Advertisement

ತಾಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಮಂಡನೆ ವಿಫ‌ಲ

11:43 AM Dec 20, 2018 | Team Udayavani |

ಮೈಸೂರು: ತಮ್ಮ ಪಕ್ಷದ ಅಧ್ಯಕ್ಷರ ವಿರುದ್ಧವೇ ಅವಿಶ್ವಾಸ ಗೊತ್ತುವಳಿಗೆ ಅರ್ಜಿ ನೀಡಿದ್ದ ಮೈಸೂರು ತಾಲೂಕು ಪಂಚಾಯ್ತಿ ಜೆಡಿಎಸ್‌ ಸದಸ್ಯರು, ಅವಿಶ್ವಾಸ ಗೊತ್ತುವಳಿ ಮಂಡನೆಯ ವಿಶೇಷ ಸಭೆಯಿಂದ ದೂರ ಉಳಿದ ಕಾರಣ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ತಮ್ಮ ಸ್ಥಾನವನ್ನು ಉಳಿಸಿಕೊಂಡು, ಸಭೆಯಲ್ಲಿ ಹಾಜರಿದ್ದ ಕಾಂಗ್ರೆಸ್‌ ಸದಸ್ಯರ ಜೊತೆಗೂಡಿ ಸಂಭ್ರಮಾಚರಣೆ ನಡೆಸಿದರು.

Advertisement

ಜೆಡಿಎಸ್‌ ಪಕ್ಷದ ಆಂತರಿಕ ಒಪ್ಪಂದದಂತೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವಂತೆ ಒತ್ತಾಯಿಸಿ ಕಳೆದ ಮೂರ್‍ನಾಲ್ಕು ಸಭೆಗಳಿಂದ ನಿರಂತರವಾಗಿ ದೂರ ಉಳಿದಿದ್ದ ಸದಸ್ಯರು ಕೊನೆಗೆ ಅಧ್ಯಕ್ಷರ ವಿರುದ್ಧ ಅಶ್ವಾಸಗೊತ್ತುವಳಿಗೆ ಅರ್ಜಿ ನೀಡಿದ್ದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೂಚನೆಯಂತೆ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅವರು ಡಿ.19 ರಂದು ವಿಶೇಷ ಸಭೆ ಕರೆದಿದ್ದರು. ಆದರೆ, ಬುಧವಾರ ತಾಪಂನ ಸಭಾಂಗಣದಲ್ಲಿ ಕರೆಯಲಾಗಿದ್ದ ಸಭೆಗೆ ಅವಿಶ್ವಾಸಕ್ಕೆ ನಿರ್ಣಯಕ್ಕೆ ಅರ್ಜಿ ಸಲ್ಲಿಸಿದ್ದ ಜೆಡಿಎಸ್‌ ಸದಸ್ಯರೇ ಗೈರಾದರು.

ಮಧ್ಯಾಹ್ನ 12ಕ್ಕೆ ಸಭೆ ಕರೆಯಲಾಗಿತ್ತು, 12.30 ಆದರೂ ಕಾಂಗ್ರೆಸ್‌ನ 13 ಸದಸ್ಯರು ಬಿಟ್ಟರೆ ಜೆಡಿಎಸ್‌ ಮತ್ತು ಬಿಜೆಪಿ ಸದಸ್ಯರು ಸಭೆಗೆ ಬಾರದ್ದರಿಂದ ಕಾರ್ಯ ನಿರ್ವಾಹಕ ಅಧಿಕಾರಿ ಲಿಂಗರಾಜಯ್ಯ ಅವರು ವಿಶೇಷ ಸಭೆ ರದ್ದಾಗಿದ್ದು, ಇನ್ನೂ ಎರಡು ವರ್ಷಗಳ ಕಾಲ ಅಧ್ಯಕ್ಷರಾಗಿ ಕಾಳಮ್ಮ ಕೆಂಪರಾಮಯ್ಯ ಅವರೇ ಮುಂದುವರಿಯಲಿದ್ದಾರೆ.

ನಿಮಮಾವಳಿ ಪ್ರಕಾರ ಒಮ್ಮೆ ಅವಿಶ್ವಾಸಕ್ಕೆ ಸಭೆ ಕರೆದು, ಆ ಸಭೆ ರದಾದ್ದರೆ, ಮುಂದಿನ ಎರಡು ವರ್ಷಗಳ ಕಾಲ ಅವಿಶ್ವಾಸ ನಿರ್ಣಯ ಮಂಡಿಸುವಂತಿಲ್ಲ. ಹೀಗಾಗಿ ಹಾಲಿ ಅಧ್ಯಕ್ಷರೇ ಎರಡು ವರ್ಷಗಳ ಕಾಲ ಆಡಳಿತ ನಡೆಸಬಹುದು ಎಂದು ಘೋಷಿಸಿದರು. ಇಒ ಘೋಷಣೆ ಬಳಿಕ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅವರು ಸಭೆಯಲ್ಲಿ ಹಾಜರಿದ್ದ ಕಾಂಗ್ರೆಸ್‌ ಸದಸ್ಯರೊಂದಿಗೆ ಸೇರಿ ಸಂಭ್ರಮಾಚರಣೆ ಮಾಡಿದರು.

