Advertisement

ವಾಯುಮಾಲಿನ್ಯ ಗ‌ರ್ಭಕ್ಕೇ ಕುತ್ತು

01:02 AM Jan 14, 2021 | Team Udayavani |

ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ಥಾನ ದೇಶಗಳಲ್ಲಿ ವಾಯು ಮಾಲಿನ್ಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆತಂಕಕಾರಿಯಾಗಿದೆ. ಈ ಕಾರಣದಿಂದ ಶ್ವಾಸಕೋಶ ಸೋಂಕು ಸಂಭವಿಸಿ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದೇ ವೇಳೆ ಹೊಸ ಆಘಾತಕಾರಿ ಮಾಹಿತಿಯೊಂದು ಹೊರ ಬಿದ್ದಿದೆ. ಪ್ರತೀ ವರ್ಷ ವಾಯುಮಾಲಿನ್ಯದಿಂದಾಗಿ ಲಕ್ಷಾಂತರ ಗರ್ಭಪಾತಗಳು ಸಂಭವಿಸುತ್ತಿವೆ ಎಂದು ವರದಿಯೊಂದು ಹೇಳಿದೆ.

Advertisement

ಲ್ಯಾನ್ಸೆಟ್‌ ಜರ್ನಲ್‌ನಲ್ಲಿ ಇತ್ತೀಚೆಗೆ ಪ್ರಕಟವಾದ ಈ ಸಂಶೋಧನ ವರದಿಯ ಪ್ರಕಾರ, ವಾಯುಮಾಲಿನ್ಯವು ಗರ್ಭಪಾತಕ್ಕೆ ನೇರವಾಗಿ ಸಂಬಂಧಿಸಿದೆ. ಭಾರತ ಸಹಿತ ನೆರೆಹೊರೆಯ ದೇಶಗಳಲ್ಲಿ ಗಾಳಿಯ ಗುಣಮಟ್ಟ ತೀರಾ ಕುಸಿಯುತ್ತಿದ್ದು ವಿಶ್ವದ ಅತ್ಯಂತ ಕಲುಷಿತ ಭಾಗವಾಗಿದೆ.

ಏನಾಗುತ್ತಿದೆ? :

ಗಾಳಿಯು ಹೆಚ್ಚು ಕಲುಷಿತಗೊಂಡಿರುವ ಪ್ರದೇಶಗಳಲ್ಲಿ ಗರ್ಭಧಾರಣೆಯ ತೊಂದರೆಗಳು, ಗರ್ಭಪಾತಗಳು ಮತ್ತು ಮಗು ಸಾವಿಗೀಡಾಗಿ ಜನಿಸುವಂಥ ಪ್ರಕರಣಗಳು ಹೆಚ್ಚಾಗುತ್ತಿವೆ. ಭಾರತ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶದಲ್ಲಿ ಹೆಚ್ಚಿನ ವಾಯುಮಾಲಿನ್ಯದಿಂದಾಗಿ ವಾರ್ಷಿಕವಾಗಿ 3.49 ಲಕ್ಷ ಗರ್ಭಪಾತಗಳು ಸಂಭವಿಸುತ್ತಿವೆ ಎಂದಿದೆ. ಸಂಶೋಧನೆಯ ಪ್ರಕಾರ, ಭಾರತವು ವಾಯುಮಾಲಿನ್ಯವನ್ನು ಕಡಿಮೆ ಮಾಡಿದರೆ, ಗರ್ಭಪಾತ ಪ್ರಕರಣಗಳು ಪ್ರತೀ ವರ್ಷ ಶೇ. 7ರಷ್ಟು ಕಡಿಮೆಯಾಗಬಹುದು.

ಏನು ಹಾನಿ? :

Advertisement

ವಾಯುಮಾಲಿನ್ಯವು ತಾಯಿ ಮತ್ತು ಮಗುವನ್ನು ಸಂಪರ್ಕಿಸುವ ಹೊಕ್ಕುಳ ಬಳ್ಳಿಯನ್ನು ಹಾನಿಗೊಳಿಸುವುದರ ಮೂಲಕ ಭ್ರೂಣವನ್ನು ಹಾನಿಗೊಳಿಸುತ್ತದೆ. ದಕ್ಷಿಣ ಏಷ್ಯಾದಲ್ಲಿ ಗರ್ಭಧಾರಣೆಯ ಮೇಲೆ ಮಾಲಿನ್ಯದ ಪ್ರಭಾವವನ್ನು ತೋರಿಸುವ ಮೊದಲ ಅಧ್ಯಯನ ಇದಾಗಿದೆ. ದಕ್ಷಿಣ ಏಷ್ಯಾದಲ್ಲಿ ಗರ್ಭಾಶಯದ ಹಾನಿ ವಿಶ್ವದಲ್ಲೇ ಅತೀ ಹೆಚ್ಚು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ನಿಯಂತ್ರಣ ಹೇಗೆ?:

