Advertisement

Google Map: ಪೂರ್ಣಗೊಳ್ಳದ ಸೇತುವೆ… ಗೂಗಲ್ ಮ್ಯಾಪ್ ನಂಬಿ ಪರದಾಡಿದ ವಾಹನ ಸವಾರರು

02:19 PM Mar 27, 2024 | Team Udayavani |

ಗೋಕರ್ಣ : ಕಳೆದ 7 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಂಜಗುಣಿ-ಗಂಗಾವಳಿ ಸೇತುವೆ ಕಾಮಗಾರಿ ಪೂರ್ಣಗೊಳ್ಳದೇ ಜನರು ಪರಿತಪಿಸುವಂತಾಗಿದೆ. ಇದರ ನಡುವೆ ಕಾರವಾರ, ಯಲ್ಲಾಪುರ ಕಡೆಯಿಂದ ಆಗಮಿಸುವವರು ಗೂಗಲ್ ಲೊಕೇಶನ್ ಆಧಾರದಲ್ಲಿ ಆಗಮಿಸಿದವರಿಗೆ ಇದೇ ಸಮೀಪದ ಮಾರ್ಗವೆಂದು ತೋರಿಸುವುದರಿಂದ ಪ್ರತಿನಿತ್ಯ ಹತ್ತಾರು ವಾಹನಗಳು ಬಂದು ವಾಪಸ್ಸಾಗುವಂತಾಗಿದೆ.

Advertisement

ಕಾರವಾರ, ಯಲ್ಲಾಪುರ ಕಡೆಯಿಂದ ಬಂದವರಿಗೆ ಇದು ಸಮೀಪದ ರಸ್ತೆಯೆಂದು ತೋರಿಸುವುದರಿಂದ ಇಲ್ಲಿಗೆ ಆಗಮಿಸಿ ಅಪೂರ್ಣಗೊಂಡ ಸೇತುವೆಯನ್ನು ನೋಡಿ ವಾಪಸ್ ಮರಳುವಂತಾಗಿದೆ. ರಾತ್ರಿ ಹಗಲೆನ್ನದೇ ಪ್ರಯಾಣಿಕರು ಪರಿತಪಿಸುವಂತಾಗಿದೆ. ಇನ್ನು ಕಾರು ಸವಾರರು ಮಂಜಗುಣಿಯ ಬಳಿ ಸ್ವಲ್ಪ ಅಗಲವಾದ ರಸ್ತೆ ಇರುವುದರಿಂದ ನೇರವಾಗಿ ಸೇತುವೆಯನ್ನೇ ಏರುತ್ತಿದ್ದಾರೆ. ಆದರೆ ಗಂಗಾವಳಿಯಲ್ಲಿ ರಸ್ತೆ ಸಣ್ಣಪ್ರಮಾಣದಲ್ಲಿ ಪೂರ್ಣ ಮಾಡದಿದ್ದರಿಂದಾಗಿ ಮತ್ತೆ ವಾಹನದವರು ವಾಪಸ್ ಬರುವಂತಾಗಿದೆ.

ಮಂಜಗುಣಿಯಿಂದ ಸೇತುವೆ ಏರಲು ಕಾರ್‌ನವರಿಗೆ ಸ್ವಲ್ಪ ಸುಲಭ ಎನಿಸಿದರೂ ಪುನಃ ಮತ್ತೆ ಕೆಳಗಿಳಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತವಾಗುವ ಸಾಧ್ಯತೆಯಿದೆ. ಇಲ್ಲಿ ಸಾಕಷ್ಟು ದ್ವಿಚಕ್ರ ವಾಹನದವರು ಆಯತಪ್ಪಿ ಬಿದ್ದು ಗಾಯಗೊಂಡವರು ಇದ್ದಾರೆ. ಇನ್ನು ಗೋಕರ್ಣದಿಂದ ಯಲ್ಲಾಪುರ, ಕಾರವಾರ ಕಡೆ ತೆರಳುವವರಿಗೂ ಗೂಗಲ್ ಮ್ಯಾಪ್ ಹೀಗೆ ತೋರಿಸುವುದರಿಂದ ಅವರು ಕೂಡ ಗಂಗಾವಳಿಗೆ ಬಂದು ವಾಪಸ್ಸಾಗುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸದಿರುವುದರಿಂದ ಈ ಅದ್ವಾನ ಮುಂದುವರೆದಿದೆ.

