Advertisement

ಎರಡು ವಿಸ್ತರಿತ ಅವಧಿ ಮುಗಿದರೂ ಪೂರ್ಣಗೊಳ್ಳದ ಸೇತುವೆ

10:14 PM Jul 23, 2019 | mahesh |

ಸುಳ್ಯ: ಮೂರು ವರ್ಷದ ಹಿಂದೆ ಆರಂಭಗೊಂಡಿದ್ದ ಅರಂಬೂರು ಸೇತುವೆ ಕಾಮಗಾರಿ ಇನ್ನೂ ಪೂರ್ಣ ಹಂತಕ್ಕೆ ತಲುಪಿಲ್ಲ. ಹಾಗಾಗಿ ಜನರಿಗೆ ಈ ಮಳೆಗಾಲದಲ್ಲಿ ಕೂಡ ಸುತ್ತು ಬಳಸಿ ಸಂಚಾರ ಕಟ್ಟಿಟ್ಟ ಬುತ್ತಿ. ಕೆಲ ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರು ಸೇತುವೆ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಕಾಮಗಾರಿ ಜೂನ್‌ ಪ್ರಥಮ ವಾರದಲ್ಲಿ ಸಂಚಾರ ಮುಕ್ತವಾಗಬೇಕು ಎಂದು ಸೂಚಿಸಿದ್ದರೂ, ಕಾಮಗಾರಿ ಕುಂಟುತ್ತಿದೆ.

Advertisement

4.90 ಕೋಟಿ ರೂ. ವೆಚ್ಚ
ಆಲೆಟ್ಟಿ ಗ್ರಾಮದ ಪಯಸ್ವಿನಿ ನದಿಗೆ ಅರಂಬೂರು ಬಳಿ 4.90 ಕೋ.ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗುತ್ತಿದೆ. 2015-16ನೇ ಸಾಲಿನ ಆಯವ್ಯಯದಲ್ಲಿ 4.90 ಕೋಟಿ ರೂ. ಅನುದಾನ ಬಿಡುಗಡೆಗೊಂಡು ಕಾಮಗಾರಿ ಆರಂಭಗೊಂಡಿತ್ತು. ಸೇತುವೆಯ ಐದು ಅಂಕಣಗಳ ಕಾಮಗಾರಿ ಪೂರ್ತಿಗೊಂಡಿದ್ದು, ಕೊನೆ ಪಿಲ್ಲರ್‌ನ ಸ್ಲಾಬ್‌ ಕೆಲಸ ಪ್ರಗತಿಯಲ್ಲಿದೆ. 82.54 ಮೀ. ಉದ್ದ, 7.5 ಮೀ. ಮೇಲ್ಭಾಗದ ಅಗಲ ಮತ್ತು 9 ಮೀ. ಎತ್ತರವಿದೆ. ನೀರು ಹರಿಯಲು 15 ಮೀ. ಅಗಲದ ಐದು ಕಿಂಡಿಗಳಿವೆ. ನಾಲ್ಕು ಪಿಯರ್‌ ಮತ್ತು ಎರಡು ಅಬೆಟ್‌ಮೆಂಟ್‌ ಒಳಗೊಂಡಂತೆ ಸುಸಜ್ಜಿತ ಆರ್ಸಿಸಿಟಿ ಬೀಮ್‌ ಬ್ರಿಡ್ಜ್ ಇದಾಗಿದೆ.