ತಜ್ಞರ ಪ್ರಕಾರ, ಗರ್ಭಿಣಿಯರು ವಾಸಿಸುವ ಪ್ರದೇಶದಲ್ಲಿ ಗಾಳಿ ಶುದ್ಧವಾಗಿರಬೇಕು. ಶುದ್ಧಗಾಳಿ ಬೇಕು ಎಂದರೆ ನಿಮ್ಮ ಮನೆಯ ಸುತ್ತಲೂ ಸ್ವತ್ಛತೆಯನ್ನು ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಮನೆಯ ತೋಟದಲ್ಲಿ ಗಾಳಿ ಶುದ್ಧೀಕರಿಸುವ ಸಸ್ಯಗಳನ್ನು ನೆಡಬಹುದು. ಬೆಳಗ್ಗೆ ಮತ್ತು ಸಂಜೆ ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಡಬೇಕು. ಇದು ಮನೆಯ ಒಳಕ್ಕೆ ಶುದ್ಧಗಾಳಿಯನ್ನು ತರುತ್ತದೆ. ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ. ಇದು ವಾಯುಮಾಲಿನ್ಯದಿಂದ ಉಂಟಾಗುವ ರೋಗಗಳನ್ನು ತಡೆಯಲು ನೆರವಾಗುತ್ತದೆ.

4 ಪಟ್ಟು ಏರಿಕೆ :

2000 ಮತ್ತು 2016ರ ನಡುವೆ, ಸಂಶೋಧಕರು ಭಾರತದಲ್ಲಿ ಗಾಳಿಯು ವಿಶ್ವಸಂಸ್ಥೆಯ ಮಾನದಂಡಕ್ಕಿಂತ ನಾಲ್ಕು ಪಟ್ಟು ಕೆಟ್ಟದಾಗಿದೆ ಎಂದಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಕಲುಷಿತ ಗಾಳಿಯು ಶೇ. 7.1ರಷ್ಟು ಗರ್ಭಪಾತಕ್ಕೆ ಕಾರಣವಾಗಿದೆ. ಭಾರತದ ಪ್ರಸ್ತುತ ವಾಯು ಗುಣಮಟ್ಟದ ಮಾನದಂಡವು ಘನ ಮೀಟರ್‌ಗೆ 40 ಮೈಕ್ರೋ ಗ್ರಾಂಗಳಷ್ಟಿವೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯ ಪ್ರಕಾರ ಘನ ಮೀಟರ್‌ಗೆ 10 ಮೈಕ್ರೋ ಗ್ರಾಂ ಸುರಕ್ಷಿತವೆಂದು ಪರಿಗಣಿಸಲಾಗಿದೆ.

ಪರಿಣಾಮ ಹಲವು :

ಗರ್ಭಾವಸ್ಥೆಯಲ್ಲಿ ಮಹಿಳೆಯರು ಹೆಚ್ಚು ಜಾಗರೂಕರಾಗಿರಬೇಕು ಎನ್ನುತ್ತಾರೆ ತಜ್ಞರು. ವಾಯುಮಾಲಿನ್ಯ ಹುಟ್ಟಲಿರುವ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತಾಯಿ ಏನು ತಿಂದರೂ ಅದು ನೇರವಾಗಿ ಮಗುವಿಗೆ ದೊರೆಯುತ್ತದೆ. ಗರ್ಭಿಣಿಯರು ಕಲುಷಿತ ಗಾಳಿಯನ್ನು ಉಸಿರಾಡುವುದರಿಂದ ಗರ್ಭದಲ್ಲಿ  ಬೆಳೆಯುತ್ತಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಇದು ಪ್ರಬುದ್ಧ ಪೂರ್ವ ಪ್ರಸವದ ಅಪಾಯವನ್ನು ಸಹ ಹೊಂದಿದೆ. ಮಗು ಜನನದ ಸಮಯದಲ್ಲಿ ತೂಕವನ್ನು ಕಳೆದುಕೊಳ್ಳಬಹುದು ಮತ್ತು ಇದು ಅಪೌಷ್ಟಿಕತೆಗೆ ಕಾರಣವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next