ಬೆಳಗಾವಿ: ಹನ್ನೊಂದು ದಿನಗಳ ಕಾಲ ಭಕ್ತಿ ಭಾವದಿಂದ ಪೂಜಿಸಿ, ಕುಣಿದು ಕುಪ್ಪಳಿಸಿ 26 ಗಂಟೆಗಳ ಕಾಲ ನಿರಂತರಮೆರವಣಿಗೆ ಮಾಡಿ ವಿಸರ್ಜನೆ ಮಾಡಿರುವ ನಿಮ್ಮ ಗಣಪನ ಅವಸ್ಥೆ ಒಮ್ಮೆ ಇಲ್ಲಿ ನೋಡಿ. ಹೊಂಡದಲ್ಲಿ ಪೂಜ್ಯನೀಯ ಭಾವದಿಂದ ಮೂರ್ತಿಗಳನ್ನು ವಿಸರ್ಜನೆ ಮಾಡಿರುವ ಸ್ಥಳದಲ್ಲಿ ಕಣ್ಣು, ಬಾಯಿ, ಮೂಗು ಮುಚ್ಚಿಕೊಂಡೇ ಸಾಗುವುದು ಅನಿವಾರ್ಯವಾಗಿದೆ.
ಬೆಳಗಾವಿ ನಗರದ ಗಣೇಶೋತ್ಸವ ಎಂದರೆ ಎಲ್ಲಿಲ್ಲದ ಸಂಭ್ರಮ. ಮಹಾರಾಷ್ಟ್ರದ ಮುಂಬೈ, ಪುಣೆ ಹೊರತುಪಡಿಸಿದರೆ ಕರ್ನಾಟಕದಲ್ಲಿಯೇ ಅತ್ಯಂತ ವಿಜೃಂಭಣೆಯ ಗಣೇಶನ ಉತ್ಸವ ನಡೆಯುತ್ತದೆ. ಹನ್ನೊಂದನಕೇ ದಿನಕ್ಕೆ ವಿಸರ್ಜನಾ ಮೆರವಣಿಗೆಯಂತೂ ಮಾದರಿ ಆಗಿದೆ. ಸಂಪ್ರದಾಯದಂತೆ ಗಣಪನನ್ನು ವಿಸರ್ಜನೆ ಮಾಡಿರುವ ಹೊಂಡಗಳತ್ತ ಕಣ್ಣು ಹಾಯಿಸಿದಾಗ ಗಣಪನ ಮೂರ್ತಿಗಳ ಅವಸ್ಥೆ ನೋಡಿ ಅಯ್ಯೋ ಎನಿಸುತ್ತಿದೆ.
ಬಣ್ಣ ಮಾಸಿಲ್ಲ, ಮೂರ್ತಿ ಕರಗಿಲ್ಲ: ವಿಸರ್ಜನೆ ಮಾಡಿರುವ ಬೆನಕನ ಪಿಒಪಿ ಮಾದರಿಯ ಬಹುತೇಕ ಮೂರ್ತಿಗಳು ಇನ್ನೂ ನೀರಿನಲ್ಲಿ ಕರಗಿಲ್ಲ. ಮೂರ್ತಿಗಳ ಬಣ್ಣಗಳೂ ಮಾಸಿಲ್ಲ. ಯಥಾವತ್ತಾಗಿ ಕಣ್ಣಿಗೆ ರಾಚುತ್ತಿವೆ. ನೀರು ಹೊರ ಬಿಡುತ್ತಿದ್ದಂತೆ ಮೂರ್ತಿಗಳೆಲ್ಲ ಹೊರಗೆ ಕಾಣ ಸಿಗುತ್ತಿದ್ದು, ಆರಾಧ್ಯ ದೇವರು ಗಣಪನ ದುಸ್ಥಿತಿಯಿಂದ ಭಕ್ತರೆಲ್ಲರೂ ಕಣ್ಣು, ಬಾಯಿ, ಮೂಗು ಮುಚ್ಚಿಕೊಂಡು ಅಡ್ಡಾಡುತ್ತಿದ್ದಾರೆ. ಕೆಲವರಂತೂ ಮೂಗು ಮುಚ್ಚಿಕೊಂಡೇ ಗಣಪನಿಗೆ ನಮಸ್ಕರಿಸುತ್ತಿರುವ ದೃಶ್ಯಗಳೂ ಕಂಡು ಬರುತ್ತಿವೆ.
ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ: ಮಣ್ಣಿನ ಗಣಪಗಳ ಪ್ರತಿಷ್ಠಾಪನೆ ಮಾಡುವಂತೆ ಆದೇಶ ಇದ್ದರೂ ಯಾರೂ ಅದನ್ನು ಪಾಲಿಸುತ್ತಿಲ್ಲ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಬಾರದೆಂಬ ಉದ್ದೇಶದಿಂದಲೋ ಅಥವಾ ಕಟ್ಟುನಿಟ್ಟಾಗಿ ಕಾನೂನು ಜಾರಿ ಮಾಡಲು ಜಿಲ್ಲಾಡಳಿತದ ನಿರ್ಲಕ್ಷ್ಯವೋ ಗೊತ್ತಿಲ್ಲ. ಆದರೆ ಕಡ್ಡಾಯವಾಗಿ ಎಲ್ಲರೂ ಪ್ಲಾಸ್ಟರ್ ಆಪ್ ಪ್ಯಾರಿಸ್ ಗಣಪನನ್ನೇ ಪ್ರತಿಷ್ಠಾಪಿಸುತ್ತಿರುವುದು ಜಿಲ್ಲಾಡಳಿತ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಬೆಳಗಾವಿಯಲ್ಲಿ ಅದ್ಧೂರಿಯಾಗಿ ಆಚರಣೆ ಆದ ಗಣೇಶೋತ್ಸವ ನಂತರದ ಸ್ಥಿತಿಗತಿ ಬಗ್ಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಬೆಳಗಾವಿ ನಗರದಲ್ಲಿ ಸುಮಾರು 10ಕ್ಕೂ ಹೆಚ್ಚು ಕಡೆಗೆ ಗಣಪತಿ ವಿಸರ್ಜನಾ ಹೊಂಡಗಳನ್ನು ನಿರ್ಮಾಣ ಮಾಡಲಾಗಿತ್ತು. ಕೆಲವು ಸಂಚಾರಿ ಹೊಂಡಗಳೂ ಇದ್ದವು. ಪ್ರತಿ ವರ್ಷದಂತೆ ಅತಿ ಹೆಚ್ಚು ಮೂರ್ತಿ ವಿಸರ್ಜನೆ ಆಗುವ ಕಪಿಲೇಶ್ವರ ಹೊಂಡ, ಜಕ್ಕೇರಿ ಹೊಂಡದಲ್ಲಿ ಈಗಿನ ಸ್ಥಿತಿ ಅಯ್ಯೋ ಎನಿಸುತ್ತಿದೆ.
ವಿಸರ್ಜನಾ ಮೆರವಣಿಗೆ ಮುಗಿದು ಇನ್ನೂ 15 ದಿನಗಳು ಕಳೆದಿಲ್ಲ. ಆದರೆ ಇಲ್ಲಿಯ ದುಸ್ಥಿತಿ ಬಗ್ಗೆ ಸಾರ್ವಜನಿಕರಿಗೆ ಅಸಂಹ್ಯ ಆಗುತ್ತಿದೆ.ಜಕ್ಕೇರಿ ಹೊಂಡ ಹಾಗೂ ಕಪಿಲೇಶ್ವರ ಹೊಂಡದಲ್ಲಿದ್ದ ನೀರನ್ನು ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಹೊರಬಿಡುತ್ತಿದ್ದಾರೆ. ಹೀಗಾಗಿ ಹೊಂಡದಲ್ಲಿ ನೀರು ಖಾಲಿಯಾದಂತೆ ಮೂರ್ತಿಗಳ ಅವಸ್ಥೆ ಅನಾವರಣಗೊಂಡಿದೆ. ಹೊಂಡದಲ್ಲಿಯೇ ಹೂವು, ಹಣ್ಣುಗಳನ್ನು ಹಾಕಿದ್ದರಿಂದ ಸುತ್ತಲಿನ ಪ್ರದೇಶವೆಲ್ಲ ಗಬ್ಬು ನಾರುತ್ತಿದೆ. ಹೊಂಡದ ಸುತ್ತಲೂ ಹಾಯ್ದು ಹೋಗುವ ಜನರು ಮೂಗು ಮುಚ್ಚಿಕೊಂಡೇ ಹೋಗುತ್ತಿದೆ. ಅಷ್ಟೊಂದು ದುರ್ವಾಸನೆ ಬೀರುತ್ತಿದೆ.
-ಭೈರೋಬಾ ಕಾಂಬಳೆ