2018 ರಲ್ಲಿ ಅಂದು ಶಾಸಕರಾಗಿದ್ದ ಸತೀಶ ಸೈಲ್ ಅವರು 30 ಕೋಟಿ ರೂ. ವೆಚ್ಚದ ಈ ಸೇತುವೆ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಇವರು ಪರಾಭವಗೊಂಡಿದ್ದರು. ಬಿಜೆಪಿಯಿಂದ ರೂಪಾಲಿ ನಾಯ್ಕ ಆಯ್ಕೆಯಾದರೆ, ಇನ್ನು ಕುಮಟಾ ಕ್ಷೇತ್ರದಿಂದ ಬಿಜೆಪಿಯ ದಿನಕರ ಶೆಟ್ಟಿ ಆಯ್ಕೆಯಾಗಿದ್ದರು. ಆದರೆ ಈ ಇಬ್ಬರು ಶಾಸಕರು ಪ್ರಯತ್ನಿಸಿದರೆ ಈ ಸೇತುವೆ ಕಾಮಗಾರಿ ಎಂದೋ ಮುಗಿದು ಹೋಗುತ್ತಿತ್ತು. ಆದರೆ ಇವರು ಅಷ್ಟಾಗಿ ಗಂಭೀರವಾಗಿ ತೆಗೆದುಕೊಂಡಿಲ್ಲ ಎನ್ನುವುದು ಹಲವರು ಅಸಮಧಾನ ವ್ಯಕ್ತಪಡಿಸುತ್ತಾರೆ.

ಈಗ ಮತ್ತೆ ಭೂಮಿಪೂಜೆ ನೆರವೇರಿಸಿದ ಸತೀಶ ಸೈಲ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಗೇ ಕುಮಟಾ ಕ್ಷೇತ್ರದಿಂದಲೂ ದಿನಕರ ಶೆಟ್ಟಿ ಆಯ್ಕೆಯಾಗಿದ್ದಾರೆ. ಆದರೆ ಈ ಬಗ್ಗೆ ದಿನಕರ ಶೆಟ್ಟಿ ಹೆಚ್ಚಿನ ಗಮನ ಹರಿಸಿದಂತೆ ಕಂಡುಬರುತ್ತಿಲ್ಲ. ಶಾಸಕ ಸತೀಶ ಸೈಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾರ್ಚ್ ಅಂತ್ಯದೊಳಗೆ ಸೇತುವೆ ಕಾಮಗಾರಿ ಪೂರ್ಣ ಮಾಡುವುದಾಗಿ ಕಳೆದ ೩ ತಿಂಗಳ ಹಿಂದೆಯೇ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಹೀಗಾಗಿ ಸ್ಥಳೀಯರು ಕೂಡ ಪ್ರತಿಭಟನೆಗೆ ಇಳಿಯದೇ ಶಾಂತರಾಗಿದ್ದರು.

