Advertisement

ಸಂವಹನವಿಲ್ಲದ ಸಂಸಾರ, ಮಾತಿಲ್ಲದ ಪ್ರೀತಿಯ ಬಾಳಿಕೆಯೆಷ್ಟು?

11:59 AM Oct 03, 2017 | |

ಸಾಕಷ್ಟು ಪ್ರೀತಿಗಳು ಸಂವಹನವೇ ಇಲ್ಲದೆ ಎಲ್ಲಿ ಹುಟ್ಟಿತೋ ಅಲ್ಲೇ ಸತ್ತುಹೋಗುತ್ತವೆ. ಕೆಲವರು ಏನೋ ಹೇಳಲು ಹೋಗಿ ಇನ್ನೇನನ್ನೋ ಹೇಳಿ ಸುಮ್ಮಸುಮ್ಮನೆ ತಪ್ಪಿತಸ್ಥರಾಗಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಹೀಗಾಗಿ ಇಂದು ಸಂವಹನ ಅತ್ಯಂತ ಬೇಡಿಕೆಯಲ್ಲಿರುವ, ಹೆಚ್ಚೆಚ್ಚು ಯುವಕರು ಕಲಿಯಲು ಮುಗಿಬೀಳುತ್ತಿರುವ ವಿಷಯ.

Advertisement

ನಾವು ಬುದ್ಧಿವಂತರಾಗಿರಲಿ, ಪೆದ್ದರಾಗಿರಲಿ, ವಿದ್ಯಾವಂತರಾಗಿ ರಲಿ, ಇಲ್ಲದಿರಲಿ, ಶ್ರವಣ ಮಾಂದ್ಯತೆಯಿರಲಿ, ಕಣ್ಣು ಕಾಣಿಸ ದಿರಲಿ, ಅಷ್ಟೇ ಏಕೆ; ಬುದ್ಧಿ ಮಾಂದ್ಯತೆಯಿದ್ದರೂ ಸಹ ಸಂವಹನ ಬಹಳ ಮುಖ್ಯ. ಮನುಷ್ಯ ಅವನವನ ಜೀವನ ಶೈಲಿ ಮತ್ತು ಮಾನಸಿಕ ಪರಿಸ್ಥಿತಿಗಳ ಮೇಲೆ ತನ್ನ ಸಂವಹನದ ರೀತಿಯನ್ನು ರೂಢಿಸಿಕೊಂಡಿರುತ್ತಾನೆ. ಕೆಲವರು ಅತಿ ಹೆಚ್ಚು ಮಾತನಾಡು ತ್ತಾರೆ, ಮತ್ತೆ ಕೆಲವರು ಮಾತೇ ಆಡುವುದಿಲ್ಲ. ಇಬ್ಬರೂ ಉತ್ತಮ ಸಂವಹನಕಾರರೇ ಆಗಿರುತ್ತಾರೆ.

ಮಾತನಾಡುವವರು ಮಾತಿನಿಂದ, ಮೌನದಿಂದಿರುವವರು ತಮ್ಮ ನಡವಳಿಕೆಯಿಂದ ವಿಷಯಗಳನ್ನು ತಿಳಿಸುತ್ತಾರೆ. ನೀವು ಗಮನಿಸಿದ್ದೀರಾ… ಎಲ್ಲ ತೊಂದರೆಗಳು ಶುರುವಾಗು ವುದು ಕಮ್ಯುನಿಕೇಶನ್‌ ಸರಿಯಿಲ್ಲದಿದ್ದಾಗ. ಗಂಡ – ಹೆಂಡತಿ, ಅಪ್ಪ-ಮಕ್ಕಳು, ಗೆಳೆಯರು, ಸಂಬಂಧಿಕರು; ಯಾರದೇ ನಡುವೆ ಮನಸ್ತಾಪ ಹುಟ್ಟಿಕೊಳ್ಳುವುದಿದ್ದರೂ ಅದು ಸಂವಹನದ ಕೊರತೆಯಿಂದಲೇ ಆಗಿರುತ್ತದೆ. ತಿಳಿಯಬೇಕಾದ್ದು ಸರಿಯಾಗಿ ತಿಳಿಯದೇ ಇರುವುದು ಅಥವಾ ತಿಳಿಯಬಾರದ್ದು ತಪ್ಪಾಗಿ ತಿಳಿಯುವುದು ಇವೆರಡೂ ಸಂವಹನಜನ್ಯ ದುಷ್ಟರಿಣಾಮಗಳು. ಆಗ ಹುಟ್ಟಿಕೊಳ್ಳುವುದೇ ವಿರಸ.

