Advertisement

ಕಲಬುರಗಿ: ವೆಂಟಿಲೇಟರ್ ಕೊರತೆಯಿಂದ ಚಿಕಿತ್ಸೆ ಸಿಗದೆ ಮತ್ತೊಂದು ಸಾವು

11:51 PM Jul 24, 2020 | Hari Prasad |

ಕಲಬುರಗಿ: ಜಿಲ್ಲೆಯಲ್ಲಿ ವೆಂಟಿಲೇಟರ್ ಮತ್ತು ಆಕ್ಸಿಜನ್ ಕೊರತೆಯಿಂದ ಒಂದೇ ದಿನ ಅಂಗನವಾಡಿ ಕಾರ್ಯಕರ್ತೆ ಸೇರಿ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ಇಂತಹದ್ದೇ ಇನ್ನೊಂದು ಸಾವಿನ ಪ್ರಕರಣ ವರದಿಯಾಗಿದೆ.

Advertisement

ವೆಂಟಿಲೇರ್ ಕೊರತೆಯಿಂದ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗದೆ 47 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ವಾರ್ಡ್ 14ರ ನಿವಾಸಿ, ಲಾರಿ ಚಾಲಕ ಮಹ್ಮದ್ ಮುಸ್ತಫಾ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಲಾರಿ ಚಾಲಕರಾಗಿದ್ದ ಮುಸ್ತಫಾ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಜು.17ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿ ಕೋವಿಡ್ ಪರೀಕ್ಷೆಗೆ ಗಂಟಲು ದ್ರಾವಣ ನೀಡಿದ್ದರು. ಜು.22ರಂದು ಬುಧವಾರ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಆಸ್ಪತ್ರೆಯಿಂದ ಬಿಡುಗಡೆಯಾದ ವೇಳೆ ಮೂತ್ರನಾಳ ತೊಂದರೆ ಕಾಣಿಸಿಕೊಂಡಿದೆ.


ಡಯಾಲಿಸಿಸ್ ಮಾಡಬೇಕು ಎಂಬ ಜಿಮ್ಸ್ ವೈದ್ಯರ ಸಲಹೆ ಹಿನ್ನೆಲೆಯಲ್ಲಿ ಇವರನ್ನು ಕರೆದುಕೊಂಡು ಕುಟುಂಬದವರು ಕಲಬುರಗಿ ನಗರದ ಐದು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲೂ ವೆಂಟಿಲೇಟರ್ ಇಲ್ಲ ಎಂದು ಹೇಳಿ ಅವರನ್ನು ದಾಖಲಿಸಿಕೊಂಡಿಲ್ಲ.

Advertisement

ಹೀಗಾಗಿ, ಗುರುವಾರ ಸಂಜೆಯವರೆಗೆ ಖಾಸಗಿ ಆಸ್ಪತ್ರೆಗಳಿಗೆ ಅಲೆದ ಕುಟುಂಬದವರು ಕೊನೆಗೆ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಶುಕ್ರವಾರ ಮನೆಯಲ್ಲಿ ಉಸಿರಾಟದ ತೊಂದರೆಯಾಗಿ ಮುಸ್ತಫಾ ಅಸುನೀಗಿದ್ದಾರೆ.

ಖಾಸಗಿ ಆಸ್ಪತ್ರೆಗಳು ಅಲ್ಲದೇ, ಇಎಸ್ಐ ಆಸ್ಪತ್ರೆಗೂ ನಮ್ಮ ತಂದೆ ಮುಸ್ತಫಾರನ್ನು ಕರೆದುಕೊಂಡು ಹೋಗಿದ್ದೇವು. ಆದರೆ, ವೆಂಟಿಲೇಟರ್ ಇಲ್ಲ ಎಂದು ನೆಪ ಹೇಳಿ ಯಾರೂ ದಾಖಲಿಸಿಕೊಳ್ಳಲಿಲ್ಲ.

ಅದಲ್ಲದೇ, ಕೋವಿಡ್ ರೋಗಿ ಎಂಬಂತೆ ಖಾಸಗಿ ಆಸ್ಪತ್ರೆಯವರು ವರ್ತಿಸಿದರು. ಕೋವಿಡ್ ವರದಿ ನೆಗೆಟಿವ್ ಇದೆ ತೋರಿಸಿದರೂ ಆಸ್ಪತ್ರೆಯವರು ತಂದೆಯನ್ನು ದಾಖಲಿಸಿಕೊಳ್ಳಲಿಲ್ಲ ಎಂದು ಮೃತನ ಪುತ್ರ ಎಂ.ಡಿ.ಬಾಷಿದ್ ದೂರಿದ್ದಾರೆ.‌

ಇದೇ ಮಂಗಳವಾರ ಅಂಗನವಾಡಿ ಕಾರ್ಯಕರ್ತೆ ಮತ್ತು ಮತ್ತೋರ್ವ ಮಹಿಳೆ ಸಹ ವೆಂಟಿಲೇಟರ್ ಗಾಗಿ ಹಲವು ಆಸ್ಪತ್ರೆಗಳಿಗೆ ಅಲೆದು ಸಾವನ್ನಪ್ಪಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next