Advertisement

ಭಯದ ನಡುವೆ ಮಕ್ಕಳಿಗೆ ಪಾಠ!

03:34 PM Mar 03, 2020 | Suhan S |

ನರೇಗಲ್ಲ: ಡ.ಸ. ಹಡಗಲಿ ಗ್ರಾಪಂ ವ್ಯಾಪ್ತಿಯಲ್ಲಿನ ಗುಜಮಾಗಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಅಂಗನವಾಡಿ ಕೇಂದ್ರದ ಪರಿಸರದಲ್ಲಿ ದಿನೇದಿನೆ ಅಸುರಕ್ಷಿತ ವಾತಾವರಣ ನಿರ್ಮಾಣವಾಗುತ್ತಿದೆ. ಅಂಗನವಾಡಿ ಕಾರ್ಯಕತೆಯರು ಹಾಗೂ ಸಹಾಯಕಿಯರು ಭಯದ ನಡುವೆ ಪಾಠ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಒಂದೆಡೆ ಪ್ರಾಥಮಿಕ ಶಾಲೆ ಪರಿಸರ ಹಸಿರಿನಿಂದ ನಳನಳಿಸುತ್ತಿದ್ದರೆ, ಇನ್ನೊಂದೆಡೆ ಪಕ್ಕದ ಅಂಗನವಾಡಿ ಪರಿಸರ ಸಮಸ್ಯೆಗಳ ಸರಮಾಲೆಯನ್ನೇ ಹೊತ್ತು ನಿಂತಿದೆ. ಕೇಂದ್ರದಲ್ಲಿ ಒಂದು ಕಡೆ ಅನಾನುಕೂಲರ ರೀತಿಯಲ್ಲಿರುವ ಶೌಚಾಲಯ, ಹಿಂದುಗಡೆ ಚರಂಡಿ ಹಾಗೂ ಜಾಲಿ ಕಂಟಿಗಳು, ಇನ್ನೊಂದು ಬದಿ ಗಲೀಜು ವಾತಾವರಣ ಹೀಗೆ ಯಾವ ಕಡೆ ನೋಡಿದರೂ ಈ ಕೇಂದ್ರದಲ್ಲಿ ಸಮಸ್ಯೆಗಳ ದರ್ಶನವಾಗುತ್ತದೆ. ಕೇಂದ್ರದೊಳಗೆ 2-3 ಬಾರಿ ಹಾವು ಸಹ ಕಾಣಿಸಿಕೊಂಡಿದೆ.

ಶಾಲೆ ಮುಂದೆಯೇ ಇರುವ ಚರಂಡಿ, ಹೊಲಸು ನೀರು ಅಂಗನಾವಡಿ ಕೇಂದ್ರದ ಶಿಕ್ಷಕಿಯ ಪಾಲಿಗೆ ದುಸ್ವಪ್ನದಂತಾಗಿದೆ. ಮಳೆಗಾಲದಲ್ಲಿ ಗುಂಡಿಯು ನೀರಿನಿಂದ ತುಂಬಿ ದೊಡ್ಡ ಹೊಂಡವಾಗಿ ಪರಿವರ್ತನೆಯಾಗುತ್ತದೆ. ಆಗ ಶಿಕ್ಷರಿಗೆ ಮಕ್ಕಳ ಸುರಕ್ಷತೆಯದೇ ಚಿಂತೆಯಾಗುತ್ತದೆ. ಮಕ್ಕಳನ್ನು ಹೊರಗಡೆ ಕಳುಹಿಸಲು ಭಯಪಡುವ ಸ್ಥಿತಿ ನಿರ್ಮಾಣವಾಗುತ್ತದೆ. ಕೇಂದ್ರದ ಹಿಂದೆಲ್ಲ ಗಿಡಗಂಟಿಗಳು ಬೆಳೆದು ಹುಳ ಹುಪ್ಪಡಿಗಳು ಹರಿದಾಡುತ್ತವೆ. ಇದರಿಂದಾಗಿ ಮಕ್ಕಳಿಗೆ ಅಂಗನವಾಡಿಗೆ ಕಳುಹಿಸಲು ಪಾಲಕರು ಭಯಪಡುವಂತಾಗಿದೆ.

