Advertisement

 ನಗರಸಭೆಯಾಗಿ ಎರಡು ವರ್ಷಗಳಾದರೂ ಬದಲಾಗದ ನಾಮಫ‌ಲಕಗಳು

03:23 PM Dec 16, 2017 | Team Udayavani |

ನಗರ: ಪುತ್ತೂರು ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿ ಮುಂದಿನ ತಿಂಗಳು ಎರಡು ವರ್ಷ ಪೂರ್ಣಗೊಳ್ಳಲಿದೆ. ನಗರಸಭೆಯ ಕಡತ, ಕಚೇರಿ ಫಲಕಗಳಲ್ಲಿ ಪುರಸಭೆ ಹೆಸರು ಬದಲಾಗಿ ನಗರಸಭೆ ಎಂದಾಗಿದೆ. ಆದರೆ ದಿನಂಪ್ರತಿ ಕಾಣುವ ಮುಖ್ಯ ರಸ್ತೆಗಳ ಬದಿಯಲ್ಲಿರುವ ಸರಹದ್ದಿನ ಫಲಕಗಳಲ್ಲಿ ಈಗಲೂ ಪುರಸಭೆಯ ಹೆಸರು ಸ್ವಾಗತ ಕೋರುತ್ತಿದೆ!

Advertisement

1973ರಲ್ಲಿ ಪುತ್ತೂರು ಪಟ್ಟಣ ಪಂಚಾಯಿತ್‌ ಪುರಸಭೆಯಾಗಿ ಮೇಲ್ದರ್ಜೆಗೇರಿತ್ತು. 42 ವರ್ಷಗಳ ಅನಂತರ 2015ರ ಜ. 22ರಂದು ನಗರಸಭೆಯಾಗಿ ಬದಲಾಯಿತು. ಸದ್ಯದಲ್ಲೇ ಈ ಪ್ರಕ್ರಿಯೆ ಎರಡು ವರ್ಷಗಳನ್ನು ಪೂರ್ಣಗೊಳಿಸುತ್ತದೆ. ಆದರೆ ನಗರಸಭೆಯ ಗಡಿಭಾಗದಲ್ಲಿ ಗುರುತಿಗಾಗಿ ಅಳವಡಿಸಿರುವ ಫಲಕಗಳು ಈಗಲೂ ಪುರಸಭೆಯ ಹೆಸರಿನಲ್ಲಿವೆ. ಹೊರ ಪ್ರದೇಶದಿಂದ ಪುತ್ತೂರಿಗೆ ಹೊಸದಾಗಿ ಬರುವವರಿಗೆ ನಗರಸಭೆ ಎಂಬ ಭಾವನೆಯೇ ಮೂಡದಂತಾಗಿದೆ.

ಮುಖ್ಯವಾಗಿ ಕಬಕ-ಪುತ್ತೂರು ಸಂಪರ್ಕ ರಸ್ತೆಯ ಮುರ, ಕುಂಬ್ರ-ಪುತ್ತೂರು ಸಂಪರ್ಕ ರಸ್ತೆಯ ಸಂಪ್ಯ ಮುಕ್ರಂಪಾಡಿಯಲ್ಲಿ ಎರಡು ಮೆಗಾ ಕಮಾನುಗಳಿವೆ. ಇವುಗಳ ಫ‌ಲಕಗಳಲ್ಲೂ ಪುರಸಭೆಗೆ ಸ್ವಾಗತ ಎಂದಿದೆ. ಸವಣೂರು -ದರ್ಬೆ ರಸ್ತೆಯ ಬೆದ್ರಾಳ, ಪಾಣಾಜೆ -ಪುತ್ತೂರು ರಸ್ತೆಯ ಪರ್ಲಡ್ಕ ಸಮೀಪ ಕಾಂಕ್ರೀಟ್‌ ಗಡಿ ಬೋರ್ಡ್‌ನಲ್ಲಿ ಪುರಸಭೆಗೆ ಸುಸ್ವಾಗತ, ಪುರಸಭೆ, ಸರಹದ್ದು ಎಂಬ ಹೆಸರು ಇನ್ನು ಬದಲಾಗಿಲ್ಲ.

