Advertisement

ಅನಧಿಕೃತ ಕಾರ್ಡ್‌ದಾರರಿಂದ 24.24 ಲಕ್ಷ ರೂ. ದಂಡ ವಸೂಲಿ

12:41 AM Mar 25, 2022 | Team Udayavani |

ಉಡುಪಿ: ಸರಕಾರಿ ಅಥವಾ ಅರೆಸರಕಾರಿ ಸಂಸ್ಥೆಗಳ ನೌಕರರಾಗಿದ್ದು ಅಕ್ರಮವಾಗಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿ ಹೊಂದಿರುವವರಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈವರೆಗೆ 24,24,447 ರೂ. ದಂಡ ವಸೂಲಿ ಮಾಡಲಾಗಿದೆ.

Advertisement

ರಾಜ್ಯದಲ್ಲಿ 2,543 ಅಂತ್ಯೋದಯ, 18,689 ಆದ್ಯತಾ ಚೀಟಿ ಸಹಿತ 21,232 ಅನಧಿಕೃತ ಪಡಿತರ ಚೀಟಿ ಹೊಂದಿರುವ ನೌಕರರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಕಾರಣ ಕೇಳಿ ನೋಟಿಸ್‌ ನೀಡಿ, ಕಾರ್ಡ್‌ ರದ್ದು ಮಾಡಿ, ನಿಯಮಾನುಸಾರ ದಂಡ ವಸೂಲಿ ಮಾಡಲಾಗುತ್ತಿದೆ.

ಪತ್ತೆ ಸುಲಭ :

ನೌಕರರು ಸರಕಾರಿ ಅಥವಾ ಅರೆಸರಕಾರಿ ಸಂಸ್ಥೆಗೆ ಉದ್ಯೋಗಕ್ಕೆ ಸೇರಿದ ದಿನದಿಂದಲೇ ಅನ್ವಯವಾಗುವಂತೆ ಇಂದಿನ ಇಲಾಖೆಯ ಪಡಿತರ ದರಕ್ಕೆ ಅನುಗುಣವಾಗಿ ದಂಡ ವಸೂಲಿ ಮಾಡಲಾಗುತ್ತಿದೆ. ಪ್ರತಿಯೊಂದು ಪಡಿತರ ಚೀಟಿಯೂ ಆಧಾರ್‌ ಕಾರ್ಡ್‌ನೊಂದಿಗೆ ಲಿಂಕ್‌ ಆಗಿರುವ ಜತೆಗೆ ಬೆರಳಚ್ಚು ಕೂಡ ತೆಗೆದುಕೊಂಡಿರುವುದರಿಂದ ಅನಧಿಕೃತ ಕಾರ್ಡುದಾರರ ಪತ್ತೆಯೂ ಸುಲಭವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಉಡುಪಿ ಜಿಲ್ಲೆಯ 51 ಮಂದಿ ಅಂತ್ಯೋದಯ ಅನ್ನ ಹಾಗೂ 171 ಮಂದಿ ಆದ್ಯತಾ ಪಡಿತ ಚೀಟಿಯನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ. ದಕ್ಷಿಣ ಕನ್ನಡ  ಜಿಲ್ಲೆಯ 25 ನೌಕರರು ಅಂತ್ಯೋದಯ ಅನ್ನ ಹಾಗೂ 100 ಮಂದಿ ಅದ್ಯತಾ ಚೀಟಿಯನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಈ ಎರಡು ಜಿಲ್ಲೆಯಲ್ಲಿ 347 ಅನಧಿಕೃತ ಕಾರ್ಡ್‌ದಾರರಿದ್ದಾರೆ.

Advertisement

ದ.ಕ. ಜಿಲ್ಲೆಯ 6 ತಾಲೂಕುಗಳಲ್ಲಿ ಅನಧಿಕೃತವಾಗಿ ಅತ್ಯೋದಯ ಕಾರ್ಡ್‌ ಹೊಂದಿದವರಿಂದ 4,62,317 ರೂ., ಅನಧಿಕೃತವಾಗಿ ಆದ್ಯತಾ ಚೀಟಿ ಹೊಂದಿದವರಿಂದ 10,83,497 ರೂ. ದಂಡ ವಸೂಲಿ ಮಾಡಲಾಗಿದೆ. ಹಾಗೆಯೇ ಉಡುಪಿಯ ಮೂರು ತಾಲೂಕುಗಳಲ್ಲಿ ಅನಧಿಕೃತವಾಗಿ ಅತ್ಯೋದಯ

ಕಾರ್ಡ್‌ ಹೊಂದಿದವರಿಂದ 2,16,540 ರೂ., ಅನಧಿಕೃತವಾಗಿ ಆದ್ಯತಾ ಚೀಟಿ ಹೊಂದಿದ ವರಿಂದ 6,62,093 ರೂ. ದಂಡ ವಸೂಲಿ ಮಾಡಲಾಗಿದೆ.

ಇದು ನಿರಂತರ ಪ್ರಕ್ರಿಯೆ ಆಗಿದ್ದು, ಅನಧಿಕೃತ  ಕಾರ್ಡ್‌ದಾರರಿಗೆ ನೋಟಿಸ್‌  ನೀಡಿದ ಅನಂತರ ಅವರಿಂದ ಬರುವ  ಉತ್ತರದ ಆಧಾರದಲ್ಲಿ ಪರಿಶೀಲನೆ ಪ್ರಕ್ರಿಯೆ ನಡೆದು, ಅನರ್ಹರಿದ್ದಲ್ಲಿ ದಂಡ ವಿಧಿಸಲಾಗುತ್ತದೆ. ದ.ಕ. ಜಿಲ್ಲೆಯಲ್ಲಿ ಈವರೆಗೆ 125 ನೌಕರರಿಗೆ ಹಾಗೂ ಉಡುಪಿಯಲ್ಲಿ 44 ನೌಕರರಿಗೆ ದಂಡ ವಿಧಿಸಲಾಗಿದೆ.

ತಾಲೂಕುವಾರು ದಂಡ ವಿವರ (ರೂ.ಗಳಲ್ಲಿ)

ಬೆಳ್ತಂಗಡಿ         69,094

ಬಂಟ್ವಾಳ        2,02,632

ಮಂಗಳೂರು    7,46,978

ಮಂಗಳೂರು ಐಆರ್‌ಎ 4,06,230

ಪುತ್ತೂರು         45,320

ಸುಳ್ಯ   75,560

ಉಡುಪಿ           19,800

ಕುಂದಾಪುರ     6,35,872

ಬೈಂದೂರು      2,22,961

ಸರಕಾರದ ನಿರ್ದೇಶನದಂತೆ ಅನರ್ಹ  ಕಾರ್ಡ್‌ಗಳನ್ನು ವಾಪಸ್‌ ಪಡೆದು, ದಂಡ ವಸೂಲಿ ಮಾಡುತ್ತಿದ್ದೇವೆ. ಜತೆಗೆ ಪರಿಶೀಲನೆ ನಡೆಸಿ ಅರ್ಹರಿಗೆ ಅನ್ಯಾಯ ಆಗದಂತೆಯೂ ಎಚ್ಚರ ವಹಿಸುತ್ತಿದ್ದೇವೆ. -ಕೆ.ಪಿ. ಮಧುಸೂದನ್‌ /  ಮೊಹಮ್ಮದ್‌ ಇಸಾಕ್‌ ಜಿಲ್ಲಾ ಉಪನಿರ್ದೇಶಕರು,  ದ.ಕ. ಮತ್ತು ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next