ಆ್ಯಂಟಿಗುವಾ: ಅಂಡರ್ 19 ವಿಶ್ವಕಪ್ ಕೂಟದ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಪಾಕಿಸ್ಥಾನವನ್ನು ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದೆ. ಇಲ್ಲಿನ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಆಸೀಸ್ ತಂಡವು 119 ರನ್ ಗಳ ವಿಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಅಂಡರ್ 19 ತಂಡವು ಟಿಯಾಗ್ ವಿಲ್ಲೆ ಮತ್ತು ಕೋರಿ ಮಿಲ್ಲರ್ ಬ್ಯಾಟಿಂಗ್ ಸಹಾಯದಿಂದ 276 ರನ್ ಗಳಿಸಿದರೆ, ಪಾಕ್ ತಂಡವು ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಕೇವಲ 157 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡ ಪಾಕಿಸ್ಥಾನ ಕೂಟದಿಂದ ನಿರ್ಗಮಿಸಿತು.
ಟಾಸ್ ಗೆದ್ದರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಸೀಸ್ ಗೆ ಕ್ಯಾಂಪ್ ಬೆಲ್ ಮತ್ತು ವಿಲ್ಲೆ ಉತ್ತಮ ಆರಂಭ ಒದಗಿಸಿ ಮೊದಲ ವಿಕೆಟ್ ಗೆ 86 ರನ್ ಕಲೆಹಾಕಿದರು. 47 ರನ್ ಗಳಿಸಿ ಕ್ಯಾಂಪ್ ಬೆಲ್ ಔಟಾದರೆ, ವಿಲ್ಲೆ ಅರ್ಧಶತಕ ಸಿಡಿಸಿ 71 ರನ್ ಗಳಿಸಿದರು. ನಂತರ ಬಂದ ಮಿಲ್ಲರ್ ಕೂಡಾ ಅರ್ಧಶತಕ ಬಾರಿಸಿ 64 ರನ್ ಕಲೆಹಾಕಿದರು. ಅಂತಿಮವಾಗಿ ಆಸೀಸ್ 50 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 276 ರನ್ ಗಳಿಸಿತು.
ಇದನ್ನೂ ಓದಿ:ಎರಡು ಹಂತಗಳಲ್ಲಿ ರಣಜಿ ಟ್ರೋಫಿ; ಐಪಿಎಲ್‌ಗೂ ಮುನ್ನ ಗ್ರೂಪ್ ಹಂತ, ಬಳಿಕ ನಾಕೌಟ್ ಹಂತ
ಗುರಿ ಬೆನ್ನತ್ತಿದ ಪಾಕಿಸ್ಥಾನ ತಂಡ ಸತತ ವಿಕೆಟ್ ಕಳೆದುಕೊಂಡಿತು. ಯಾವೊಬ್ಬ ಬ್ಯಾಟರ್ ಕೂಡಾ ಕೈಹಿಡಿಯಲಿಲ್ಲ. 9 ನೇ ಕ್ರಮಾಂಕದಲ್ಲಿ ಆಡಲಿಳಿದ ಮೆಹ್ರಾನ್ ಮುಮ್ತಾಜ್ 29 ರನ್ ಗಳಿಸಿದ್ದೇ ಹೆಚ್ಚಿನ ಮೊತ್ತ. ಇಡೀ ಸರದಿಯಲ್ಲಿ ಸಿಕ್ಸ್ ಬಾರಿಸಿದ್ದು ಅವರೊಬ್ಬರೆ. ಅಬ್ದುಲ್ ಫಾಸೀಹ್ 28 ರನ್ ಮತ್ತು ಇರ್ಫಾನ್ ಖಾನ್ 27 ರನ್ ಗಳಿಸಿದರು. ಅಂತಿಮವಾಗಿ ಪಾಕ್ 35.1 ಓವರ್ ಗಳಲ್ಲಿ 157 ರನ್ ಗಳಿಗೆ ಆಲೌಟಾಯಿತು.
ಆಸೀಸ್ ತಂಡವು 119 ರನ್ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು. ವಿಲಿಯಂ ಸಾಲ್ಸ್ ಮನ್ ಮೂರು ವಿಕೆಟ್ ಕಿತ್ತರೆ, ಟಾಮ್ ವಿಟ್ನೆ ಮತ್ತು ಜ್ಯಾಕ್ ಸಿನ್ಫೀಲ್ಡ್ ತಲಾ ಎರಡು ವಿಕೆಟ್ ಕಿತ್ತರು. ಇಂದು ನಡೆಯುವ ಭಾರತ- ಬಾಂಗ್ಲಾ ನಡುವಿನ ಪಂದ್ಯದ ವಿಜೇತರನ್ನು ಆಸೀಸ್ ಸೆಮಿ ಫೈನಲ್ ನಲ್ಲಿ ಎದುರಿಸಲಿದೆ.