Advertisement
ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ನದಿಗಳಲ್ಲೊಂದಾದ ಅಘನಾಶಿನಿ ನದಿ ಇಲ್ಲಿ 116 ಮೀಟರ್ ಆಳಕ್ಕೆ ಧುಮುಕಿ ಭವ್ಯವಾದ ಜಲಪಾತವನ್ನು ಸೃಷ್ಟಿಸುತಾಳೆ. ಈ ಜಲಪಾತವನ್ನು ಮೊದಲು 1875 ರಲ್ಲಿ ಬ್ರಿಟಿಷ್ ಅಧಿಕಾರಿ ಜೆ. ಡಿ. ಲುಶಿಂಗ್ಟನ್ ಕಂಡುಹಿಡಿದನು.
Related Articles
Advertisement
ಲುಸ್ಸಿಂಗ್ ಟನ್ ಜಲಪಾತ :
ಸ್ಥಳೀಯರಿಗೆ ಮಾತ್ರ ಪರಿಚಿತವಾಗಿದ್ದ ಈ ಜಲಪಾತವನ್ನು 1859ರಲ್ಲಿ ಪ್ರಥಮ ಬಾರಿಗೆ ಲುಸ್ಸಿಂಗ್ ಟನ್ ಎಂಬ ಬ್ರಿಟೀಷ್ ಅಧಿಕಾರಿ ಹೊರ ಜಗತ್ತಿಗೆ ಪರಿಚಯಿಸಿದ ಎನ್ನಲಾಗುತ್ತದೆ. ಇದರಿಂದಾಗಿ ಜಲಪಾತಕ್ಕೆ ಲುಸ್ಸಿಂಗ್ ಟನ್ ಜಲಪಾತ ಎಂಬ ಹೆಸರೂ ಇದೆ. ಜಲಪಾತದ ಎರಡು ನೋಟವು ಪ್ರವಾಸಿಗರಿಗೆ ಸಿಗುತ್ತಿದ್ದು, ಒಂದು ನೋಟವನ್ನು ಎರಡು ಕಿ.ಮೀ. ಕಚ್ಚಾ ಮಣ್ಣಿನ ರಸ್ತೆಯಲ್ಲಿ ನಡೆಯುತ್ತ ಸಾಗಿದರೆ ವೀಕ್ಷಣಾ ಗೋಪುರದ ಮೇಲೆ ನಿಂತು ನೋಡಬಹುದು. ಇಲ್ಲಿಂದ ಮಲೆನಾಡ ಹಸಿರು ವೃಕ್ಷಗಳ ನಡುವೆ ಹಾಲ್ನೊರೆಯು ಇಳಿದು ಭೋರ್ಗರೆಯುತ್ತ ಅಗಾಧ ಅನಂತ ಹಿಮಾಚ್ಛಾದಿತ ದಟ್ಟ ಹಸಿರ ಕಣಿವೆಯಲ್ಲಿ ಹರಿಯುವುದನ್ನು ಕಾಣಬಹುದು.
ಆದರೆ ಇನ್ನೊಂದು ದೃಶ್ಯ ಕಣಿವೆಯ ಕೆಳ ನಿಂತು ನೋಡಬೇಕಾಗಿರುವುದರಿಂದ ಅದರ ವೀಕ್ಷಣೆಗೆ ಮಳೆಗಾಲ ಕಳೆದು ಚಳಿಗಾಲದ ದಿನಗಳೇ ಸೂಕ್ತ. ಮಳೆಗಾಲದಲ್ಲಿ ಈ ಪ್ರಪಾತಕ್ಕೆ ಇರುವ ಸೂಪಾನಗಳು ದುರಸ್ತಿಯ ಸ್ಥಿತಿಯಲ್ಲಿರುವುದರಿಂದ ಅಪಾಯಕಾರಿ. ದಟ್ಟ ಕಾನನದ ಕಣಿವೆಯು ಮಳೆಯ ಜಾರುವಿಕೆ ಅಥವಾ ಪಾಚಿಗಟ್ಟಿದ ಮೆಟ್ಟಿಲುಗಳಲ್ಲಿ ಇಳಿಯುವಾಗ ಸಮತೋಲನ ತಪ್ಪಿದರೆ ಮಲೆನಾಡ ಕಣಿವೆಯಲ್ಲಿ ಸಜೀವ ಸಮಾಧಿ ಖಂಡಿತ. ಆದರೆ ಸಾಹಸಮಯವಾದ ಈ ಕೃತ್ಯವನ್ನು ಎಚ್ಚರಿಕೆಯಿಂದ ಇಳಿದು ಸಾಗಿದರೆ ನಿಮಗೆ ಕಾದಿದೆ ಅಚ್ಚರಿಯ ಅದ್ಭುತ. ನೋಡಿಯೇ ತಣಿಯಬೇಕು ಇದರ ಸೊಬಗನ್ನು.
