ಕೋಲ್ಕತಾ: ಪಶ್ಚಿಮಬಂಗಾಳದ ರಾಜ್ಯಪಾಲ ಜಗದೀಪ್ ಧಾನ್ಕರ್ ಅವರು ರಾಜಭವನದಲ್ಲಿ ವಿಶೇಷ ಕರ್ತವ್ಯ ಅಧಿಕಾರಿಗಳನ್ನಾಗಿ ತಮ್ಮ ಸಂಬಂಧಿಕರನ್ನು ನೇಮಕ ಮಾಡಿಕೊಂಡಿರುವುದಾಗಿ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ಸೋಮವಾರ(ಜೂನ್ 07) ಆರೋಪಿಸಿದ್ದಾರೆ.
ಇದನ್ನೂ ಓದಿ:ಉಡುಪಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೋವಿಡ್ ನಿಂದ ಸಾವು
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಸಭೆಗೆ ಗೈರುಹಾಜರಾಗಿದ್ದ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಗುಡುಗಿದ್ದ ರಾಜ್ಯಪಾಲ ಜಗದೀಪ್ ಅವರು ಇದೊಂದು ಅಸಂವಿಧಾನಿಕ ನಡೆ ಎಂದು ಆರೋಪಿಸಿದ್ದು, ಸಾಂವಿಧಾನಿಕ ಹೊಣೆಗಾರಿಕೆಯ ಕುರಿತು ಹೇಳಿದ ಬೆನ್ನಲ್ಲೇ ಮೊಯಿತ್ರಾ ಈ ತಿರುಗೇಟು ನೀಡಿರುವುದಾಗಿ ವರದಿ ತಿಳಿಸಿದೆ.
ರಾಜಭವನದಲ್ಲಿರುವ ಆರು ಮಂದಿ ವಿಶೇಷ ಕರ್ತವ್ಯ ಅಧಿಕಾರಿಗಳು ನನ್ನ ಸಂಬಂಧಿಕರು ಎಂದು ಸಂಸದೆ ಮಹುವಾ ಟ್ವೀಟ್ ಮೂಲಕ ಆರೋಪಿಸಿದ್ದು, ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ರಾಜಪಾಲರ ಭವನದಲ್ಲಿರುವ ವಿಶೇಷ ಅಧಿಕಾರಿಗಳು ಮೂರು ರಾಜ್ಯಕ್ಕೆ ಸೇರಿದ್ದು, ಅವರಲ್ಲಿ ನಾಲ್ಕು ಮಂದಿ ಬೇರೆ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಯಾರೂ ಕೂಡಾ ನನ್ನ ಕುಟುಂಬದ ಸದಸ್ಯರಲ್ಲ ಎಂದು ಜಗದೀಪ್ ಧಾನ್ಕರ್ ಟ್ವೀಟ್ ಮೂಲಕ ತಿರುಗೇಟು ನೀಡಿರುವುದಾಗಿ ವರದಿ ತಿಳಿಸಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಈ ಬಗ್ಗೆ ಗಮನವನ್ನು ಬೇರೆಡೆ ಸೆಳೆಯಲು ಹೊಸ ಆರೋಪ ಹುಟ್ಟು ಹಾಕಿರುವುದಾಗಿ ರಾಜ್ಯಪಾಲ ಜಗದೀಪ್ ತಿಳಿಸಿದ್ದಾರೆ. ಪಶ್ಚಿಮಬಂಗಾಳದಲ್ಲಿ ಹಿಂಸಾಚಾರ ಮಿತಿ ಮೀರಿದ್ದು, ಗಲಭೆ ಕೃತ್ಯದಲ್ಲಿ ಶಾಮೀಲಾದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ರಾಜ್ಯಪಾಲರು ಭಾನುವಾರ ತಿಳಿಸಿದ್ದರು.