ಕೆಲವಷ್ಟು ಜನ ಬಾಯಿ ಬಿಟ್ಟು ಮಾತನಾಡುವುದೇ ಇಲ್ಲ. ಎದುರಿಗಿರುವ ವ್ಯಕ್ತಿ ತಾನಾಗೇ ಅರ್ಥ ಮಾಡಿಕೊಳ್ಳುತ್ತಾನೆಂಬ ಭ್ರಮೆಯಿಂದ ತಮ್ಮ ಮನಸ್ಸಿನಲ್ಲಿರುವ ವಿಚಾರಗಳನ್ನು ಅರ್ಧಂಬರ್ಧ ಮಾತ್ರ ಹೇಳುತ್ತಾರೆ. ಅದನ್ನು ಎದುರಿರುವ ವ್ಯಕ್ತಿ ಅರ್ಥೈಸಿಕೊಳ್ಳುವಷ್ಟರಲ್ಲಿ ಆ ವಿಚಾರದ ಅರ್ಥವೇ ಬೇರೆ ಯಾಗಿರುತ್ತದೆ. ತಾವು ಸ್ವಲ್ಪ ಬುದ್ಧಿವಂತರು ಎಂಬ ಭ್ರಮೆಯಿರು ವವರ ವಿಷಯದಲ್ಲಿ ಹೀಗಾಗುತ್ತದೆ. ಅವರು ಪೂರ್ತಿ ಮಾತನಾಡುವುದೂ ಇಲ್ಲ, ಮಾತನಾಡದೆ ಇರುವುದೂ ಇಲ್ಲ. ಕಮ್ಯುನಿಕೇಶನ್‌ ಒಂದು ಕಲೆ. ಅದು ಪ್ರತಿಯೊಂದು ಸಂಬಂಧದ ಜತೆಯೂ ಬದಲಾಗುತ್ತಾ ಹೋಗುತ್ತದೆ. ಹಾಗೆಯೇ ಕಮ್ಯುನಿಕೇಶನ್‌ ಮಾಡುತ್ತಾ ಮಾಡುತ್ತಾ ನಮ್ಮ ಬುದ್ಧಿಯೂ ಚುರುಕಾಗುತ್ತ ಹೋಗುತ್ತದೆ. ನಾವು ಎಷ್ಟೋ ಸಲ ಬಾಯಿತಪ್ಪಿ ಆಡಿದ ಮಾತುಗಳು ಬೇರೆಯವರು ನಮ್ಮ ವ್ಯಕ್ತಿತ್ವವನ್ನೇ ತಪ್ಪಾಗಿ ತಿಳಿಯುವಂತೆ ಮಾಡುತ್ತವೆ. ಅತಿಯಾಗಿ ವಿವರ ಕೊಡುವುದು ಸಹ ಜನ ನಮ್ಮನ್ನು ಅನುಮಾನಿಸುವಂತೆ ಮಾಡುತ್ತದೆ. 