Advertisement

38 ಸದಸ್ಯ ಬಲದ ಮೈಸೂರು ತಾಪಂನಲ್ಲಿ ಜೆಡಿಎಸ್‌ 19, ಕಾಂಗ್ರೆಸ್‌ 13, ಬಿಜೆಪಿ 5, ಓರ್ವ ಪಕ್ಷೇತರ ಸದಸ್ಯರನ್ನು ಹೊಂದಿದ್ದು, ಬಿಜೆಪಿ ಬೆಂಬಲದೊಂದಿಗೆ ಜೆಡಿಎಸ್‌ ಅಧಿಕಾರ ಹಿಡಿದಿತ್ತು. ಆದರೆ, ಪಕ್ಷದ ಆಂತರಿಕ ಒಪ್ಪಂದದಂತೆ ರಾಜೀನಾಮೆ ನೀಡಿ ಮತ್ತೂಬ್ಬರಿಗೆ ಅಧ್ಯಕ್ಷ ಸ್ಥಾನ ಬಿಟ್ಟು ಕೊಡದ ಕಾಳಮ್ಮ ಕೆಂಪರಾಮಯ್ಯ ವಿರುದ್ಧ ಜೆಡಿಎಸ್‌ ಸದಸ್ಯರೇ ಅವಿಶ್ವಾಸ ನಿರ್ಣಯಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಸಂಬಂಧ ಮಂಗಳವಾರ ಜೆಡಿಎಸ್‌ನ 23 ಸದಸ್ಯರು ಖಾಸಗಿ ಹೋಟೆಲ್‌ನಲ್ಲಿ ಸಭೆ ಸೇರಿ ಅಧ್ಯಕ್ಷೆಯನ್ನು ಕೆಳಗಿಳಿಸಲು ತೀರ್ಮಾನಿಸಿದ್ದರು. ಆದರೆ, ಬುಧವಾರ ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಅವಿಶ್ವಾಸ ನಿರ್ಣಯ ತರದೆ ಕಾಳಮ್ಮ ಅವರನ್ನೇ ಮುಂದುವರಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಜೆಡಿಎಸ್‌ ಸದಸ್ಯರು ಸಭೆಯಿಂದ ದೂರ ಉಳಿದು, ಅವಿಶ್ವಾಸ ನಿರ್ಣಯವನ್ನು ಕೈಬಿಟ್ಟಿದ್ದಾಗಿ ತಾಪಂ ಉಪಾಧ್ಯಕ್ಷ ಎನ್‌.ಬಿ.ಮಂಜು ತಿಳಿಸಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಹೇಳಿರುವಂತೆ ನಾನು ಕಾನೂನು, ನ್ಯಾಯ ಸಮ್ಮತವಾಗಿ ಅಧಿಕಾರದಲ್ಲಿ ಮುಂದುವರಿದಿದ್ದೇನೆ. ನನ್ನ ವಿರುದ್ಧ ನಡೆದ ಷಡ್ಯಂತ್ರ ವಿಫ‌ಲವಾಗಿದೆ. 
-ಕಾಳಮ್ಮ ಕೆಂಪರಾಮಯ್ಯ, ತಾಪಂ ಅಧ್ಯಕ್ಷೆ

ಪಕ್ಷದ ಹಿರಿಯರು ಎರಡನೇ ಅವಧಿಗೆ ನನ್ನನ್ನು ಅಧ್ಯಕ್ಷರಾಗುವಂತೆ ಸೂಚಿಸಿದ್ದರು. ಅದರಂತೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದೆ. ಪಕ್ಷದ ವರಿಷ್ಠರೇ ಈಗ ಕಾಳಮ್ಮ ಅವರೇ ಅಧ್ಯಕ್ಷರಾಗಿ ಮುಂದುವರಿಯಲು ಸೂಚಿಸಿರುವುದರಿಂದ ವರಿಷ್ಠರ ಆದೇಶಕ್ಕೆ ಬದ್ಧಳಾಗಿದ್ದೇನೆ.
-ತುಳಸಿ, ಅಧ್ಯಕ್ಷ ಸ್ಥಾನದ ಆಕಾಂಕ್ಷಿ 

Advertisement

Udayavani is now on Telegram. Click here to join our channel and stay updated with the latest news.

Next