ಅಂಗನವಾಡಿ ಕೇಂದ್ರಕ್ಕಿಲ್ಲ ಕಾಂಪೌಂಡ್‌: ಅಂಗನವಾಡಿ ಕೇಂದ್ರ ಮುಂದಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುತ್ತಲೂ ಕಾಂಪೌಂಡಿದೆ. ಆದರೆ, ಅಂಗನವಾಡಿ ಕೇಂದ್ರದ ಬಳಿ ಕಾಂಪೌಂಡಿಲ್ಲ. ಹೀಗಾಗಿ ಸ್ಥಳೀಯರು ಬಂದು ಕೇಂದ್ರದ ಆವರಣವನ್ನು ಗಲೀಜು ಮಾಡಿಹೋಗುತ್ತಿದ್ದಾರೆ. ಇದಕ್ಕೆ ತಡೆ ಹಾಕಬೇಕಾದರೆ ಕೇಂದ್ರದ ಬಳಿಯೂ ಸುತ್ತಲೂ ತಡೆ ಬೇಲಿ ನಿರ್ಮಿಸುವುದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮುಂದಾಗಬೇಕಿದೆ. ಈಗಾಗಲೇ ಈ ಅಂಗನವಾಡಿ ಸುತ್ತಲೂ ಕಾಂಪೌಂಡ್‌ ನಿರ್ಮಿಸಿ ಅಂತಾ ಗ್ರಾ.ಪಂ ಹಾಗೂ ಶಿಶು ಅಭಿವೃದ್ಧಿ ಇಲಾಖೆಗೆ ಹತ್ತು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಂಗನಾಡಿ ಕೇಂದ್ರದಲ್ಲಿ ಒಂದು ಸೂಕ್ತ ಆಟದ ಮೈದಾನವಿಲ್ಲ. ಕೇಂದ್ರದ ಸುತ್ತಲಿನ ಪ್ರದೇಶವನ್ನು ಗ್ರಾ.ಪಂ ಹಾಗೂ ಶಿಶು ಅಭಿವೃದ್ಧಿ ಇಲಾಖೆಯಿಂದ ಕೂಡಲೇ ಸ್ವತ್ಛ ಮತ್ತು ಜಾಲಿ ಕಂಟಿಗಳನ್ನು ತೆಗೆದು ಆಟದ ಮೈದಾನ ಮಾಡಬಹುದಾಗಿದೆ.

ಬೇಕಿದೆ ಶೌಚಾಲಯ: ಸದ್ಯ ಕೇಂದ್ರದ ಎಡಭಾಗದಲ್ಲಿ ಇರುವ ಶೌಚಾಲಯವನ್ನು ಅಂಗನವಾಡಿ ಮಕ್ಕಳು ಬಳಕೆ ಮಾಡುತ್ತಿಲ್ಲ. ಆ ಶೌಚಾಲಯ ಬಳಸಬೇಕಾದರೆ ಮಕ್ಕಳು ದೊಡ್ಡ ಮೆಟ್ಟಿಲುಗಳನ್ನು ಹತ್ತಿ ಇಳಿಯಬೇಕಾಗಿದೆ. ಇದು ಚಿಕ್ಕ ಮಕ್ಕಳಿಗೆ ಕಷ್ಟ. ಆದ್ದರಿಂದ ಕೇಂದ್ರದ ಪರಿಸರದಲ್ಲಿ ಹೊಸದಾಗಿ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಶೌಚಾಲಯ ನಿರ್ಮಿಸಬೇಕು. ಅಲ್ಲದೇ ನೀರಿನ ತೊಟ್ಟಿಗೆ ಶಾಶ್ವತವಾದ ಮುಚ್ಚಳ ಹಾಕಬೇಕಿದೆ.

Advertisement

ಗುಜಮಾಗಡಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿರುವ ಸಮಸ್ಯೆಗಳ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಕೇಂದ್ರದ ಸುತ್ತಇರುವ ಜಾಲಿ ಕಂಟಿಗಳನ್ನು ಗ್ರಾ.ಪಂ ಅಧಿಕಾರಿಗಳಿಗೆ ತಿಳಿಸಿ ಸ್ವತ್ಛ ಮಾಡಲಾಗುವುದು.-ನಾಗನಗೌಡ ಪಾಟೀಲ, ಸಿಡಿಪಿಒ

 

ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next