Advertisement

Gangolli: ರಥಬೀದಿಯಲ್ಲಿ ಅನಧಿಕೃತ ವಾಹನ ನಿಲುಗಡೆ

01:15 PM Aug 15, 2024 | Team Udayavani |

ಗಂಗೊಳ್ಳಿ: ಗಂಗೊಳ್ಳಿ ಗ್ರಾಮದ ರಥಬೀದಿಯಲ್ಲಿ ರಥೋತ್ಸವದ ಜಾತ್ರೆಗಾಗಿ ಕಾದಿರಿಸ ಲಾಗಿದ್ದ ಜಾಗ ವಾಹನ ನಿಲುಗಡೆಯ ತಾಣವಾಗಿ ಮಾರ್ಪಡುತ್ತಿದ್ದು, ಪಂಚಾಯತ್‌ ಆದೇಶ ಧಿಕ್ಕರಿಸಿ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸುತ್ತಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ರಥಬೀದಿ ಜಾತ್ರೆಗೆ ಮೀಸಲು

ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಸುಮಾರು 350 ವರ್ಷಗಳ ಇತಿಹಾಸವಿದ್ದು, ವಿವಿಧ ಪಂಚಪರ್ವಗಳ ಆಚರಣೆ, ಉತ್ಸವಗಳು, ರಥೋತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಈ ಉದ್ದೇಶದಿಂದ ರಥಬೀದಿಯಲ್ಲಿ ಸರ್ವೇ ನಂ. 93-5ಂ ದಲ್ಲಿ 0.89 ಎಕರೆ ವಿಸ್ತೀರ್ಣದ ಜಾಗದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಹಾಗೂ ಇನ್ನಿತರ ಚಟುವಟಿಕೆಗಳು ನಡೆಯುವ ಸಾಧ್ಯತೆ ಇರುವುದರಿಂದ ರಥಬೀದಿಯ ಪಾವಿತ್ರ್ಯತೆ ಕಾಪಾಡಿಕೊಳ್ಳುವ ಉದ್ದೇಶದಿಂದ 1998ರಲ್ಲೇ ಗ್ರಾಮ ಪಂಚಾಯತ್‌ ವಿಶೇಷ ಸಭೆಯಲ್ಲಿ ರಥಬೀದಿಯನ್ನು ರಥೋತ್ಸವದ ಜಾತ್ರೆಗಾಗಿಯೇ ಕಾದಿರಿಸಲಾಗಿದೆ ಎಂಬ ನಿರ್ಣಯ ಕೈಗೊಳ್ಳಲಾಗಿತ್ತು.

ನಿಲುಗಡೆ ನಿಷೇಧಿಸಿ ನಿರ್ಣಯ

ಆ ಬಳಿಕ ಮತ್ತೂಮ್ಮೆ 2021 ಮತ್ತೂ 2024ರಲ್ಲಿ ನಡೆದ ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಸಾಮಾನ್ಯ ಸಭೆ ಹಾಗೂ ಗ್ರಾಮ ಸಭೆಯಲ್ಲಿ ರಥಬೀದಿ ವಠಾರದಲ್ಲಿ ರಿಕ್ಷಾ ಮತ್ತಿತರ ವಾಹನ ನಿಲುಗಡೆಯನ್ನು ನಿಷೇಧಿಸಿ ನಿರ್ಣಯ ಕೈಗೊಳ್ಳಲಾಗಿತ್ತು.

Advertisement

ಆದೇಶ ಧಿಕ್ಕರಿಸಿ ನಿಲುಗಡೆ

ರಥಬೀದಿ ಪರಿಸರದಲ್ಲಿ ವಾಹನ ನಿಲುಗಡೆ ನಿಷೇಧಿಸಿ ಗ್ರಾಮ ಪಂಚಾಯತ್‌ ನಾಮಫಲಕ ಅಳವಡಿಸಿದ್ದು, ಗ್ರಾಮ ಪಂಚಾಯತ್‌ ಆದೇಶ ಧಿಕ್ಕರಿಸಿ, ಪೊಲೀಸರ ಎಚ್ಚರಿಕೆಯನ್ನು ಕಡೆಗಣಿಸಿ ಕಳೆದ ಕೆಲವು ತಿಂಗಳುಗಳಿಂದ ರಥಬೀದಿ ಸಮೀಪ ಅನಧಿಕೃತವಾಗಿ ರಿಕ್ಷಾಮತ್ತಿತರ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ರಾತ್ರಿ ವೇಳೆ ಉದ್ದೇಶಪೂರ್ವಕವಾಗಿ ಬಸ್ಸುಗಳನ್ನು, ಮೀನು ಲಾರಿಗಳನ್ನು ಹಾಗೂ ಗೂಡ್ಸ್‌ ವಾಹನಗಳನ್ನು ನಿಲ್ಲಿಸಿ, ರಥಬೀದಿ ಪರಿಸರದಲ್ಲಿ ವಾಹನಗಳನ್ನು ತೊಳೆದು ತ್ಯಾಜ್ಯಗಳನ್ನು ರಥಬೀದಿ ಪರಿಸರದಲ್ಲಿ ಹಾಕಿ ಮಲಿನ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ರಿಕ್ಷಾ ನಿಲ್ದಾಣ