ಪುತ್ತೂರು ನಗರ ನಿವಾಸಿಗಳಿಗೆ ಹಾಗೂ ನಗರಸಭೆ ಕಚೇರಿಗೆ ಮಾತ್ರ ಪುರಸಭೆಯು ನಗರಸಭೆ ಆಗಿ ಮೇಲ್ದರ್ಜೆಗೇರಿದೆ ಎಂಬ ಸ್ಪಷ್ಟ ಮಾಹಿತಿ ಇದೆ ಹೊರತು, ಹೊರಗಿನ ಮಂದಿಗೆ ಈ ಬೋರ್ಡ್‌ ತಪ್ಪು ಮಾಹಿತಿ ನೀಡುತ್ತಿದೆ. ಕೆಲವೊಮ್ಮೆ ಪುತ್ತೂರಿನ ಜನಪ್ರತಿನಿಧಿಗಳ ಬಾಯಲ್ಲೇ ನಗರಸಭೆಯ ಬದಲಿಗೆ ಪುರಸಭೆಯೇ ಬರುವುದು ಕಾಕತಾಳೀಯ ಎನ್ನಲಾಗದು.

ಹೆಸರಿಗೆ ನಗರಸಭೆ!
ಪುರಸಭೆ ನಗರಸಭೆಯಾಗಿ ಎರಡು ವರ್ಷವಾಗುತ್ತಿದ್ದರೂ ಅದಕ್ಕೆ ತಕ್ಕ ಸೌಲಭ್ಯಗಳೂ ನಗರಸಭೆಗೆ ಬಂದಿಲ್ಲ. ಶೇ. 60ರಷ್ಟು ಹುದ್ದೆಗಳೂ ನಗರಸಭೆಯಲ್ಲಿ ಖಾಲಿ ಇವೆ. ಹೆಸರಿಗೆ ಮಾತ್ರ ನಗರಸಭೆಯ ವ್ಯವಸ್ಥೆ ಈಗಲೂ ಪುರಸಭೆಯದೇ ಇದೆ. ಹಾಗಾಗಿ ಗಡಿ ಭಾಗದಲ್ಲಿನ ಫಲಕಗಳಲ್ಲಿ ಪುರಸಭೆ ಎಂಬ ಹೆಸರು ಉಳಿದುಕೊಂಡಿರುವುದು ಅಪಾರ್ಥವೇನೂ ಆಗುವುದಿಲ್ಲ ಎನ್ನುವುದು ಸಾರ್ವಜನಿಕ ವಲಯದಿಂದ ಕೇಳಿಬರು ತ್ತಿರುವ ಹಾಸ್ಯ!

Advertisement

ಶೀಘ್ರ ಕ್ರಮ
ನಗರಸಭೆ ವ್ಯಾಪ್ತಿಯ ಗಡಿ ಅಂಚುಗಳಲ್ಲಿರುವ ಫಲಕಗಳ ಬದಲಾವಣೆಯಾಗಬೇಕಿತ್ತು. ಇದಕ್ಕೆ ಸ್ವಲ್ಪ ದೊಡ್ಡ ಮೊತ್ತದ ಅನುದಾನ ಬೇಕಿರುವುದರಿಂದ ವಿಳಂಬವಾಗಿದೆ. ಅಂದಾಜು ವೆಚ್ಚ ತಯಾರಿಸಿ ಟೆಂಡರ್‌ ಮೂಲಕ ಫಲಕಗಳ ಬದಲಾವಣೆ ಕುರಿತು ತ್ವರಿತ ಕ್ರಮ ಕೈಗೊಳ್ಳುತ್ತೇವೆ.
ರೂಪಾ ಟಿ. ಶೆಟ್ಟಿ
   ಪೌರಾಯುಕ್ತೆ, ನಗರಸಭೆ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next