ರೋಣ: ಉತ್ತಮ ಸಂಗೀತಗಾರರು ಹಾಗೂ ಜನಪದ ಕಲಾವಿದರನ್ನು ನಾಡಿಗೆ ಪರಿಚಯಿಸಿದ ಕೋತಬಾಳ ಗ್ರಾಮದಲ್ಲಿನ ದಲಿತ ಕಾಲೋನಿಯಲ್ಲಿ ಆಳೆತ್ತರದ ತಗ್ಗು-ದಿನ್ನೆಗಳು ಬಿದ್ದು ಪರಿಣಾಮ ಸಾರ್ವಜನಿಕರು ಮನೆಯಿಂದ ಹೊರಬರಲು ಒದ್ದಾಡುತ್ತ ಸಾಂಕ್ರಾಮಿಕ ರೋಗಗಳ ಮಧ್ಯದಲ್ಲಿಯೇ ಜೀವನ ನಡೆಸುವಂತ ದುಸ್ಥಿತಿ ಬಂದೊದಗಿದೆ.
ಸರ್ಕಾರ ದಲಿತರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆ ನೀಡಿ, ಕೋಟಿಗಟ್ಟಲೇ ಹಣ ಬಿಡುಗಡೆ ಮಾಡಿದ್ದರೂ ಕೋತಬಾಳ ಗ್ರಾಮದ ಮಾಡಲಗೇರಿ ರಸ್ತೆಯಲ್ಲಿ ಹೊಂದಿಕೊಂಡಿರುವ ದಲಿತ ಕಾಲೋನಿಯಲ್ಲಿರುವ ನೂರಾರು ಮನೆಗಳಿಗೆ ಮೂಲಭೂತ ಸೌಕರ್ಯಗಳಿಲ್ಲದೇ ಜನರು ನರಳುತ್ತಿದ್ದಾರೆ.
ತುಂಬಿದ ಚರಂಡಿ: ಕಳೆದ ಮೂರು ತಿಂಗಳಿಂದ ಇಲ್ಲಿನ ಚರಂಡಿಗಳು ತುಂಬಿ ತುಳಕುತ್ತಿವೆ. ಆದರೆ ಸಂಬಂಧಪಟ್ಟ ಗ್ರಾಪಂ ಆಡಳಿತ ಮಂಡಳಿ ಮಾತ್ರ ಇತ್ತ ಗಮನಹರಿಸಿಲ್ಲ. ಇದರಿಂದ ಚರಂಡಿ ಕೊಳಚೆ ನೀರು ಮನೆಯತ್ತ ನುಗ್ಗುತ್ತಿದೆ. ಇದರ ಮಧ್ಯೆ ಚರಂಡಿ ನೀರು ಸರಗವಾಗಿ ಮುಂದೆ ಹರಿದು ಹೋಗದೇ ಅಲ್ಲಿಯೇ ನಿಂತು ಸಣ್ಣ ಸಣ್ಣ ಹೊಂಡಗಳು ನಿಮಾರ್ಣವಾಗಿರುವುದು ಜನ ಗ್ರಾಮದೊಳಗೆ ಹೋಗಲು ರಸ್ತೆಯೇ ಇಲ್ಲದಂತಾಗಿದೆ.
ರೋಗ ಹರಡುವ ಭೀತಿ: ಸುಮಾರು 150ಕ್ಕೂ ಹೆಚ್ಚು ಮನೆ ಹೊಂದಿರುವ ದಲಿತ ಕಾಲೋನಿಯಲ್ಲಿರುವ ಚರಂಡಿಗಳು ತುಂಬಿದ್ದು, ಅರ್ಧಕ್ಕೂ ಹೆಚ್ಚು ಗ್ರಾಮದ ಜನರು ಬಳಸುವ ನೀರು ಹರಿದು ಇಲ್ಲಿಗೆ ಬರುತ್ತದೆ. ಇದರಿಂದ ವ್ಯಬಸ್ಥಿತ ಚರಂಡಿಗಳನ್ನು ನಿರ್ವಹಿಸದ ಹಿನ್ನೆಲೆಯಲ್ಲಿ ನೀರು ರಸ್ತೆಯಲ್ಲಿ ನಿಂತಿದೆ. ಸುತ್ತಲು ಜಾಲಿಕಂಟಿ ಅದರೊಳಗೆ ಕೆಸರು ನೀರು ನಿಂತಿರುವುದರಿಂದ ಮಕ್ಕಳು ಇಲ್ಲಿಯೇ ಆಡುತ್ತಾರೆ. ಇಲ್ಲಿನ ವೃದ್ಧರು ಮನೆಯ ಹೊರಗಡೆ ಕುಳಿತುಕೊಂಡು ವಿಶ್ರಾಂತಿ ಪಡೆಯುತ್ತಿದ್ದು, ದುರ್ವಾಸನೆಯಲ್ಲಿಯೇ ಬದುಕುವಂತಾಗಿದೆ. ಇದರಿಂದ ಜ್ವರ, ಕೆಮ್ಮು, ನೆಗಡಿ, ಡೆಂಘೀ,ಟೈಫಾಯಿಡ್, ಮಲೇರಿಯಾದಂತಹ ರೋಗಗಳ ಭೀತಿಯಲ್ಲಿ ಜನರಿದ್ದಾರೆ.
ಪ್ರಯಾಣಿಕರ ಹಿಡಿಶಾಪ: ಕೋತಬಾಳ ಗ್ರಾಮದಿಂದ ಮಾಡಲಗೇರಿ,ನೈನಾಪುರ, ಬಸರಕೋಡ ಸೇರಿದಂತೆ ಅನೇಕ ಗ್ರಾಮಗಳಿಗೆ ಪ್ರಯಾಣಿಸುವ ಸಾರ್ವಜನಿಕರು ಈ ರಸ್ತೆ ಸ್ಥಿತಿ ನೋಡಿ ಹಿಡಿಶಾಪ ಹಾಕುತ್ತಿದ್ದಾರೆ.
ಏಕೆಂದರೆ ಇಲ್ಲಿ ದ್ವಿಚಕ್ರ ವಾಹನಗಳು ಸಂಪೂರ್ಣ ನೀರಿನಲ್ಲಿ ಮುಳಗುತ್ತವೆ. ಕೆಲ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಗ್ರಾಮದ ಮುಖ್ಯ ರಸ್ತೆಯಿಂದ ಸುಮಾರು 500 ಮೀಟರ್‌ವರೆಗೆಸಂಪೂರ್ಣ ರಸ್ತೆ ಹಾಳಾಗಿದ್ದು, ತಗ್ಗು-ದಿನ್ನೆಗಳಲ್ಲಿ ನೀರು ಸಂಗ್ರಹವಾಗಿ ರೋಗದ ವಾತಾವರಣ ನಿಮಾಣವಾಗಿದೆ.
–ಯಚ್ಚರಗೌಡ ಗೋವಿಂದಗೌಡ