ಈ ಎಲ್ಲ ಕಾರಣಗಳಿಂದ ಇಂದು ಸಂವಹನ ಎಂಬುದು ಅತ್ಯಂತ ಬೇಡಿಕೆಯಲ್ಲಿರುವ ಹಾಗೂ ಹೆಚ್ಚೆಚ್ಚು ಯುವಕರು ಕಲಿಯಲು ಮುಗಿಬೀಳುತ್ತಿರುವ ಅಧ್ಯಯನದ ವಿಷಯ. ಸಂವಹನಕ್ಕೊಂದು ತಾತ್ವಿಕ ಹಾಗೂ ಶಾಸ್ತ್ರೀಯ ಪರಿಭಾಷೆ ನೀಡುವುದೇ ಅದರ ಅಧ್ಯಯನದ ಶಿಸ್ತು. ಯಶಸ್ವಿ ಸಂವಹನ ಕಾರರಾಗುವುದು ಹೇಗೆ ಎಂದು ಇಲ್ಲಿ ಹೇಳಿಕೊಡಲಾಗುತ್ತದೆ. ಮುಂದೆ ಅವರು ಸಮೂಹ ಮಾಧ್ಯಮಗಳಲ್ಲಿ, ಜನರ ಜತೆ ಬೆರೆಯುವ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾರೆ. ಕೆಲಸ ಮಾಡುವಾಗ ಸಂವಹನ ಮಾಡುವ ರೀತಿ, ಧ್ವನಿ ದೈಹಿಕ ಹಾವಭಾವ ಎಲ್ಲವನ್ನೂ ಹಿಡಿತದಲ್ಲಿಟ್ಟುಕೊಂಡು, ಏನು ಮಾತನಾಡಬೇಕು ಎಂದು ಮನಸ್ಸಿನಲ್ಲಿಯೇ ಹೊರಬಿಡುತ್ತೇವೆ. ಏಕೆಂದರೆ ನಾವು ಆಡುವ ಮಾತುಗಳು ಬೇರೆಯವರಿಗೆ ಮುಜುಗರ ಮೂಡಿಸದೆ, ಎದುರಿರುವ ವ್ಯಕ್ತಿಯ ಸ್ವಾಭಿಮಾನಕ್ಕೆ ಧಕ್ಕೆ ತರದೆ, ಸೂಕ್ಷ್ಮ ಮನಸ್ಥಿತಿಗಳನ್ನು ಅರಿತು ವಿಷಯಗಳನ್ನು ಚರ್ಚಿಸಬೇಕಾಗುತ್ತದೆ. ಆದರೆ, ನಮ್ಮವರ ಜತೆ, ಮನೆಯವರ ಜತೆ ನಾವು ಸಂವಹನ ಮಾಡುವುದೇ ಬೇರೆ ರೀತಿ ಅಲ್ಲವೇ! ನಮ್ಮವರನ್ನು ಕಂಡರೆ ನಮಗೆ ಪ್ರೀತಿ ಮಾತ್ರ ಅಲ್ಲ, ಅಧಿಕಾರವೂ ಇರುತ್ತದೆ. ಆದ್ದರಿಂದಲೇ ನಾವು ಧೈರ್ಯವಾಗಿ ನಮ್ಮ ಮನಸ್ಸಿಗೆ, ಬುದ್ಧಿಗೆ ತೋಚಿದ್ದೆಲ್ಲ ಹೊರಹಾಕುತ್ತೇವೆ. ನಮ್ಮ ಧ್ವನಿಯನ್ನು ಕೂಡ ಕೆಲಸ ಸಲ ಎತ್ತರಕ್ಕೇರಿಸಿ ಬೇಕಾಬಿಟ್ಟಿ ಮಾತನಾಡುತ್ತೇವೆ. ಎಲ್ಲರಿಗಿಂತ ಹೆಚ್ಚಾಗಿ ಅಪ್ಪ-ಅಮ್ಮನ ಬಳಿ ಸಮಾಧಾನವಾಗಿ ಕಮ್ಯುನಿಕೇಟ್‌ ಮಾಡುವುದಕ್ಕಿಂತ ಹೆಚ್ಚಾಗಿ ಜಗಳ ಆಡಿಕೊಂಡೇ ವಿಷಯಗಳನ್ನು ಹೇಳಿಕೊಳ್ಳುತ್ತೇವೆ. 

