ಹೊಸದಿಲ್ಲಿ: ಭಾರತದಲ್ಲಿ ಮುಂದಿನ ನವೆಂಬರ್‌ನಲ್ಲಿ ನಡೆಯ ಲಿರುವ ಫಿಫಾ ಅಂಡರ್-17 ವನಿತಾ ವಿಶ್ವಕಪ್ ಫುಟ್‌ಬಾಲ್ ಕೂಟವನ್ನು ಮುಂದೂಡಲಾಗಿದೆ. ಜಗತ್ತಿನೆಲ್ಲೆಡೆ ಕೋವಿಡ್ 19 ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಫುಟ್‌ಬಾಲ್‌ನ ವಿಶ್ವ ಆಡಳಿತ ಮಂಡಳಿ ಫಿಫಾ ಶನಿವಾರ ಈ ಕೂಟವನ್ನು ಮುಂದೂಡಲು ನಿರ್ಧರಿಸಿತು.
ವನಿತೆಯರ 17 ವರ್ಷ ಕೆಳಗಿನ ಈ ಪ್ರತಿಷ್ಠಿತ ಪಂದ್ಯಾಟವು ದೇಶದ ಐದು ನಗರಗಳಲ್ಲಿ (ಕೋಲ್ಕತಾ, ಗುವಾಹಾಟಿ, ಭುವನೇಶ್ವರ, ಅಹ್ಮದಾಬಾದ್ ಮತ್ತು ನವೀ ಮುಂಬಯಿ) ನವೆಂಬರ್ 2ರಿಂದ 21ರ ವರೆಗೆ ನಡೆಯಲಿತ್ತು. ಈ ಪಂದ್ಯಾಟವು 16 ತಂಡಗಳ ನಡುವೆ ನಡೆಯಲಿತ್ತು. ಆತಿಥ್ಯ ಹಿನ್ನೆಲೆಯಲ್ಲಿ ಭಾರತ ನೇರವಾಗಿ ಅರ್ಹತೆ ಪಡೆದಿತ್ತು. ಅಂಡರ್-17 ವನಿತಾ ವಿಶ್ವಕಪ್‌ಫುಟ್‌ಬಾಲ್ ಕೂಟದಲ್ಲಿ ಇದೇ ಮೊದಲ ಬಾರಿ ಭಾರತ ಆಡುವ ಅರ್ಹತೆ ಗಳಿಸಿತ್ತು.
ಫಿಫಾ ಕಾನೆಡೆರೇಶನ್ಸ್‌ನ ಕಾರ್ಯ ಕಾರಿ ಬಣವು ಅಂಡರ್-17 ವಿಶ್ವಕಪ್ ಕೂಟವನ್ನು ಮುಂದೂಡಲು ನಿರ್ಧರಿಸಿತು. ಕೋವಿಡ್ 19 ವೈರಸ್‌ನಿಂದ ಉಂಟಾದ ಸಂಕಷ್ಟವನ್ನು ಪರಾ ಮರ್ಶಿಸಲು ಫಿಫಾ ಕೌನ್ಸಿಲ್‌ನ ಬ್ಯುರೋ ಕಾರ್ಯಕಾರಿ ಬಣವನ್ನು ರಚಿಸಿತ್ತು. ಫಿಫಾ ಅಂಡರ್-20 ಮತ್ತು ಅಂಡರ್-17 ವನಿತಾ ವಿಶ್ವಕಪ್ ಕೂಟವನ್ನು ಮುಂದೂಡುವಂತೆ ಕಾರ್ಯಕಾರಿ ಸಮಿತಿಯು ಫಿಫಾ ಕೌನ್ಸಿಲ್‌ಗೆ ಶಿಫಾರಸು ಮಾಡಿತ್ತು. ಅಂಡರ್-20 ಕೂಟವು 2020ರ ಆಗಸ್ಟ್-ಸಪ್ಟೆಂಬರ್‌ನಲ್ಲಿ ಪನಾಮ/ಕೋಸ್ಟರಿಕಾದಲ್ಲಿ ನಡೆಯಬೇಕಿತ್ತು. ಈ ಕೂಟಗಳ ಹೊಸ ದಿನಾಂಕವನ್ನು ಗುರುತಿಸಲಾಗಿದೆ ಎಂದು ಫಿಫಾ ಪ್ರಕಟನೆಯಲ್ಲಿ ತಿಳಿಸಿದೆ.
ಕೂಟ ಆರಂಭವಾಗಲು ಕೇವಲ ಐದು ತಿಂಗಳಷ್ಟೇ ಬಾಕಿ ಉಳಿದಿದೆ. ಆದರೆ ಏಶ್ಯವನ್ನು ಬಿಟ್ಟರೆ ಉಳಿದ ಕಡೆಯ ಅರ್ಹತಾ ಕೂಟಗಳು ಇನ್ನಷ್ಟೇ ಆಗಬೇಕಾಗಿದೆ. ಏಶ್ಯ ವಲಯದಿಂದ ಜಪಾನ್ ಮತ್ತು ಉತ್ತರ ಕೊರಿಯ ಅರ್ಹತೆ ಗಳಿಸಿದೆ.
ಕೋವಿಡ್ 19 ವೈರಸ್‌ನ ಹಾವಳಿಯಿಂದಾಗಿ ಇನ್ನುಳಿದ ಐದು ಅಂದರೆ ಆಫ್ರಿಕಾ, ಯುರೋಪ್, ಓಶಿಯಾನಿಯ, ದಕ್ಷಿಣ ಅಮೆರಿಕ ಹಾಗೂ ಸೆಂಟ್ರಲ್, ಉತ್ತರ ಅಮೆರಿಕ ಮತ್ತು ಕೆರೆಬಿಯನ್‌ನಲ್ಲಿ ನಡೆಯಬೇಕಾದ ಅರ್ಹತಾ ಕೂಟಗಳು ನಡೆಯದೇ ಬಾಕಿ ಉಳಿದಿವೆ.
ಮುಂದೂಡಿಕೆ ನಿರೀಕ್ಷಿತ
ಅಪಾಯಕಾರಿ ವೈರಸ್‌ನಿಂದಾಗಿ ಹಲವು ಕ್ರೀಡಾಕೂಟಗಳು ಮುಂದೂಡಲ್ಪಟ್ಟ ಕಾರಣ ಅಂಡರ್-17 ಕೂಟವು ನಿರೀಕ್ಷಿತವಾಗಿ ಮುಂದೂಡಲ್ಪಟ್ಟಿದೆ. ನಾವು ಈ ನಿರ್ಧಾರವನ್ನು ಒಪ್ಪಿಕೊಳ್ಳಬೇಕಿದೆ ಎಂದು ತಿಳಿಸಿದ ಅಖೀಲ ಭಾರತ ಫುಟ್‌ಬಾಲ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಕುಶಲ್ ದಾಸ್ ಅವರು ಈ ಕೂಟ ಮುಂದಿನ ವರ್ಷ ನಡೆಯುವ ಸಾಧ್ಯತೆಯಿದೆ ಎಂದರು.