Advertisement

ಪಾಲನೆಯಾಗದ ಕೋವಿಡ್‌-19 ಮುಂಜಾಗ್ರತೆ: ಲೋಕಾಯುಕ್ತ ತರಾಟೆ

11:01 PM Jun 29, 2020 | Sriram |

ಕುಂದಾಪುರ: ಕೋವಿಡ್‌-19 ಸಾಮುದಾಯಿಕ ಹರಡುವಿಕೆ ತಡೆಯಲು ಸಾರ್ವಜನಿಕರು, ಸಂಸ್ಥೆಗಳು ಪಾಲಿಸಬೇಕಾದ ನಿಯಮಗಳನ್ನು ಅನುಷ್ಠಾನ ಮಾಡುವ ಸರಕಾರಿ ಇಲಾಖೆಗಳಲ್ಲೇ ಪಾಲನೆಯಾಗುತ್ತಿಲ್ಲ ಎನ್ನುವುದು ಲೋಕಾಯುಕ್ತ ಅಧಿಕಾರಿಗಳು ಇಲ್ಲಿನ ವಿವಿಧ ಇಲಾಖೆಗಳಿಗೆ ಸೋಮವಾರ ಭೇಟಿ ನೀಡಿದಾಗ ಬಹಿರಂಗಗೊಂಡಿತು.

Advertisement

ಪುರಸಭೆಗೆ ಭೇಟಿ ನೀಡಿ ಮಾಸ್ಕ್ ಧಾರಣೆಗೆ ದಂಡ ಪ್ರಕರಣ ಕಡಿಮೆ ದಾಖಲಿಸಿದ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.

ಆರೋಗ್ಯ ನಿರೀಕ್ಷಕ ಶರತ್‌ ಅವರ ಬಳಿ ಹೆಚ್ಚು ಕೇಸುಗಳನ್ನು ಹಾಕಿ ಜನರನ್ನು ಜಾಗೃತರನ್ನಾಗಿಸಲು ಹೇಳಿದರು.

ಸಿಬಂದಿ ಮಾಸ್ಕ್ ಧರಿಸದೇ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಕಂಡು ಅವರಿಗೆ ತಿಳಿಹೇಳಿದರು. ಹೊಟೇಲ್‌, ಸೆಲೂನ್‌, ಎಸಿ ಮಳಿಗೆಗಳಲ್ಲಿ ಮುಂಜಾಗ್ರತೆ ಪಾಲಿಸುವಂತೆ, ಹೊಟೇಲ್‌ಗ‌ಳಲ್ಲಿ ಪುನರ್‌ಬಳಕೆಯಾಗದಂತಹ ತಟ್ಟೆ, ಲೋಟಗಳನ್ನು ಬಳಸುವಂತೆ ಸೂಚಿಸಿದರು.

ಮಿನಿ ವಿಧಾನಸೌಧಕ್ಕೆ ಭೇಟಿ ನೀಡಿದಾಗ ಅಲ್ಲಿ ಸಕಾಲ ಕೌಂಟರ್‌ನಲ್ಲಿ ಸಾಮಾಜಿಕ ಅಂತರ ಪಾಲನೆಯಾಗುತ್ತಿರಲಿಲ್ಲ. ತಾಲೂಕು ಕಚೇರಿಯ ಅಧಿಕಾರಿ ವಿನಯ್‌ ಅವರನ್ನು ಕರೆಸಿ, ವ್ಯವಸ್ಥೆಯನ್ನು ಸರಿಪಡಿಸಲು ಸೂಚಿಸಿದರು. ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರ ವಿವರಗಳನ್ನು ದಾಖಲಿಸಲು ನೋಂದಣಿ ಪುಸ್ತಕ ಇರಿಸಲು ಹೇಳಿದರು.

Advertisement

ಎಸಿ ಕಚೇರಿಯ ಸಿಬಂದಿ ಸ್ಥಳದಲ್ಲಿ ಇರಲಿಲ್ಲ. ಹಾಜರಿ ಸರಿಯಾಗಿ ದಾಖಲಿಸಿರಲಿಲ್ಲ. ಇದನ್ನು ಗಮನಿಸಿ ನೋಟಿಸ್‌ ನೀಡುವುದಾಗಿ ಕಚೇರಿ ವ್ಯವಸ್ಥಾಪಕರಿಗೆ ಹೇಳಿದರು.

ಉಪನೋಂದಣಿ ಕಚೇರಿಗೆ ಭೇಟಿ ನೀಡಿದಾಗ ಜನಸಂದಣಿ ವಿಪರೀತ ಇತ್ತು. 80 ವಯಸ್ಸು ಕಳೆದವರೂ ಕಾಯುತ್ತಿದ್ದರು. ಉಪನೋಂದಣಾಧಿಕಾರಿ ಸತೀಶ್‌ ಅವರನ್ನು ಕರೆದು, ವಯಸ್ಸಾದವರನ್ನು ಮೊದಲು ಕಳುಹಿಸಿ, ಟೋಕನ್‌ ವ್ಯವಸ್ಥೆ ಮೂಲಕ ಕಡಿಮೆ ಜನರು ಕಚೇರಿಯಲ್ಲಿ ಇರುವಂತೆ ಮಾಡಲು ಸಲಹೆ ನೀಡಿದರು.

ಎಪಿಎಂಸಿಗೆ ಭೇಟಿ ನೀಡಿ ಜ್ವರ ಮಾಪಕ ಇಲ್ಲ, ಸ್ಯಾನಿಟೈಸರ್‌ ಇಟ್ಟಿಲ್ಲ ಎಂದು ಆಕ್ಷೇಪಿಸಿದಾಗ, ಕಾರ್ಯದರ್ಶಿ ದೀಪ್ತಿ ಅವರು ವಿವರ ನೀಡಿ ಇಲ್ಲಿಗೆ ಸಾರ್ವಜನಿಕರ ಭೇಟಿ ಇರುವುದಿಲ್ಲ. ವ್ಯಾಪಾರಿಗಳೂ ಬರುವುದಿಲ್ಲ. ಕಚೇರಿ ಸಿಬಂದಿಯಷ್ಟೇ ಬರುವ ಕಾರಣ ಅದಕ್ಕೆ ಬೇಕಾದಷ್ಟೇ ವ್ಯವಸ್ಥೆ ಮಾಡಲಾಗಿದೆ ಎಂದರು.

ಪರಿಶೀಲಿಸಲಾಗಿದೆ
ಕೋವಿಡ್‌-19 ಹರಡುವುದು ತಡೆಯಲು ಸರಕಾರ ಇಷ್ಟೆಲ್ಲ ನಿಯಮಗಳನ್ನು ರೂಪಿಸುತ್ತಿದ್ದು ತಳಹಂತದಲ್ಲಿ ಅನುಷ್ಠಾನ ಆಗದೇ ಇದ್ದರೆ ಹೇಗೆ? ಈ ನಿಟ್ಟಿನಲ್ಲಿ ಪರಿಶೀಲನೆ ನಡೆಸಲಾಗಿದೆ. ಇದರ ವರದಿಯನ್ನು ಲೋಕಾಯುಕ್ತ ಮೇಲಧಿಕಾರಿಗಳಿಗೆ, ಡಿಸಿಗೆ ಕಳುಹಿಸಲಾಗುವುದು ಎಂದು ಡಿವೈಎಸ್‌ಪಿ ಭಾಸ್ಕರ ರೆಡ್ಡಿ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next