ಬೆನೋನಿ: ಇಲ್ಲಿನ “ವಿಲೋಮೂರ್ ಪಾರ್ಕ್’ ನಲ್ಲಿ ಗುರುವಾರ ನಡೆದ ಐಸಿಸಿ ಅಂಡರ್-19 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ದ್ವಿತೀಯ ಸೆಮಿಫೈನಲ್ ಸೆಣಸಾಟದಲ್ಲಿ ಪಾಕಿಸ್ಥಾನ ತಂಡಕ್ಕೆ ಸೋಲುಣಿಸಿದ ಆಸ್ಟ್ರೇಲಿಯ ಫೈನಲ್ ಗೆ ಲಗ್ಗೆ ಇಟ್ಟಿದೆ.
ಈಗಾಗಲೇ ಆತಿಥೇಯ ದಕ್ಷಿಣ ಆಫ್ರಿಕಾವನ್ನು 2 ವಿಕೆಟ್‌ಗಳಿಂದ ಮಣಿಸಿ ಫೈನಲ್ ಗೆ ತಲುಪಿರುವ ಭಾರತದ ಎದುರು
ಫೆ.11 ರಂದು ಆಸೀಸ್ ಯುವ ಪಡೆ ಹಣಾಹಣಿ ನಡೆಸಲಿದೆ.
ಆಸ್ಟ್ರೇಲಿಯ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಪಾಕ್ 48.5 ಓವರ್ ಗಳಲ್ಲಿ 179 ರನ್ ಗಳನ್ನಷ್ಟೇ ಗಳಿಸಿ ಆಲೌಟಾಯಿತು. ಶಮಿಲ್ ಹುಸೇನ್ 17, ಅಜಾನ್ ಅವೈಸ್ 52 ಮತ್ತು ಮಾಧ್ಯಮ ಕ್ರಮಾಂಕದಲ್ಲಿ ಬಂದ ಅರಾಫತ್ ಮಿನ್ಹಾಸ್ 52 ರನ್ ಹೊರತು ಪಡಿಸಿ ಉಳಿದ ಯಾರೊಬ್ಬರೂ ಒಂದಂಕಿ ದಾಟಲಿಲ್ಲ. ಆಸೀಸ್ ಪರ ಬಿಗಿ ದಾಳಿ ನಡೆಸಿದ ಟಾಮ್ ಸ್ಟ್ರಾಕರ್ 6 ವಿಕೆಟ್ ಕಬಳಿಸಿದರು.
ಗುರಿ ಬೆನ್ನಟ್ಟಿದ ಆಸೀಸ್ ಆರಂಭಿಕ ಆಟಗಾರ ಸ್ಯಾಮ್ ಕಾನ್ಸ್ಟಾಸ್ 14 ರನ್ ಗಳಿಸಿ ಔಟಾದರು. ಹ್ಯಾರಿ ಡಿಕ್ಸನ್ 50 ರನ್ ಗಳಿಸಿ ಔಟಾದರು. 59 ಕ್ಕೆ 4 ವಿಕೆಟ್ ಕಳೆದುಕೊಂಡಾಗ ಆಲಿವರ್ ಪೀಕ್ ಜವಾಬ್ದಾರಿಯುತ ಆಟವಾಡಿ 49 ರನ್ ಗಳಿಸಿ ಔಟಾದರು. ಸಾಥ್ ನೀಡಿದ ಟಾಮ್ ಕ್ಯಾಂಪ್ಬೆಲ್ 25 ರನ್ ಗಳಿಸಿ ಔಟಾದರು.
ರೋಚಕವಾಗಿ ಸಾಗಿದ ಪಂದ್ಯದಲ್ಲಿ ಆಸೀಸ್ 49.1 ಓವರ್ ಗಳಲ್ಲಿ9 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿ ಜಯ ಭೇರಿ ಬಾರಿಸಿತು. 164ಕ್ಕೆ 9 ನೇ ವಿಕೆಟ್ ಕಳೆದುಕೊಂಡಿದ್ದ ಆಸೀಸ್ ಗೆ ಕ್ಷಣ ಕ್ಷಣಕ್ಕೂ ಆತಂಕ ಮನೆ ಮಾಡಿತ್ತು. ಆದರೆ ಕೊನೆಯ ವಿಕೆಟ್ ಗೆ ರಾಫ್ ಮ್ಯಾಕ್‌ಮಿಲನ್ ಔಟಾಗದೆ 19 ರನ್ ಮತ್ತು ಕ್ಯಾಲಮ್ ವಿಡ್ಲರ್ 2 ರನ್ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.