ಹಟ್ಟಿಚಿನ್ನದಗಣಿ: ರೋಡಲಬಂಡಾ(ತ) ಗ್ರಾಪಂ ಆವರಣದ ಎದುರೇ ಮಲ ಮೂತ್ರ ವಿಸರ್ಜನೆ ಮಾಡುವುದರಿಂದ ಕಾರ್ಯಾಲಯದಲ್ಲಿ ಅಸ್ವಚ್ಛತೆ ತಾಂಡವಾಡುತ್ತಿದೆ. ಪಂಚಾಯ್ತಿ ಕಾರ್ಯಾಲಯ ಆವರಣದಲ್ಲಿ ಗಿಡ- ಗಂಟಿ ಬೆಳೆದಿದ್ದು, ಸೊಳ್ಳೆ, ಕ್ರಿಮಿಕೀಟಗಳ ಕಾಟ ಹೆಚ್ಚಾಗಿದೆ. ಜತೆಗೆ ವಿಷ ಜಂತುಗಳು ಸೇರಿಕೊಳ್ಳುವ ಅಪಾಯವಿದೆ. ಇಷ್ಟೆಲ್ಲ ಸಮಸ್ಯೆ ಕಣ್ಣೆದುರೇ ಕಂಡರೂ ಅಭಿವೃದ್ಧಿ ಅಧಿಕಾರಿಗಳು ಮಾತ್ರ ಗಮನ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪಂಚಾಯ್ತಿ ಕಾರ್ಯಾಲಯದ ಶೌಚಾಲಯದಲ್ಲಿ ನೀರಿನ ಸೌಲಭ್ಯವಿಲ್ಲದೇ ಇರುವುದುದರಿಂದ ಬಳಕೆ ಮಾಡದೇ ನನೆಗುದಿಗೆ ಬಿದ್ದಿದೆ. ಸಿಬ್ಬಂದಿಗಳೂ ಶೌಚಕ್ಕೆ ಬಯಲನ್ನೇ ಅವಲಂಬಿಸಿದ್ದಾರೆ. ಶೌಚಾಲಯ ದುರಸ್ತಿಗೊಳಿಸಿ ಕಾರ್ಯಾಲಯದ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾದ ಅಧಿಕಾರಿಗಳೇ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಸ್ವಚ್ಛತಾ ಆಂದೋನಲನಕ್ಕೆ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿದೆ. ಆದರೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಸರ್ಕಾರದ ಯೋಜನೆ ಸಮರ್ಪಕ ಜಾರಿ ಹಾಗೂ ಬಳಸಿಕೊಳ್ಳುತ್ತಿಲ್ಲ ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಗ್ರಾಮದಲ್ಲಿ ಶೌಚಾಲಯ ಇಲ್ಲದಿರುವುದರಿಂದ ಮಹಿಳೆಯರು, ಮಕ್ಕಳು ಬಯಲಿನಲ್ಲಿಯೇ ಶೌಚ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಈ ಕೂಡಲೇ ಸಂಬಂಧಪಟ್ಟ ಅಧಿ ಕಾರಿಗಳು ಗ್ರಾಮದಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಗ್ರಾಪಂ ತೀರ ಗಲೀಜಾಗಿದೆ. ಯಾರೇ ಅಭಿವೃದ್ಧಿ ಅಧಿಕಾರಿಗಳಾಗಿ ಬಂದರೂ ಬದಲಾಗುತ್ತಿಲ್ಲ. ಸುತ್ತಮುತ್ತಲಿನ ಜನ ಪಂಚಾಯ್ತಿ ಕಾರ್ಯಾಲಯದ ಎದುರು ಗಲೀಜು ಮಾಡುತ್ತಾರೆ. ತಮ್ಮ ಕಾರ್ಯಾಲಯವನ್ನೇ ಸ್ವಚ್ಛವಾಗಿಟ್ಟುಕೊಳ್ಳದ ಅಧಿ ಕಾರಿಗಳು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾಗಿ ಬಂದಿರುವುದು ದುರದೃಷ್ಟಕರ. –
ನಿಂಗಪ್ಪ, ರೋಡಲಬಂಡಾ(ತ) ಗ್ರಾಮದ ನಿವಾಸಿ