ಶಿರಸಿ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಭಾವಚಿತ್ರವನ್ನು ಅನಧಿಕೃತವಾಗಿ ಬಳಸಿಕೊಂಡು ಚುನಾವಣಾ ವಿಚಾರದಲ್ಲಿ ಗೊಂದಲ ಸೃಷ್ಟಿಸುವ ಫೇಸ್ ಬುಕ್ ಪೇಜ್ ವಿರುದ್ಧ ಚುನಾವಣಾ ಅಧಿಕಾರಿಗಳಲ್ಲಿ ದೂರೊಂದು ದಾಖಲಾಗಿದೆ.
ಶಿರಸಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿರುವ ಕಾಗೇರಿ ಅವರ ಭಾವಚಿತ್ರವನ್ನು ಬಳಸಿಕೊಂಡು ಬಲಿಷ್ಠ ಬ್ರಾಹ್ಮಣ ಸಮಾಜ ಶಿರಸಿ ಸಿದ್ದಾಪುರ ಎಂದು ಫೇಸ್ ಬುಕ್ ಪೇಜ್ ತೆರೆದು ಒಂದೇ ಒಂದುಮತ ಹಾಳಾಗದಿರಲಿ…ಎಲ್ಲ ಮತ ಕಾಗೇರಿ ಅವರಿಗೆ ನೀಡಿ ನಮ್ಮ ಬ್ರಾಹ್ಮಣ ಸಮಾಜ ಬಲಿಷ್ಠ ಮಾಡಿ ಎಂದು ಪೋಸ್ಟ್ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾ ಸಹ ವಕ್ತಾರ ಸದಾನಂದ ಭಟ್ಟ ದೂರಿದ್ದಾರೆ.
ಈ ಫೇಸ್ ಬುಕ್ ಖಾತೆಯ ಮೂಲಕ ಕಾಗೇರಿ ಅವರು ಜಾತಿ ಆಧಾರದಲ್ಲಿ ಮತ ಕೇಳುತ್ತಿದ್ದಾರೆ ಎಂಬ ತಪ್ಪು ಸಂದೇಶ ಬಿತ್ತುವ ಕುಚೋದ್ಯ ಇದಾಗಿದೆ. ಕಾಗೇರಿ ಅವರ ಫೋಟೋವನ್ನು ಅನಧಿಕೃತವಾಗಿ ಬಳಸಿಕೊಳ್ಳಲಾಗಿದೆ. ಜಾತಿ ಆಧಾರದಲ್ಲಿ ಮತ ಚಲಾಯಿಸಲು ಪ್ರೇರೇಪಿಸುವ ಕಾರ್ಯ ಆಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಚುನಾವಣಾ ಅಧಿಕಾರಿಗಳಲ್ಲಿ ಸದಾನಂದ ಭಟ್ಟ ವಿನಂತಿಸಿದ್ದಾರೆ.