Advertisement

ಅಂಡರ್‌-19 ವಿಶ್ವಕಪ್‌: ಲಂಕೆಯನ್ನು ಮಣಿಸಿದ ಭಾರತ

10:06 AM Jan 20, 2020 | Team Udayavani |

ಬ್ಲೋಮ್‌ಫಾಂಟೈನ್‌: ಹಾಲಿ ಚಾಂಪಿಯನ್‌ ಭಾರತ ಅಂಡರ್‌-19 ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅಮೋಘ ಆರಂಭ ಪಡೆದಿದೆ. “ಎ’ ವಿಭಾಗದ ಮೊದಲ ಲೀಗ್‌ ಪಂದ್ಯದಲ್ಲಿ ಶ್ರೀಲಂಕಾವನ್ನು 90 ರನ್ನುಗಳ ಅಂತರದಿಂದ ಉರುಳಿಸಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 4 ವಿಕೆಟಿಗೆ 297 ರನ್‌ ಬಾರಿಸಿತು. ಜವಾಬಿತ್ತ ಶ್ರೀಲಂಕಾ 45.2 ಓವರ್‌ಗಳಲ್ಲಿ 207ಕ್ಕೆ ಆಲೌಟ್‌ ಆಯಿತು.
ಒಂದು ಹಂತದಲ್ಲಿ ಶ್ರೀಲಂಕಾ ಒಂದೇ ವಿಕೆಟಿಗೆ 106 ರನ್‌ ಗಳಿಸಿ ಗೆಲುವಿನ ಸೂಚನೆ ನೀಡಿತ್ತು. ಆದರೆ ಆಕಾಶ್‌ ಸಿಂಗ್‌, ಸಿದ್ದೇಶ್‌ ವೀರ್‌, ರವಿ ಬಿಶ್ನೋಯ್‌ ತಲಾ 2 ವಿಕೆಟ್‌ ಕಿತ್ತು ಲಂಕೆಗೆ ಕಡಿವಾಣ ಹಾಕಿದರು. ನಾಯಕ ನಿಪುನ್‌ ಧನಂಜಯ 50, ರವೀಂದು ರಸಂತ 49, ಆರಂಭಕಾರ ಕಮಿಲ್‌ ಮಿಶಾರ 39 ರನ್‌ ಮಾಡಿದರು.

ಭಾರತದ ಭರ್ಜರಿ ಮೊತ್ತ
ಭಾರತದ ಸರದಿಯಲ್ಲಿ 3 ಅರ್ಧ ಶತಕಗಳು ದಾಖಲಾದವು. ಆರಂಭಕಾರ ಯಶಸ್ವಿ ಜೈಸ್ವಾಲ್‌ 59 ರನ್‌ (74 ಎಸೆತ, 8 ಬೌಂಡರಿ), ನಾಯಕ ಪ್ರಿಯಂ ಗರ್ಗ್‌ 56 ರನ್‌ (72 ಎಸೆತ, 2 ಬೌಂಡರಿ) ಮತ್ತು ವಿಕೆಟ್‌ ಕೀಪರ್‌ ಧ್ರುವ ಜುರೆಲ್‌ ಅಜೇಯ 52 ರನ್‌ ಬಾರಿಸಿದರು (48 ಎಸೆತ, 3 ಬೌಂಡರಿ, 1 ಸಿಕ್ಸರ್‌). ವನ್‌ಡೌನ್‌ ಬ್ಯಾಟ್ಸ್‌ಮನ್‌ ತಿಲಕ್‌ ವರ್ಮ (46), ಸಿದ್ದೇಶ್‌ ವೀರ್‌ (ಅಜೇಯ 44) ಹಾಗೂ ಓಪನರ್‌ ದಿವ್ಯಾಂಶ್‌ 23 ರನ್‌ ಕೊಡುಗೆ ಸಲ್ಲಿಸಿದರು.