Advertisement

ಅದೇ ಹುಡುಗಿ-ಹುಡುಗರ ವಿಚಾರಕ್ಕೆ ಬಂದಾಗ; ಹುಡುಗ ಎಷ್ಟೇ ರೌಡಿ ಆಗಿದ್ದರೂ, ತರಲೆ ಆಗಿದ್ದರೂ, ಕೋಪಿಷ್ಠನಾಗಿ 
ದ್ದರೂ ತನ್ನ ಹುಡುಗಿಯನ್ನು ಮೊದಮೊದಲು ಪ್ರೀತಿಸಲು ಶುರುಮಾಡಿದಾಗ ಪಾಪ ಮಾತನಾಡುವುದಕ್ಕೇ ಬರುವುದಿಲ್ಲ ವೇನೋ ಎನ್ನುವ ರೀತಿಯಲ್ಲಿ ಬಾಯಿ ಬಿಡದೆ ಬರೀ ಕಣ್ಣಲ್ಲೇ ಸಂವಹನ ಮಾಡುತ್ತಿರುತ್ತಾರೆ. ಮಾತನಾಡಿದರೂ ಒಂದೋ ಎರಡೋ ಮಾತಷ್ಟೆ… ಅದೂ ಕೂಡ ಮೆಲು ಧ್ವನಿಯಲ್ಲಿ.  ಸಾಕಷ್ಟು ಪ್ರೀತಿಗಳು ಸಂವಹನವೇ ಇಲ್ಲದೆ ಎಲ್ಲಿ ಹುಟ್ಟಿತೋ ಅಲ್ಲೇ ಸತ್ತುಹೋಗುತ್ತವೆ. ಇನ್ನಷ್ಟು ಜನ ಏನೋ ಹೇಳಲು ಹೋಗಿ ಇನ್ನೇನನ್ನೋ ಹೇಳಿ ಸುಮ್ಮಸುಮ್ಮನೆ ತಪ್ಪಿತಸ್ಥರಾಗಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಕೋಪ ಬಂದಾಗ ಏನೇನೋ ಮಾತಾಡಿ ಪ್ರೀತಿಸಿದವರನ್ನು ನೋಯಿಸುತ್ತಾರೆ. ಕೆಲ ಪ್ರೇಮಿಗಳು;  ಅದರಲ್ಲೂ ಹುಡುಗರು, ತಾವು ತಮ್ಮ ಹುಡುಗಿಯನ್ನು ಎಷ್ಟು ಪ್ರೀತಿಸುತ್ತಾರೆ ಎಂದು ಮಾತಿನ ಮೂಲಕ ಕಮ್ಯುನಿಕೇಟ್‌ ಮಾಡುವುದೇ ಇಲ್ಲ. ಮಾತಿನಲ್ಲಿ ಯಾಕೆ ಹೇಳಿಕೊಳ್ಳಬೇಕು, ಒಂದು ಸಲ ಹೇಳಿ ಆಯಿತಲ್ಲ, ಪ್ರೀತಿ ಮನಸ್ಸಿನಲ್ಲಿರುತ್ತದೆ, ಅದನ್ನು ಯಾವಾಗಲೂ ತೋರಿಸಿಕೊಳ್ಳುತ್ತಾ ಇರಲು ಆಗುವುದಿಲ್ಲ ಅಂತ ಹೇಳುತ್ತಾರೆ.

ತನ್ನ ಹುಡುಗಿಯ ಹುಟ್ಟಿದ ಹಬ್ಬಕ್ಕೂ ಶುಭಾಶಯಗಳನ್ನು ತಿಳಿಸುವುದಿಲ್ಲ. ತಾನು ಯಾವ ಸಮಯಕ್ಕೆ ಎಲ್ಲಿ ಹೋಗುತ್ತೇನೆ, ಎಷ್ಟು ಹೊತ್ತಿಗೆ ಬರುತ್ತೇನೆ ಎಂಬುದನ್ನೂ ಹೇಳುವುದಿಲ್ಲ. ಫೋನ್‌ ಕೂಡ ಮಾಡುವುದಿಲ್ಲ. ಆದರೆ, ತಾನು ಬಂದ ತತ್‌ಕ್ಷಣ ತನ್ನ ಹುಡುಗಿ ನಗುನಗುತ್ತಾ ತನ್ನ ಜತೆ ಕಾಲ ಕಳೆಯಬೇಕು ಎಂದು ನಿರೀಕ್ಷಿಸುತ್ತಾರೆ. ಹುಡುಗಿ  ಮಾತ್ರ ಅವನನ್ನು ಯಾವುದೇ ಪ್ರಶ್ನೆ ಕೇಳಬಾರದು! ಈ ರೀತಿ ಸಂವಹನ ಸರಿಯಾಗಿಲ್ಲದಿರುವ ಸಂಬಂಧಗಳಲ್ಲಿ ಸಂಗಾತಿಗಳು ಒಂದು ದಿನ ಸಹಿಸಿಕೊಳ್ಳುತ್ತಾರೆ, ಒಂದು ವರ್ಷ ಸಹಿಸಿಕೊಳ್ಳುತ್ತಾರೆ; ಆಮೇಲೆ ಇಬ್ಬರೂ ಬೇರೆಯಾಗುತ್ತಾರೆ. ಆಮೇಲೆ ಹುಡುಗ ಪಶ್ಚಾತ್ತಾಪ ಪಡುತ್ತಾನೆ. ತನ್ನ ಹುಡುಗಿಯನ್ನು ತಾನು ಯಾವುದಕ್ಕೂ ಕಮ್ಮಿ ಮಾಡದೆ ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ, ಅವಳು ಮೋಸ ಮಾಡಿ ಹೊರಟು ಹೋದಳು ಅಂತ ಗೋಳಾಡುತ್ತಾರೆ.

