್ನೊಟಕ್ಕೆ ಸಾಬೀತಾಗಿದೆ. 2016ರಲ್ಲಿ ಆರಂಭ ಗೊಂಡ ಕಟ್ಟಡ ಕಾಮಗಾರಿ ಇನ್ನೂ ಸಂಪೂರ್ಣ ಮುಗಿದಿರಲಿಲ್ಲ. ಕಾಮಗಾರಿ ಪೂರ್ಣಗೊಂಡ ಎರಡು ಮಹಡಿಗಳನ್ನು ಬಾಡಿಗೆಗೆ ನೀಡಲಾಗಿತ್ತು ಎನ್ನಲಾಗಿದೆ.

ತನಿಖೆಗೆ ವಿಶೇಷ ತಂಡ: ನೆಲಮಹಡಿ ಮತ್ತು ಮೂರು ಮಹಡಿ ನಿರ್ಮಿಸಲು ಮಾತ್ರ ಪರವಾನಗಿ ನೀಡಲಾಗಿತ್ತು. ಆದರೆ ಇಲ್ಲಿ ಇನ್ನೂ ಎರಡು ಮಹಡಿಗಳನ್ನು ಹೆಚ್ಚುವರಿಯಾಗಿ ಕಟ್ಟಲಾಗುತ್ತಿತ್ತು. ಘಟನೆ ಕುರಿತು ಸಮಗ್ರ ತನಿಖೆ ನಡೆಸಲು ವಿಶೇಷ ತಂಡ ರಚಿಸುತ್ತೇವೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ತಿಳಿಸಿದ್ದಾರೆ.

ಮಾನವೀಯತೆ ಮೆರೆದ ಜನ: ಕಟ್ಟಡ ಕುಸಿದು ಬೀಳುತ್ತಿದ್ದಂತೆಯೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು, ಕುಮಾರೇಶ್ವರ ನಗರ ಸೇರಿದಂತೆ ಸುತ್ತಲಿನ ಪ್ರದೇಶದ ಜನರು ಸ್ಥಳಕ್ಕೆ ಓಡೋಡಿ ಬಂದು ಕುಸಿದ ಕಟ್ಟಡದ ಕಟ್ಟಿಗೆ, ಸಿಮೆಂಟ್‌ ಇಟ್ಟಿಗೆ, ಪ್ಲಾಸ್ಟಿಕ್‌ ಚೇರುಗಳು ಸೇರಿದಂತೆ ಇತರೆ ಅವಶೇಷಗಳನ್ನು ಎತ್ತಿ ಸಾಗಿಸಿದರು. ಅಷ್ಟೇ ಅಲ್ಲ, ಬಿರು ಬಿಸಿಲನ್ನು ಲೆಕ್ಕಿಸದೇ ರಕ್ಷಣಾ ಕಾರ್ಯಕ್ಕೆ ಪೊಲೀಸರೊಂದಿಗೆ ಕೈ ಜೋಡಿಸಿ ಮಾನವೀಯತೆ ಮೆರೆದರು.

ಕಟ್ಟಡ ಕುಸಿದ ನಂತರ ರಕ್ಷಣಾ ಸಿಬ್ಬಂದಿ ಮತ್ತು ಅಧಿಕಾರಿಗಳು ಸ್ಥಳಕ್ಕೆ ಬರಲು 26 ನಿಮಿಷಗಳು ಬೇಕಾಯಿತು. ಆದರೆ ಸಾರ್ವಜನಿಕರು ಅಷ್ಟೊತ್ತಿಗಾಗಲೇ ಕುಸಿದ ಕಟ್ಟಡದ ಹೊರಭಾಗದಲ್ಲಿ ಗಾಯಾಳುಗಳಾಗಿ ಬಿದ್ದು ನರಳುತ್ತಿದ್ದವರ ಧ್ವನಿ ಗುರುತಿಸಿ ಅಲ್ಲಿಂದಲೇ ರಕ್ಷಣಾ ಕಾರ್ಯ ಆರಂಭಿಸುವಂತೆ ವಿನಂತಿಸಿಕೊಂಡು ಮೂವರನ್ನು ರಕ್ಷಣೆ ಮಾಡಿದರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಸಾಗಿಸುವಲ್ಲಿ ನೆರವಾದರು. ಸುಮಾರು 40 ವೈದ್ಯರು, 50 ಸ್ಟಾಫ್‌ ನರ್ಸ್‌ ಕರ್ತವ್ಯದಲ್ಲಿದ್ದು, 10 ಅಂಬ್ಯುಲೆನ್ಸ್‌ ಕಾರ್ಯನಿರ್ವಹಿಸುತ್ತಿವೆ. ಅಗತ್ಯ ಬಿದ್ದರೆ ಖಾಸಗಿ ವೈದ್ಯರ ನೆರವು ಪಡೆಯಲಾಗುವುದು. ಈ ಕುರಿತು ಐಎಂಎಗೆ ಮನವಿ ಮಾಡಲಾಗುವುದು. ಚಿಕಿತ್ಸೆಗೆ ಯಾವುದೇ ಸಮಸ್ಯೆಯಿಲ್ಲ. ಕಟ್ಟಡ ಬಿದ್ದಿರುವ ಸ್ಥಳದಿಂದ ನೇರವಾಗಿ ಕಿಮ್ಸ್‌ ಹಾಗೂ ಎಸ್‌ಡಿಎಂಗೆ ಗಾಯಾಳುಗಳನ್ನು ಕೊಂಡೊಯ್ಯಲು ಸೂಚಿಸಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ಗಿರಿಧರ ಕುಕನೂರ ಹೇಳಿದರು.

