ಬೈಂದೂರು: ಪಶ್ಚಿಮ ಘಟ್ಟದ ತಪ್ಪಲಿನ ಗಂಗನಾಡು ಎನ್ನುವ ಗ್ರಾಮೀಣ ಪ್ರದೇಶ ಗಣಿಗಾರಿಕೆಯಿಂದ ನಲುಗಿ ಹೋಗಿದೆ. ಹಚ್ಚ ಹಸುರಿನಿಂದ ಕಂಗೊಳಿಸುವ ಗಂಗನಾಡು ಈಗ ಚರ್ಮ ಸೀಳಿದ ದೇಹದಂತೆ ಕಾಣುತ್ತಿದೆ. ಕಳೆದ ಹಲವು ವರ್ಷಗಳಿಂದ ಇಲ್ಲಿನ ಗ್ರಾಮೀಣ ಭಾಗಗಳಲ್ಲಿ ಅನಧಿಕೃತ ಕೆಂಪುಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಈ ಕುರಿತು ಉದಯವಾಣಿ ಎರಡು ಬಾರಿ ವರದಿ ಪ್ರಕಟಿಸಿದೆ.
ಲಿಖೀತ ದೂರು
ಬಳಿಕ ಗಣಿಗಾರಿಕೆ ಅಧಿಕಾರಿಗಳು ಆಗೊಮ್ಮೆ ಈಗೊಮ್ಮೆ ದಾಳಿ ನಡೆಸುವ ಕಾರ್ಯ ಮಾಡಿದ್ದಾರೆ. ಅಧಿಕಾರಿಗಳು ಹಿಂದಿರುಗಿದ ತತ್‌ಕ್ಷಣ ಮತ್ತೆ ಗಣಿಗಾರಿಕೆ ಆರಂಭವಾಗುತ್ತದೆ.ಬಹುತೇಕ ಇಲಾಖೆಗಳಿಗೆ ಲಿಖೀತ ದೂರು ನೀಡಿದ್ದೇವೆ. ಕಲ್ಲು ಕೋರೆ ಹೊಂಡಗಳು ಬೃಹತ್ ಕೆರೆಯಂತೆ ಅಪಾಯಕಾರಿ ಗುಂಡಿಗಳಾಗಿ ನಿರ್ಮಾಣವಾಗಿವೆ. ಯಾವುದೇ ಅಧಿಕಾರಿಗಳು ಈ ಕುರಿತು ಗಮನ ಹರಿಸುವುದಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಅಪಾಯಕಾರಿ ಕಲ್ಲು ಸಾಗಾಟ
ಬೈಂದೂರು ಭಾಗದಲ್ಲಿ ಲಾರಿಗಳಲ್ಲಿ ಕೆಂಪುಕಲ್ಲು ಹಾಗೂ ಶಿಲೆಕಲ್ಲು ಸಾಗಾಟಕ್ಕೆ ಯಾವುದೇ ನಿರ್ಬಂಧಗಳಿಲ್ಲ. ತೆರೆದ ಲಾರಿಗಳಲ್ಲಿ ಯಾವುದೇ ಮುಂಜಾಗರೂಕತೆ ವಹಿಸದೆ ಅತಿ ವೇಗದಲ್ಲಿ ಟಿಪ್ಪರ್ ಚಲಾಯಿಸಿ ಸಾಗುವುದು ನಿತ್ಯ ಪಾದಚಾರಿ ಗಳು ಹಾಗೂ ಇತರ ವಾಹನ ಸವಾರರು ಆತಂಕ ಪಡು ವಂತಾಗಿದೆ. ಗಂಗನಾಡು ರಸ್ತೆಯಲ್ಲಿ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಕಾಲೇಜಿಗೆ ತೆರಳುತ್ತಾರೆ.
ಇನ್ನುಳಿದಂತೆ ಶಾಲಾ ವಾಹನ, ರೈಲ್ವೇ ಟ್ರ್ಯಾಕ್ ಮುಂತಾದವುಗಳಿವೆ. ಎಲ್ಲ ಕಡೆಗಳಲ್ಲೂ ಕೆಂಪು ಕಲ್ಲು ತುಂಬಿದ ಟಿಪ್ಪರ್‌ಗಳ ಅತಿ ವೇಗದಿಂದ ಸಾಗಾಟದ ಪರಿಣಾಮ ಕೆಲವೊಮ್ಮೆ ಕಲ್ಲುಗಳು ರಸ್ತೆಗೆ ಉರುಳಿದ ನಿದರ್ಶನಗಳಿವೆ.
ಮಳೆಗಾಲದಲ್ಲಿ ಸರಿಯಿರುವ ರಸ್ತೆಗಳು ಹೊಂಡ ಬೀಳುತ್ತಿವೆ.ಅದರಲ್ಲೂ ನಿತ್ಯ ಕಲ್ಲು ಲಾರಿಗಳ ಸಾಗಾಟದಿಂದ ರಸ್ತೆಗಳು ಕೂಡ ಹಾಳಾಗುತ್ತಿವೆೆ.
ಹೀಗಾಗಿ ಸಾರ್ವಜನಿಕರಿಗೆ ಹಾಗೂ ಪರಿಸರ ರಕ್ಷಣೆ ಉದ್ದೇಶದಿಂದ ಗಂಗನಾಡು ಭಾಗದಲ್ಲಿ ನಡೆಯುವ ಅವ್ಯಾಹತ ಗಣಿಗಾರಿಕೆಗೆ ಇಲಾಖೆ ಕಡಿವಾಣ ಹಾಕಬೇಕಾಗಿದೆ ಎನ್ನುವುದು ಸಾರ್ವತ್ರಿಕ ಅಭಿಪ್ರಾಯವಾಗಿದೆ.
– ಅರುಣ್ ಕುಮಾರ್ ಶಿರೂರು