Advertisement

ಮನಸೂರೆಗೊಂಡ ಉಂದೆನ್ಲ ನಂಬೋಲಿಯಾ ನಾಟಕ

03:10 PM Mar 30, 2017 | Team Udayavani |

ಇತ್ತೀಚೆಗೆ ನವಿಮುಂಬಯಿ ಘನ್ಸೋಲಿಯ ಪ್ರಸಿದ್ಧ ಕಾರಣಿಕ ದೇವಾಲಯ ಶ್ರೀ ಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ಮಹೋತ್ಸವ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇವಾಲಯದ ಸದಸ್ಯರು ನಗರದ ಹಾಸ್ಯನಟ, ಸಂಘಟಕ, ಕಿಶೋರ್‌ ಶೆಟ್ಟಿ ಪಿಲಾರು ವಿರಚಿತ ‘ಉಂದೆನ್ಲ ನಂಬೊಲಿಯಾ’ ಎಂಬ ನೀತಿ ಭೋದಕ ಹಾಸ್ಯಮಯ ನಾಟಕವನ್ನು ನಾಟಕಕಾರ ಹರೀಶ್‌ ಶೆಟ್ಟಿ ಪಡುಬಿದ್ರೆ ಅವರ ಸಮರ್ಥ ನಿರ್ದೇಶನದಲ್ಲಿ ಯಶಸ್ವಿಯಾಗಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

Advertisement

ಮೂಡನಂಬಿಕೆಯನ್ನು ಆಧಾರವಾಗಿಟ್ಟುಕೊಂಡು ಸಮಾರಂಭದಲ್ಲಿ ವಂಚಿಸುವ ವಂಚಕರನ್ನು ಗುರುತಿಸಿ ಅವರನ್ನು ಶಿಕ್ಷಿಸಬೇಕು ಎಂಬ ಉದ್ಧೇಶವನ್ನಿಟ್ಟುಕೊಂಡು ಲೇಖಕರು ಕತೆಯನ್ನು ಸುಂದರವಾಗಿ ಹೆಣೆದಿದ್ದಾರೆ. ರಂಗನಿರ್ದೇಶಕ ಹರೀಶ್‌ ಶೆಟ್ಟಿ ಪಡುಬಿದ್ರೆ ಅವರು ಈ ನಾಟಕದ ಪ್ರಮುಖ ಪಾತ್ರದ ಸುಂದರನ ಪಾತ್ರಧಾರಿಯಾಗಿ ನಾಟಕದುದ್ದಕ್ಕೂ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಲ್ಲದೆ ಯುವ ಕಲಾವಿದರನ್ನು ರಂಗದಲ್ಲಿ ಉತ್ತಮವಾಗಿ ಬಳಸಿಕೊಂಡಿದ್ದಾರೆ. ಯಕ್ಷಗಾನ, ನಾಟಕ ಕಲಾವಿದನಾಗಿ, ರಂಗದಲ್ಲಿ ಮಿಂಚುವ ನವಿಮುಂಬಯಿ ದೆಪ್ಪುಣಿಗುತ್ತು ಚಂದ್ರಹಾಸ ಶೆಟ್ಟಿ ಅವರು, ನಾಟಕದ ಸಮಗ್ರ ನಿರ್ವಹಣೆಯನ್ನು ಮಾಡಿ, ನಾಟಕದಲ್ಲಿ ಮಂತ್ರವಾದಿಯಾಗಿ ನಟಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮಂತ್ರವಾದಿಯ ಶಿಷ್ಯನಾಗಿ ಗಣೇಶ್‌ ಶೆಟ್ಟಿ ಮಂಗಳೂರು, ಸುನೀತಾಳ ಪಾತ್ರದಲ್ಲಿ ವಿದ್ಯಾ ಹರೀಶ್‌ ಅಂಚನ್‌, ಅಜ್ಜಿಯ ಪಾತ್ರದಲ್ಲಿ ಉಮೇಶ್‌ ಶೆಟ್ಟಿ ಐರೋಲಿ ಅವರು ತಮಗೆ ನೀಡಿದ ಪಾತ್ರಗಳಿಗೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.

ನೆರೆಮನೆಯ ಪುಷ್ಪಳ ಪಾತ್ರದಲ್ಲಿ ಜಯಂತಿ ಪ್ರಕಾಶ್‌ ಪೂಜಾರಿ ಹಾಗೂ ಪುಷ್ಪನ ಗಂಡನ ಪಾತ್ರದಲ್ಲಿ ಅಕ್ಕಲ್‌ಬೈಲ್‌ ಗಣೇಶ್‌ ದೇವಾಡಿಗ ಅವರು ಉತ್ತಮವಾಗಿ ಅಭಿನಯಿಸಿದ್ದಾರೆ. ಸುಂದರನ ಮಗಳು ಪಾತ್ರದಲ್ಲಿ ಬೇಬಿ ನಿಖೀತಾ ಅವರ ಅಭಿನಯ ಉತ್ತಮವಾಗಿತ್ತು. ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಾಜೇಶ್‌ ಹೆಗ್ಡೆ ಹೆರ್ಮುಂಡೆ ಅವರ ಸಂಗೀತ ಉತ್ತಮವಾಗಿ ಮೂಡಿ ಬಂದಿದೆ. ಬೆಳಕಿನ ಸಂಯೋಜನೆ, ರಂಗದ ಹಿನ್ನೆಲೆಯಲ್ಲಿ ಮಂದಿರದ ಸದಸ್ಯರು ಸಹಕರಿಸಿದ್ದರು.

ಒಟ್ಟಿನಲ್ಲಿ ಮುಂಬಯಿ ರಂಗಭೂಮಿಗೆ ಯುವ ಕಲಾವಿದರು ಸೇರ್ಪಡೆಗೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ರಂಗ ಬೆಳವಣಿಗೆಗೆ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವ ದೇವಾಲಯದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಉಪಾಧ್ಯಕ್ಷ ಜಗದೀಶ್‌ ಶೆಟ್ಟಿ ನಂದಿಕೂರು, ಕಾರ್ಯದರ್ಶಿ ಸುರೇಶ್‌ ಕೋಟ್ಯಾನ್‌, ಜತೆ ಕಾರ್ಯದರ್ಶಿ ಭಾಸ್ಕರ ಶೆಟ್ಟಿ ತಾಳಿಪಾಡಿಗುತ್ತು ಹಾಗೂ ಉಪಾಧ್ಯಕ್ಷ ಕೆ. ಎಂ. ಶೆಟ್ಟಿ  ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯನ್ನು ಅಭಿನಂದಸಬೇಕು. ಮುಂದಿನ ದಿನಗಳಲ್ಲಿ ಶ್ರೀಕ್ಷೇತ್ರದ ಅರಾಧ್ಯ ದೇವಿ ಮೂಕಾಂಬಿಕೆಯು ಎಲ್ಲಾ ಕಲಾವಿದರನ್ನು ಹರಸಲಿ ಎಂದು ನನ್ನ ಹಾರೈಕೆ.                

Advertisement

 ನಾಗರಾಜ ಗುರುಪುರ

Advertisement

Udayavani is now on Telegram. Click here to join our channel and stay updated with the latest news.

Next