ಬೆಳ್ತಂಗಡಿ: ಕೋವಿಡ್ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ನ.ಪಂ. ವ್ಯಾಪ್ತಿಯಲ್ಲಿ ಅನಧಿಕೃತವಾಗಿ ತಲೆಎತ್ತಿದ್ದ ಗೂಡಂಗಡಿ, ಹಣ್ಣುಹಂಪಲು ಮಾರಾಟದ ಅಂಗಡಿಗಳನ್ನು ಸ್ವಯಂಪ್ರೇರಿತರಾಗಿ ತೆಗೆಯುವಂತೆ ಕೆಲವು ದಿನಗಳಿಂದ ಸೂಚನೆ ನೀಡಿದರೂ ಹಾಗೇ ಇದ್ದ ಹಿನ್ನೆಲೆಯಲ್ಲಿ ರವಿವಾರ ರಾತ್ರಿ ನ.ಪಂ. ತಹಶೀಲ್ದಾರ್ ಸಮ್ಮುಖದಲ್ಲಿ ತೆರವುಗೊಳಿಸಿತ್ತು.
ನ.ಪಂ. ಏಕಾಏಕಿ ಗೂಡಂಗಡಿ ತೆರವುಗೊಳಿಸುವ ಮೂಲಕ ವ್ಯಾಪರಸ್ಥರನ್ನು ಸಂಕಷ್ಟದ ಸಮಯದಲ್ಲಿ ಬೀದಿಗೆ ತಳ್ಳುವ ಕೆಲಸ ಮಾಡಿದೆ ಎಂದು ಆರೋಪಿಸಿ ಮಾಜಿ ಶಾಸಕರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ವ್ಯಾಪಾರಸ್ಥರು ಸೋಮವಾರ ನ.ಪಂ. ಮುಂದೆ ಧರಣಿ ನಡೆಸಿದರು.
ಮಾಜಿ ಶಾಸಕ ಕೆ. ವಸಂತ ಬಂಗೇರ ಮಾತನಾಡಿ, ಹದಿನೈದು ವರ್ಷಗಳಿಂದಲೂ ರಸ್ತೆ ಬದಿ ವ್ಯಾಪಾರ ನಡೆಸುತ್ತಿದ್ದ ಗೂಡಂಗಡಿಗಳನ್ನು ನ.ಪಂ. ಮುಖ್ಯಾಧಿಕಾರಿಗಳು ಏಕಾಏಕಿ ತೆರವುಗೊಳಿಸಿರುವುದು ಸರಿಯಲ್ಲ ಎಂದರು.
ನ.ಪಂ. ಮುಖ್ಯಾಧಿಕಾರಿ ಎಂ.ಎಚ್. ಸುಧಾ ಕರ್ ಮಾತನಾಡಿ, ನಾವು ಕಾನೂನು ರೀತಿಯಲ್ಲೆ ತೆರವುಗೊಳಿಸಿದ್ದೇವೆ. ಈಗಾಗಲೇ ನ.ಪಂ. ವ್ಯಾಪ್ತಿ ಯಲ್ಲಿ 23 ಅನಧಿಕೃತ ಗೂಡಂಗಡಿಗಳಿವೆ. ಎಲ್ಲರಿಗೂ ಮುಕ್ತಗೊಳಿಸಲು ಸೂಚಿಸಲಾಗಿದೆ. ತಳ್ಳುಗಾಡಿ, ಮೊಬೈಲ್ ವಾಹನದ ಮೂಲಕ ಹಣ್ಣು ಹಂಪಲು ಮಾರಾಟ ಮಾಡಬಹುದು. ನಿಯಮಾನುಸಾರ ವ್ಯಾಪಾರ ನಡೆಸದೇ ಹೋದಲ್ಲಿ ಎಲ್ಲ ಅಂಗಡಿ ತೆರವುಗೊಳಿಸಲಾಗುವುದು ಎಂದರು.
ಅಧಿಕಾರಿಗಳು, ಜನಪ್ರತಿನಿಧಿಗಳು ಮಾತುಕತೆ ನಡೆಸಿ ಸದ್ಯಕ್ಕೆ ಲಾಕ್‌ಡೌನ್ ಮುಗಿಯುವ ವರೆಗೆ ಬೆಳಗ್ಗೆ ಮಾರಾಟ ನಡೆಸಿ ರಾತ್ರಿ ಅಂಗಡಿ, ಸಾಮಗ್ರಿ ತೆರವುಗೊಳಿಸಬೇಕು ಎಂದರು. ಹಾಗಾಗಿ ಪ್ರತಿಭಟನೆ ಕೈ ಬಿಡಲಾಯಿತು.
ವಿ.ಪ. ಸದಸ್ಯ ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಉಭಯ ಘಟಕದ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ರಂಜನ್ ಜಿ. ಗೌಡ, ಯುತ್ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್, ನ.ಪಂ. ಸದಸ್ಯ ಜಗದೀಶ ಡಿ., ಮುಸ್ತರ್‌ಜಾನ್ ಮೆಹಬೂಬ್, ಜನಾರ್ದನ, ರಾಮಚಂದ್ರ ಗೌಡ, ಕಾಂಗ್ರೆಸ್ ಅಲ್ಪಸಂಖ್ಯಾಕ ಘಟಕದ ತಾ| ಅಧ್ಯಕ್ಷ ಅಶ್ರಫ್ ನೆರಿಯ, ತಾ.ಪಂ. ಸದಸ್ಯ ಪ್ರವೀಣ್ ಕುಮಾರ್, ನ.ಪಂ. ಮಾಜಿ ನಾಮನಿರ್ದೇಶಕ ಸದಸ್ಯ ಶಂಕರ ಹೆಗ್ಡೆ, ಕೆ.ಪಿ.ಸಿ.ಸಿ. ಸದಸ್ಯ ರಾಮಚಂದ್ರ ಗೌಡ, ಕಾಂಗ್ರೆಸ್ ಎಸ್.ಸಿ. ಘಟಕ ಅಧ್ಯಕ್ಷ ವಸಂತ ಬಿ.ಕೆ., ಚಂದು ಎಲ್., ಎ.ಪಿ.ಎಂ.ಸಿ. ಅಧ್ಯಕ್ಷ ಭರತ್. ಮಿತ್ತಬಾಗಿಲು ಗ್ರಾ.ಪಂ. ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಒಳಂಬ್ರ, ಮೊದಲಾದವರಿದ್ದರು.