ಆಲೆಟ್ಟಿ ಗ್ರಾಮದ ಅರಂಬೂರು, ನೆಡಿಚ್ಚಿಲ್‌, ಕೂಟೇಲು ಸಹಿತ ಸುಮಾರು 350ಕ್ಕೂ ಹೆಚ್ಚು ಕುಟುಂಬಗಳು ನಗರದ ಸಮೀಪವೇ ಇದ್ದರೂ, ಸೇತುವೆ ಇಲ್ಲದ ಕಾರಣ ಸುಳ್ಯಕ್ಕೆ ಬರಬೇಕಾದರೆ ಆಲೆಟ್ಟಿಗೆ ತೆರಳಿ ಸುತ್ತು ಬಳಸಿ ಸುಮಾರು 16 ಕಿ.ಮೀ. ಪ್ರಯಾಣಿಸಬೇಕಿತ್ತು. ಇಲ್ಲದಿದ್ದರೆ ದೋಣಿ ಬಳಸಿ ನದಿ ದಾಟಬೇಕಿತ್ತು. ಪದ್ಮಶ್ರೀ ಪುರಸ್ಕೃತ ಗಿರೀಶ್‌ ಭಾರದ್ವಾಜ್‌ ಅವರು 1989ರಲ್ಲಿ ತೂಗು ಸೇತುವೆ ನಿರ್ಮಿಸಿ ಪಾದಚಾರಿ ನಡಿಗೆಗೆ ವ್ಯವಸ್ಥೆ ಕಲ್ಪಿಸಿದ್ದರು. ಇದರಿಂದ ದೋಣಿಯಲ್ಲಿ ದಾಟುವ ಪ್ರಮೇಯ ತಪ್ಪಿತ್ತು. ಬವಣೆಗೆ ಮುಕ್ತಿ ಆದರೆ ವಾಹನ ಓಡಾಟಕ್ಕೆ ಸಾಧ್ಯವಾಗದ ಕಾರಣ ಜನರು ದೈನಂದಿನ ಅಗತ್ಯಗಳಿಗೆ ಬೇಕಾದ ಎಲ್ಲ ವಸ್ತುಗಳನ್ನು ತಲೆಯಲ್ಲಿ ಹೊತ್ತು ತೂಗು ಸೇತುವೆ ದಾಟುವ ಸ್ಥಿತಿ ಈಗಲೂ ಮುಂದುವರಿದಿದೆ. ಅರಂಬೂರು ಸೇತುವೆ ಪೂರ್ಣಗೊಂಡರೆ ಈ ಬವಣೆಗೆ ಮುಕ್ತಿ ಸಿಗಲಿದೆ. ಆಲೆಟ್ಟಿ, ಪೆರಾಜೆ ಗ್ರಾಮಕ್ಕೆ, ಆಲೆಟ್ಟಿ ಮೂಲಕ ಬಡ್ಡಡ್ಕ-ಕಲ್ಲಪ್ಪಳ್ಳಿ, ಆಲೆಟ್ಟಿ-ಕೋಲ್ಚಾರ್‌ -ಬಂದಡ್ಕ, ಬಡ್ಡಡ್ಕ-ಕೂರ್ನಡ್ಕ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ.

ಅವಧಿ ಮುಗಿದಿದೆ
2017 ಜನವರಿ ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾರ್ಚ್‌ ತಿಂಗಳಲ್ಲಿ ಸೇತುವೆ ಕಾಮಗಾರಿ ಆರಂಭಗೊಂಡಿತ್ತು. ಕಾಮಗಾರಿ ಮುಗಿಸಲು 11 ತಿಂಗಳ ಅವಧಿ ನೀಡಲಾಗಿದ್ದು, ಅದರಂತೆ 2018 ಮಾರ್ಚ್‌ಗೆ ಅವಧಿ ಮುಗಿದಿದೆ. ಕಾಮಗಾರಿ ಪೂರ್ತಿಯಾಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರು 2019ರ ಮಾರ್ಚ್‌ ತನಕ ಅವಧಿ ವಿಸ್ತರಿಸುವಂತೆ ಕೋರಿಕೆ ಸಲ್ಲಿಸಿದ್ದರು. ಈ ಅವಧಿ ಮುಗಿದು ನಾಲ್ಕು ತಿಂಗಳು ಕಳೆದರೂ ಕಾಮಗಾರಿ ಪೂರ್ತಿ ಆಗಿಲ್ಲ.

ಗುತ್ತಿಗೆದಾರರಿಗೆ ನೋಟಿಸ್‌
ಗುತ್ತಿಗೆ ಸಂಸ್ಥೆ 2018ರಲ್ಲೇ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಆದರೆ ಆಗಿಲ್ಲ. ವಿಳಂಬದ ಬಗ್ಗೆ ನೋಟಿಸ್‌ ನೀಡಿದ್ದೇವೆ. ಶೇ.50ಕ್ಕೂ ಅಧಿಕ ಕೆಲಸ ಆಗಿದೆ. ಇನ್ನೂ ಆಗಬೇಕಿದೆ. ವಿಳಂಬಕ್ಕೆ ಗುತ್ತಿಗೆದಾರರು ಮಳೆಯ ಕಾರಣ ನೀಡುತ್ತಿದ್ದಾರೆ.
– ಸಣ್ಣೇಗೌಡ, ಎಇಇ, ಲೋಕೋಪಯೋಗಿ ಇಲಾಖೆ

Advertisement
Advertisement

Udayavani is now on Telegram. Click here to join our channel and stay updated with the latest news.

Next