ಮನುಷ್ಯರು ಮಾತ್ರವಲ್ಲ, ಪ್ರಾಣಿಗಳು ಕೂಡ ಪ್ರಕೃತಿ ನಿಯಮದಂತೆ ಸಂವಹನ  ಮಾಡಲೇಬೇಕು. ಪ್ರಕೃತಿ ಕೂಡ ನಿಯಮದಂತೆ ಸಂವಹನ ಮಾಡಲೇಬೇಕು. ಪ್ರಕೃತಿ ಕೂಡ ಸಮಸ್ತ ಜೀವರಾಶಿಯೊಂದಿಗೆ ನಿರಂತರ ಸಂವಹನ ನಡೆಸುತ್ತಿರುತ್ತದೆ. ಸೂರ್ಯ ಉದಯಿಸು ವಾಗ ಭೂಮಿಗೆ ಬೆಳಕು ನೀಡಿ ನಮ್ಮನ್ನು ಎಬ್ಬಿಸಲು ಕಮ್ಯುನಿ ಕೇಟ್‌ ಮಾಡುತ್ತಾನೆ. 

ಯೋಚಿಸಿ… ಕಮ್ಯುನಿಕೇಶನ್‌ ಸರಿಯಾಗಿಲ್ಲದಿದ್ದರೆ ಎಲ್ಲವೂ ಎಡವಟ್ಟಾಗುತ್ತದೆ. ಎಷ್ಟೋ ಸಂಬಂಧಗಳಲ್ಲಿ ಗಂಡ, ಹೆಂಡತಿ ಯಿಂದ ಸಾವಿರಾರು ಮೈಲಿಗಳ ದೂರದಲ್ಲಿ ಬೇರೆ ದೇಶದಲ್ಲಿ ದ್ದರೂ ಆತ ತನ್ನ ಹೆಂಡತಿಯ ಜತೆಗೆ ಸಂವಹನದ ಮೂಲಕವೇ ಸಂಸಾರ ನಡೆಸುತ್ತಾನೆ. ದೈಹಿಕವಾಗಿ ಒಂದೇ ಮನೆಯಲ್ಲಿ ಇರದಿದ್ದರೂ ಪ್ರೀತಿಯ ಮಾತಿನ ಮೂಲಕ ಅವರಿಬ್ಬರೂ ಒಂದೇ ಮನ ಸ್ಥಿತಿಯಲ್ಲಿ ಇರುತ್ತಾರೆ. ಎಷ್ಟೋ ಗಂಡ ಹೆಂಡತಿಯರು ಒಂದೇ ಮನೆಯಲ್ಲಿದ್ದರೂ ಸಾವಿರಾರು ಮೈಲಿ ದೂರದಲ್ಲಿರುವವರಂತೆ ಇರುತ್ತಾರೆ. ಅವರ ನಡುವಿನ ಸಂವಹನ ಹಾಗಿರುತ್ತದೆ. 

ಸಂವಹನ ಕೇವಲ ತಾಂತ್ರಿಕ ಪ್ರಕ್ರಿಯೆಯಲ್ಲ. ಅದು ಪತ್ರಿ ಕೋದ್ಯಮದ ಮಾಧ್ಯಮವೊಂದೇ ಅಲ್ಲ. ಸಂವಹನ ಪ್ರತಿ ಜೀವಿಯ ಪ್ರತಿನಿತ್ಯದ ಅಗತ್ಯ. ಊಟವಿಲ್ಲದೆ ಒಂದು ವಾರ ಬದುಕಿರಬಹುದು, ಆದರೆ ಸಮಾಜ ಜೀವಿಯನ್ನು ಒಂದು ವಾರ ಸಂವಹನವಿಲ್ಲದೆ ಕೂಡಿ ಹಾಕಿದರೆ ಬದುಕುವುದು ಕಷ್ಟ ಎಂದು ಪ್ರಸಿದ್ಧ ಸಂವಹನ ಶಾಸ್ತ್ರಜ್ಞನೊಬ್ಬ ಹೇಳಿದ್ದ. 
ಜೈಲಿನಲ್ಲಿ ವಿಧಿಸುವ ಒಂಟಿಕೋಣೆಯ ಶಿಕ್ಷೆ ಏಕೆ ಅತ್ಯಂತ ಕ್ರೂರ ಎಂಬುದಕ್ಕೆ ಕಾರಣ ಇದೇ.

ರೂಪಾ ಅಯ್ಯರ್‌

Advertisement

Udayavani is now on Telegram. Click here to join our channel and stay updated with the latest news.

Next