ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಶಾಂತಿಯ ನೆಲವೀಡಾಗಿದ್ದ ರಾಜಧಾನಿ ಬೆಂಗಳೂರು ಗೂಂಡಾರಾಜ್ ಆಗಿ ಪರಿವರ್ತನೆಯಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ನೇತೃತ್ವದ ಗೂಂಡಾರಾಜ್ ಬೇಕೇ ಅಥವಾ ಬಿಜೆಪಿ ನೇತೃತ್ವದ ಗುಡ್ ಗವರ್ನೆನ್ಸ್ (ಉತ್ತಮ ಆಡಳಿತ) ಸರಕಾರ ಬೇಕೇ ಎಂಬುದನ್ನು ನಿರ್ಧರಿಸುವ ಸಮಯ ಬಂದಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್ ಜಾಬ್ಡೇಕರ್ ಹೇಳಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ವ್ಯಾಪಕ ಭ್ರಷ್ಟಾಚಾರ, ಕಳಪೆ ಮೂಲ ಸೌಕರ್ಯ, ನಿಯಂತ್ರಣ ತಪ್ಪಿದ ಸಂಚಾರ ವ್ಯವಸ್ಥೆ ಮತ್ತು ಬೆಂಕಿ ಹತ್ತಿ ಉರಿಯುತ್ತಿರುವ ಕೆರೆಗಳು ಎಂಬ ಐದು ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಶುಕ್ರವಾರದಿಂದ ಆರಂಭಿಸಿರುವ ಪಾದಯಾತ್ರೆ ವೇಳೆ ಎನ್.ಆರ್.ಕಾಲೋನಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಗಾರ್ಡನ್ ಸಿಟಿಯಾಗಿರುವ ಬೆಂಗಳೂರನ್ನು ಗಾಬೇìಜ್ ಸಿಟಿಯಾಗುವಂತೆ ಕಾಂಗ್ರೆಸ್ ಸರಕಾರ ಮಾಡಿದೆ. ಇದನ್ನು ಮತ್ತೆ ಗಾರ್ಡನ್ ಸಿಟಿಯಾಗಿ ಮಾಡಲು ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮಗೆ ಅಧಿಕಾರದಿಂದ ಹೋಗುವ ಸಮಯ ಬಂದಿದೆ ಎಂದರು.
ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ಶಾಂತಿ, ಸೌಹಾರ್ದತೆಯ ನಗರವಾಗಿರುವ ಬೆಂಗಳೂರಿಗೆ ಬೇಕಾಗಿರುವುದು ಕಾಂಗ್ರೆಸ್‌ನ ಗೂಂಡಾಗಿರಿ ಅಲ್ಲ, ಮೋದಿಗಿರಿ. ಆದ್ದರಿಂದ ಗೂಂಡಾಗಿರಿ ಮಾಡುವ ಕಾಂಗ್ರೆಸ್ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ಮೋದಿಗಿರಿಯ ಸರಕಾರ ನೀಡಲು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ಸರಕಾರ ಮಾಫಿಯಾ ಮೂಲಕ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ. ಈ ಮಾಫಿಯಾ ಸರಕಾರವನ್ನು ಅಧಿಕಾರದಿಂದ ಕಿತ್ತೂಗೆಯ ಬೇಕು. ಸದಾ ಸಿದ್ಧ ಎನ್ನುತ್ತಾ ಕೂತಲ್ಲೇ ನಿದ್ದೆ ಮಾಡುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ಇತಿಶ್ರೀ ಹಾಡಬೇಕು ಎಂದರು.