Advertisement

ಸಂಬಂಧಿಕರ ಆಕ್ರಂದನ
ಕಟ್ಟಡ ಅವಶೇಷಗಳಡಿ ಸಿಲುಕಿದ್ದ ಸಂಬಂಧಿಗಳ ಸ್ಥಿತಿಯನ್ನು ಕಣ್ಣಾರೆ ನೋಡಿದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಅಷ್ಟೇ ಅಲ್ಲ, ಆಗಲೇ ಜಿಲ್ಲಾಸ್ಪತ್ರೆಯತ್ತ ಸಾಗಿಸಿದ್ದವರ ಸಂಬಂಧಿಗಳನ್ನು ಸಾರ್ವಜನಿಕರೇ ತಮ್ಮ ವಾಹನಗಳಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆ ತಲುಪಿಸಿ, ಅವರಿಗೆ ಎಳನೀರು-ಮಜ್ಜಿಗೆ ಕುಡಿಸಿ ಸಮಾಧಾನ ಮಾಡುವ ದೃಶ್ಯ ಕಂಡು ಬಂದಿತು. ಹೋಟೆಲ್‌ನಲ್ಲಿ ಹೆಚ್ಚಿನ ಜನರು ಸಿಲುಕಿದ್ದರು ಎನ್ನುವ ಸುದ್ದಿ ಹರಡುತ್ತಿದ್ದಂತೆ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿದ್ದವರ ಸಂಬಂಧಿಗಳು ಸ್ಥಳಕ್ಕೆ ಆಗಮಿಸಿ ತಮ್ಮ ಅಳಲನ್ನು ಅಧಿಕಾರಿಗಳ ಎದುರು ತೋಡಿಕೊಂಡು, ಬೇಗ ರಕ್ಷಣೆ ಮಾಡುವಂತೆ ಕೈಮುಗಿದು ವಿನಂತಿಸಿಕೊಳ್ಳುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.

ಕಟ್ಟಡ ಕುಸಿತದ ದುರ್ಘ‌ಟನೆ ತಿಳಿದು ದಿಗ್ಭ್ರಾಂತಿ ಯಾಯಿತು. ತ್ವರಿತ ಪರಿಹಾರ ಕ್ರಮ ಕೈಗೊಳ್ಳಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ.
– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಉತ್ತರ ಪ್ರದೇಶದಿಂದ ಕಟ್ಟಡ ಕಾರ್ಮಿಕ ಕೆಲಸಕ್ಕಾಗಿ ಸುರೇಶಂದ್ರ ಯಾದವ್‌, ರಾಜ ಮನೋಹರ್‌ ವರ್ಮಾ, ಲವಕುಶ ವರ್ಮ ಬಂದಿದ್ದರು. ಅವರನ್ನು ನಾನೇ ಕರೆದು ತಂದಿದ್ದೆ. ಕಟ್ಟಡ ಕುಸಿದಾಗ ಅವರು ಅವಶೇಷಗಳಡಿ ಸಿಲುಕಿದ್ದರು. ಇವರನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ದೇವರು ದೊಡ್ಡವನು ಇವರನ್ನು ಉಳಿಸಿದ್ದಾನೆ.
– ಭಜರಂಗಿ ವರ್ಮಾ, ಕಟ್ಟಡ ಕಾರ್ಮಿಕರ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next