ಜೈಸ್ವಾಲ್‌-ದಿವ್ಯಾಂಶ್‌ 11.5 ಓವರ್‌ಗಳಿಂದ 66 ರನ್‌ ಪೇರಿಸಿ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಬಳಿಕ ತಿಲಕ್‌ ವರ್ಮ ಅವರನ್ನು ಕೂಡಿಕೊಂಡ ಜೈಸ್ವಾಲ್‌ ಮತ್ತೂಂದು ಉಪಯುಕ್ತ ಜತೆಯಾಟ ನಿಭಾಯಿಸಿದರು. 2ನೇ ವಿಕೆಟಿಗೆ 56 ರನ್‌ ಒಟ್ಟುಗೂಡಿತು. ಜೈಸ್ವಾಲ್‌ ನಿರ್ಗಮನದ ಬಳಿಕ ತಿಲಕ್‌ ವರ್ಮ-ಪ್ರಿಯಂ ಗರ್ಗ್‌ ಜೋಡಿ ಕೂಡ ಲಂಕಾ ಬೌಲರ್‌ಗಳನ್ನು ಕಾಡುತ್ತ ಹೋಯಿತು. 3ನೇ ವಿಕೆಟಿಗೆ 59 ರನ್‌ ಹರಿದು ಬಂತು.

4ನೇ ವಿಕೆಟಿಗೆ ಜತೆಗೂಡಿದ ಗರ್ಗ್‌-ಜುರೆಲ್‌ ಭಾರತದ ಸರದಿಯನ್ನು ಬೆಳೆಸುತ್ತ ಸಾಗಿದರು. ಇವರು 63 ರನ್‌ ಒಟ್ಟುಗೂಡಿಸಿದರು. ಕೊನೆಯಲ್ಲಿ ಜುರೆಲ್‌-ಸಿದ್ದೇಶ್‌ ವೀರ್‌ ಮುರಿಯದ 5ನೇ ವಿಕೆಟಿಗೆ 7.2 ಓವರ್‌ಗಳಿಂದ 63 ರನ್‌ ಪೇರಿಸಿದರು. ಹೀಗೆ ಪ್ರತಿಯೊಂದು ವಿಕೆಟಿಗೂ ದೊಡ್ಡ ಜತೆಯಾಟ ದಾಖಲಿಸುತ್ತ ಹೋದ ಭಾರತ ಸವಾಲಿನ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು.

Advertisement

ಭಾರತ ತನ್ನ ಮುಂದಿನ ಪಂದ್ಯವನ್ನು ಮಂಗಳವಾರ ಜಪಾನ್‌ ವಿರುದ್ಧ ಆಡಲಿದೆ. ದಿನದ ಇನ್ನೊಂದು ಪಂದ್ಯದಲ್ಲಿ ಪಾಕಿಸ್ಥಾನ 7 ವಿಕೆಟ್‌ಗಳಿಂದ ಸ್ಕಾಟ್ಲೆಂಡ್‌ಗೆ ಸೋಲುಣಿಸಿತು.

ಸಂಕ್ಷಿಪ್ತ ಸ್ಕೋರ್‌
ಭಾರತ-4 ವಿಕೆಟಿಗೆ 297 (ಜೈಸ್ವಾಲ್‌ 59, ಗರ್ಗ್‌ 56, ಜುರೆಲ್‌ ಔಟಾಗದೆ 52, ತಿಲಕ್‌ 46, ಸಿದ್ದೇಶ್‌ ಔಟಾಗದೆ 44, ದಿವ್ಯಾಂಶ್‌ 23, ಅಶಿಯಾನ್‌ 39ಕ್ಕೆ 1, ಅಂಶಿ 40ಕ್ಕೆ 1). ಶ್ರೀಲಂಕಾ-45.2 ಓವರ್‌ಗಳಲ್ಲಿ 207 (ಧನಂಜಯ 50, ರಸಂತ 49, ಮಿಶಾರ 39, ಆಕಾಶ್‌ 29ಕ್ಕೆ 2, ಸಿದ್ದೇಶ್‌ 34ಕ್ಕೆ 2, ಬಿಶ್ನೋಯ್‌ 44ಕ್ಕೆ 2). ಪಂದ್ಯಶ್ರೇಷ್ಠ: ಸಿದ್ದೇಶ್‌ ವೀರ್‌.

Advertisement

Udayavani is now on Telegram. Click here to join our channel and stay updated with the latest news.

Next