ಕೆಳಗಿದೆ ಹರಿದೋಡುವ ನೀರು, ಮೇಲಿನಿಂದ ಇಳಿಯುತ್ತದೆ ಬಿಳಿ ನೊರೆಯ ಹೊನಲು. ಹರ್ಷದ ಹೊನಲೇ ಪಾಪನಾಶಿನಿಯಾದ ಅಘನಾಶಿನಿ ಧಾರೆಯಾಗಿ ಉಂಚಳ್ಳಿಯಲ್ಲಿ ಇಳಿದು ಬರುತ್ತಿದೆಯೆಂದೆನಿಸಿದರೆ ಆಶ್ಚರ್ಯವಲ್ಲ. ಈ ನೆಲದಲ್ಲಿ ಎಂಥವನೂ ಕವಿಯಾದರೆ ಅದು ಇಲ್ಲಿನ ನಿಸರ್ಗದ ಕೈಚಳಕ. ಇಲ್ಲಿಳಿದು ನಿಂತರೆ ಕೆಳಗೆ ಮತ್ತೆರಡು ಮಳೆಗಾಲದ ಜಲಧಾರೆಗಳು ಕಾಣಸಿಗುತ್ತವೆ. ಆದರೆ ದುರ್ಗಮ ಕಣಿವೆಯ ಹಾದಿಯಲ್ಲಿ ಮಳೆಗಾಲದಲ್ಲಿ ಉಂಬಳಗಳು ಹೇರಳವಾಗಿವೆ.
ಈ ಸುಂದರ, ನಯನ ಮನೋಹರ ಸೊಬಗು ವರ್ಷದ ಎಲ್ಲಾ ದಿನಗಳಲ್ಲೂ ತುಂಬು ಬೆಡಗಿನಿಂದ ಕಂಗೊಳಿಸುತ್ತದೆ. ಮಲೆನಾಡಿನ ಆರ್ಭಟದ ಮಳೆಗೆ ಕೆಂಪು ನೀರಿನಿಂದಾವೃತವಾದ ಅಘನಾಶಿನಿಯ ಪ್ರವಾಹದಿಂದಾಗಿ ಮಳೆಗಾಲದಲ್ಲಿ ಕೆಂಪು ಮಿಶ್ರಿತ ಜಲಧಾರೆ ಗೋಚರಿಸಿದರೆ, ಉಳಿದ ದಿನಗಳಲ್ಲಿ ಹಾಲ್ನೊರೆಯ ಬೆಡಗು ಮನಸೆಳೆಯುತ್ತದೆ.
ಹೋಗುವುದು ಹೇಗೆ? :
ಸಿದ್ದಾಪುರದಿಂದ 35 ಕಿ.ಮೀ. ದೂರದ ಹೆಗ್ಗರಣೆಗೆ ತಲುಪಿದರೆ, ಅಲ್ಲಿಂದ 4 ಕಿ.ಮೀ. ದೂರದಲ್ಲಿದೆ ಈ ಅದ್ಭುತ ಹಸಿರ ಸಿರಿ ಮಧ್ಯೆ ಜಲಧಾರೆಯ ಅವಿಸ್ಮರಣೀಯ ಸೌಂದರ್ಯ. ಇನ್ನೊಂದು ದಾರಿ ಶಿರಸಿಯಿಂದ 39 ಕಿ.ಮೀ. ದೂರವಿದೆ.
ಶಿರಸಿ -ಕುಮಟಾ ರಾಜ್ಯ ಹೆದ್ದಾರಿಯಲ್ಲಿನ ಅಮ್ಮಿನಳ್ಳಿ ಸಮೀಪ ಎಡಕ್ಕೆ ತಿರುಗಿ ಹೆಗ್ಗರಣೆ ರಸ್ತೆಯಲ್ಲಿ ಸಾಗಿದರೆ ಉಂಚಳ್ಳಿ ಜಲಪಾತ ಆರ್ಭಟದ ಭೋರ್ಗರೆತದೊಂದಿಗೆ ಇರುವ ಸಾರುತ್ತದೆ.