ಹೊಸದಿಲ್ಲಿ : ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ತನ್ನ ಅಭೂತಪೂರ್ವ ದರ ಸಮರದಿಂದ ಬಿರುಗಾಳಿಯನ್ನೇ ಎಬ್ಬಿಸಿದ್ದ ರಿಲಯನ್ಸ್ ಜಿಯೋ ಇದೀಗ ಕೇವಲ 500 ರೂ.ಗೆ 4G VoLTE ಫೋನನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಮತ್ತೂಮ್ಮೆ ಇನ್ನೂ ದೊಡ್ಡ ಬಿರುಗಾಳಿಯನ್ನು ಎಬ್ಬಿಸಲು ಮುಂದಾಗಿದೆ.
ಇಕಾನಮಿಕ್ ಟೈಮ್ಸ್ ವರದಿಯ ಪ್ರಕಾರ ರಿಲಯನ್ಸ್ ಜಿಯೋ ಕಂಪೆನಿ ತನ್ನ ಅತ್ಯಾಧುನಿಕ 4G VoLTE ಫೀಚರ್ ಫೋನನ್ನು ಈ ತಿಂಗಳಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
ಎಚ್‌ಎಸ್‌ಬಿಸಿ ನಿರ್ದೇಶಕ ಮತ್ತು ಟೆಲಿಕಾಂ ವಿಶ್ಲೇಷಕ ರಾಜೀವ್ ಶರ್ಮಾ ಅವರನ್ನು ಉಲ್ಲೇಖೀಸಿ ವರದಿ ಮಾಡಿರುವ ಇಕಾನಮಿಕ್ ಟೈಮ್ಸ್ , “ರಿಲಯನ್ಸ್ ಜಿಯೋ ಕಂಪೆನಿ ತನ್ನ 4G VoLTE ಫೀಚರ್ ಫೋನನ್ನು ಕೇವಲ 500 ರೂ.ಗೆ ಮಾರುಕಟ್ಟೆಗೆ ಈ ತಿಂಗಳಲ್ಲೇ ತರಲಿದ್ದು ಆ ಮೂಲಕ 2ಜಿ ಬಳಕೆದಾರರನ್ನು ನೇರವಾಗಿ 4ಜಿ ಕಡೆಗೆ ಸೆಳೆಯಲಿದೆ. ಆ ಮೂಲಕ ಜಿಯೋ ತನ್ನ ಪ್ರತಿಯೊಂದು ಹ್ಯಾಂಡ್‌ಸೆಟ್‌ಗೆ ಡಾಲರ್ 10ರಿಂದ 15ರಷ್ಟು, ಎಂದರೆ 650 ರೂ.ಗಳಿಂದ 975 ರೂ.ಗಳಷ್ಟು ಮೊತ್ತವನ್ನು ಗ್ರಾಹಕರಿಗಾಗಿ ತನ್ನ ಕೈಯಿಂದ ಹಾಕಲಿದೆ’ ಎಂದು ಹೇಳಿದೆ.
ಇದೇ ಜುಲೈ 21ರಂದು ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ವಾರ್ಷಿಕ ಮಹಾಸಭೆ ನಡೆಯಲಿದ್ದು ಬಹುತೇಕ ಅಂದೇ ಈ 500 ರೂ. 4G VoLTE ಫೀಚರ್ ಫೋನನ್ನು ಬಿಡುಗಡೆ ಮಾಡಲಿದೆ ಎಂದು ಇಟಿ ವರದಿ ತಿಳಿಸಿದೆ.
ಈ ವರ್ಷ ಎಪ್ರಿಲ್ 11ರಿಂದ ಪ್ರಕಟಿಸಲಾಗಿದ್ದ ರಿಲಯನ್ಸ್ ಜಿಯೋ ದ 84 ದಿನಗಳ ಧನ್ ಧನಾ ಧನ್ ಆಫರ್ ಈ ತಿಂಗಳಲ್ಲಿ ಮುಗಿಯಲಿರುವುದರಿಂದ ಹೊಸ ಟ್ಯಾರಿಫ್ ಪ್ಲಾನನ್ನು ಕೂಡ ಪ್ರಕಟಿಸುವ ಸಾಧ್ಯತೆ ಇದೆ ಎಂದು ಇಟಿ ವರದಿ ತಿಳಿಸಿದೆ.