Advertisement

ಸೇತುವೆ ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದಿದೆ. ಆದರೆ ಈಗ ಬಾಕಿಯಿರುವುದು ಎರಡು ಭಾಗಗಳ ರಸ್ತೆಗಳು ಮಾತ್ರ. ಆದರೆ ಈ ರಸ್ತೆ ನಿರ್ಮಾಣ ಮಾಡದೇ ಹಾಗೇ ಬಿಟ್ಟಿರುವುದು ಕಾಮಗಾರಿ ಪೂರ್ಣಗೊಳ್ಳದಿರಲು ಕಾರಣವಾಗಿದೆ. ಮಂಜಗುಣಿ ಭಾಗದಲ್ಲಿ ಒಂದಿಷ್ಟು ಮಣ್ಣು ಹಾಕಿರುವುದರಿಂದ ಒಂದು ಕಾರ್ ಸೇತುವೆ ಏರಲು ಸಾಧ್ಯವಾಗುತ್ತದೆ. ಆದರೆ ಗಂಗಾವಳಿ ಭಾಗದಲ್ಲಿ ದ್ವಿಚಕ್ರ ವಾಹನ ಹೊರತುಪಡಿಸಿ ಇನ್ನು ಯಾವುದೇ ವಾಹನ ಇಳಿಯಲು, ಹತ್ತಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮತ್ತೆ ಪ್ರವಾಸಿಗರ, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಗುತ್ತಿಗೆದಾರನಿಗೆ ಸೇತುವೆ ನಿರ್ಮಾಣದ ಬಿಲ್ ಆಗದಿರುವುದರಿಂದ ಆತ ಎರಡು ಕಡೆಯ ರಸ್ತೆ ಪೂರ್ಣಗೊಳಿಸದೇ ಹಾಗೇ ಬಿಡಲಾಗಿದೆ ಎಂದು ಹೇಳಲಾಗುತ್ತದೆ.

ಈ ಸೇತುವೆಯ ಎರಡು ಕಡೆ ರಸ್ತೆ ನಿರ್ಮಿಸಿ ಮಾರ್ಚ್ ಅಂತ್ಯದೊಳಗಾಗಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಶಾಸಕ ಸತೀಶ ಸೈಲ್, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪತ್ರಿಕಾ ಹೇಳಿಕೆ ನೀಡಿದ್ದರು. ಅದರಂತೆ ನಾವು ಸುಮ್ಮನಿದ್ದೇವು. ಮಾರ್ಚ್ ಮುಗಿದ ನಂತರ ವಿಭಿನ್ನ ಹೋರಾಟಕ್ಕೆ ಇಳಿಯಲಿದ್ದೇವೆ.
– ಶ್ರೀಪಾದ ಟಿ. ನಾಯ್ಕ, ಸ್ಥಳೀಯ ಪ್ರಮುಖರು ಮಂಜಗುಣಿ

ಈ ಸೇತುವೆ ಪೂರ್ಣಗೊಂಡರೆ ಕಾರವಾರ, ಯಲ್ಲಾಪುರ ಕಡೆಗಳಿಂದ ಗೋಕರ್ಣಕ್ಕೆ ಬರುವವರಿಗೆ 15 ರಿಂದ 20 ಕಿ.ಮೀ. ಉಳಿತಾಯವಾಗುತ್ತಿತ್ತು. ಇದರ ಜತೆಗೆ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಹಾಗೇ ಈ ದಾರಿಯುದ್ದಕ್ಕೂ ವ್ಯಾಪಾರ ವಹಿವಾಟುಗಳು ಆರಂಭಗೊಳ್ಳುತ್ತಿದ್ದವು. ಈ ಸೇತುವೆ ಪೂರ್ಣಗೊಂಡರೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಜನರು ಉದ್ಯೋಗ ಪಡೆದುಕೊಳ್ಳುತ್ತಿದ್ದರು.
– ಸದಾನಂದ ಎಸ್. ನಾಯ್ಕ, ಸ್ಥಳೀಯ ಪ್ರಮುಖರು ಗಂಗಾವಳಿ

ಇದನ್ನೂ ಓದಿ: Sirsi Marikamba: ಗದ್ದುಗೆಯಿಂದ ಎದ್ದು, ಜಾತ್ರಾ ಚಪ್ಪರ ಬಿಟ್ಟು ಹೊರ ನಡೆಯುತ್ತಿರುವ ದೇವಿ

Advertisement

Udayavani is now on Telegram. Click here to join our channel and stay updated with the latest news.

Next