ರಥೋತ್ಸವ ಜಾತ್ರೆಗಾಗಿ ಮೀಸಲಿಟ್ಟ ಜಾಗದಲ್ಲಿ ರಿಕ್ಷಾನಿಲ್ದಾಣ ನಿರ್ಮಿಸುವ ಮತ್ತು ವಾಹನ ಪಾರ್ಕಿಂಗ್‌ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಥಬೀದಿಯಲ್ಲಿ ಬಸ್‌ ನಿಲುಗಡೆ ಮಾಡದಂತೆ ಅನೇಕ ಬಾರಿ ಮೌಖೀಕವಾಗಿ ತಿಳಿಸಿದ್ದರೂ ಗ್ರಾಮ ಪಂಚಾಯತ್‌ ಆದೇಶವನ್ನು ಉಲ್ಲಂಘಿಸಿ, ಗ್ರಾಮ ಸಭೆಯ ನಿರ್ಣಯವನ್ನು ಧಿಕ್ಕರಿಸಿ ಉದ್ದೇಶಪೂರ್ವಕವಾಗಿ ರಥಬೀದಿಯಲ್ಲಿ ಬಸ್‌ ಹಾಗೂ ಇನ್ನಿತರ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ರಥೋತ್ಸವಕ್ಕೆ ಜಾಗದ ಕೊರತೆಯಾಗುವ ಸಾಧ್ಯತೆ ಇದೆ ಎಂದು ದೇವಸ್ಥಾನದ ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ.

ಆಗ್ರಹ

ರಥಬೀದಿ ವಠಾರದಲ್ಲಿ ಯಾವುದೇ ಬಸ್‌, ಲಾರಿ ಹಾಗೂ ಇನ್ನಿತರ ವಾಹನಗಳಿಗೆ ನಿಲುಗಡೆಗೆ ಅನುಮತಿ ನೀಡಬಾರದಾಗಿ ಮತ್ತು ಪಂಚಾಯತ್‌ ಆದೇಶ ಉಲ್ಲಂಘಿಸಿ ಮತ್ತು ಪೊಲೀಸರ ಸೂಚನೆಯನ್ನು ದಿಕ್ಕರಿಸಿ ನಿಲುಗಡೆ ಮಾಡುತ್ತಿರುವ ಬಸ್‌, ಲಾರಿ ಹಾಗೂ ಆಟೋ ರಿಕ್ಷಾಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.

ಗೋವುಗಳ ಕಳ್ಳತನ

ರಥಬೀದಿ ಪರಿಸರದಲ್ಲಿ ರಾತ್ರಿ ಹೊತ್ತು ಸುಮಾರು 20-25 ಬೀಡಾಡಿ ಗೋವುಗಳು ವಿಶ್ರಾಂತಿ ಪಡೆಯುತ್ತಿದ್ದು, ಎರಡು ಬಾರಿ ಗೋ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ಗೋ ಕಳ್ಳರ ಈ ಕೃತ್ಯ ಸಿಸಿ ಟಿವಿಯಲ್ಲಿ ಕಂಡು ಬಂದಿದೆ. ರಾತ್ರಿ ವೇಳೆ ವಾಹನಗಳನ್ನು ನಿಲ್ಲಿಸಿ ಜಾನುವಾರುಗಳನ್ನು ಕಳ್ಳತನ ಮಾಡಿ ಅಕ್ರಮವಾಗಿ ಸಾಗಾಟ ಮಾಡುವ ಶಂಕೆ ಕೂಡ ವ್ಯಕ್ತವಾಗಿದೆ. ರಥಬೀದಿ ಪರಿಸರದಲ್ಲಿ ಬೆರಳಣಿಕೆಯಷ್ಟು ಮನೆಗಳಿದ್ದು, ರಾತ್ರಿ ವೇಳೆ ಜನರ ಸಂಚಾರ ವಿರಳವಾಗಿದೆ. ಇದರ ಲಾಭ ಪಡೆಯಲು ಹವಣಿಸುತ್ತಿರುವ ಗೋ ಕಳ್ಳರು ರಥಬೀದಿ ಪರಿಸರದಿಂದ ಜಾನುವಾರು ಕಳವು ಮಾಡಲು ಯತ್ನಿಸುತ್ತಿದ್ದಾರೆ ಎಂಬ ಗುಮಾನಿ ಹೆಚ್ಚುತ್ತಿದೆ.

ಸೂಕ್ತ ಕಾನೂನು ಕ್ರಮ ಕೈಗೊಳ್ಳಿ

ಗ್ರಾಮ ಪಂಚಾಯತ್‌ ವಿಶೇಷ ಸಭೆಯಲ್ಲಿ ರಥಬೀದಿಯನ್ನು ರಥೋತ್ಸವದ ಜಾತ್ರೆಗಾಗಿಯೇ ಕಾದಿರಿಸಲಾಗಿದೆ ಎಂಬ ನಿರ್ಣಯ ಕೈಗೊಂಡು ರಥಬೀದಿಯಲ್ಲಿ ಈ ಬಗ್ಗೆ ನಾಮಫಲಕ ಅಳವಡಿಸಲಾಗಿದೆ. ಪಂಚಾಯತ್‌ ಆದೇಶವನ್ನು ಉಲ್ಲಂಘಿಸಿ, ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಉದ್ದೇಶಪೂರ್ವಕವಾಗಿ ರಥಬೀದಿಯಲ್ಲಿ ವಾಹನ ನಿಲುಗಡೆ ಮಾಡಿ ರಥಬೀದಿಯ ಪಾವಿತ್ರ್ಯ ಹಾಳು ಮಾಡುವ ಮತ್ತು ರಥಬೀದಿಯಲ್ಲಿ ಅನಧಿಕೃತ ರಿಕ್ಷಾ ನಿಲ್ದಾಣ ಮಾಡುವ ಸಂಚು ನಡೆಯುತ್ತಿದೆ. ಸಂಬಂಧಪಟ್ಟ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.-ರಾಘವೇಂದ್ರ ಪೈ, ಗ್ರಾ.ಪಂ. ಮಾಜಿ ಸದಸ್ಯ, ಗಂಗೊಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next