ಬೆಂಗಳೂರು: ನಗರದಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಮುಲಾಜಿಲ್ಲದೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ, ಈ ವಿಚಾರದಲ್ಲಿ ಹಿಂದೇಟು ಹಾಕಬೇಡಿ ನ್ಯಾಯಾಲಯ ನಿಮ್ಮೊಂದಿಗಿದೆ. ಕಾನೂನು ರೀತಿ ಕ್ರಮ ಕೈಗೊಳ್ಳಲು ನಿಮಗೆ ಪೂರ್ಣ ಅಧಿಕಾರ ನೀಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹೈಕೋರ್ಟ್ ಹೇಳಿದೆ.
ಅನಧಿಕೃತ ಕಟ್ಟಡಗಳ ತೆರವು ವಿಚಾರವಾಗಿ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿ ಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾ. ಸಚಿನ್ ಶಂಕರ್ ಮುಗದಂ ಅವರಿದ್ದ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.
ಈ ವೇಳೆ ಬಿಬಿಎಂಪಿ ಸಲ್ಲಿಸಿದ ಪ್ರಮಾಣಪತ್ರ ಪರಿಶೀಲಿಸಿದ ನ್ಯಾಯಪೀಠ, 2019ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾದ ಮೇಲೂ ಕ್ರಮ ಕೈಗೊಂಡಿಲ್ಲ. ನಕ್ಷೆ ಇಲ್ಲದ ಅನಧಿಕೃತ ಕಟ್ಟಡಗಳ ವಿರುದ್ಧ ಏಕೆ ಕ್ರಮ ಜರುಗಿಸಿಲ್ಲ. ಪಾಲಿಕೆಯ ಈ ನಡೆ ನಿಜಕ್ಕೂ ಅಚ್ಚರಿ ತಂದಿದೆ. ಅನಕೃತ ಕಟ್ಟಡಗಳನ್ನು ತೆರವುಗೊಳಿಸಲು ಏಕೆ ಹೆದರುತ್ತಿದ್ದೀರಿ? ಯಾರ ಭಯವಿದೆ, ಪ್ರಭಾವಿಗಳ ಒತ್ತಡವಿದೆಯೇ, ಏನು ಹೆದರಬೇಡಿ , ನ್ಯಾಯಾಲಯ ನಿಮ್ಮೊಂದಿಗೆ, ಕಾನೂನು ಪ್ರಕಾರ ಏನೇನು ಕ್ರಮ ಕೈಗೊಳ್ಳಬೇಕೋ ಕೈಗೊಳ್ಳಿ ಯಾವುದೇ ಮುಲಾಜು ನೋಡುವುದು ಬೇಡ ಎಂದು ನ್ಯಾಯಪೀಠ ಹೇಳಿತು.
ಬೇಗ ಕ್ರಮ ಕೈಗೊಂಡರೆ ನಿಮಗೂ ಒಳ್ಳೆಯದು ಎಂದು ಎಚ್ಚರಿಕೆ ನೀಡಿದ ನ್ಯಾಯಪೀಠ, ಪಾರ್ಕ್, ರಸ್ತೆ, ಉದ್ಯಾನವನ ಮತ್ತಿತರರ ಸಾರ್ವಜನಿಕ ಪ್ರದೇಶಗಳಲ್ಲಿನ ಅಕ್ರಮ ಕಟ್ಟಡ ತೆರವು ಗೊಳಿಸಲೇಬೇಕು. ತೆರವುಗೊಳಿಸಿದ ಫೋಟೋ ಸಹಿತ ವರದಿ ಸಲ್ಲಿಸಬೇಕು ಎಂದು ಸೂಚಿಸಿತು.
ಜೊತೆಗೆ ನಕ್ಷೆ ಪಡೆದು ನಿಯಮ ಉಲ್ಲಂಘಿಸಿರುವ ಕಟ್ಟಡಗಳ ಸಮೀಕ್ಷೆಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು, ಈಗಾಗಲೇ ಗುರುತಿಸಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ನಕ್ಷೆ ಇಲ್ಲದ ಕಟ್ಟಡಗಳ ಸರ್ವೆ ಕಾರ್ಯವನ್ನೂ ಸಹ ಪೂರ್ಣಗೊಳಿಸಿ ಒಟ್ಟಾರೆ ಅನಧಿಕೃತ ಕಟ್ಟಡಗಳ ತೆರವು ಕುರಿತು ಕ್ರಮ ಕೈಗೊಂಡಿರುವ ಬಗ್ಗೆ ಡಿ.9 ರೊಳಗೆ ವರದಿ ನೀಡಬೇಕು ಎಂದು ಹೈಕೋರ್ಟ್ ತಾಕೀತು ಮಾಡಿತು.
4 ಸಾವಿರ ಕಟ್ಟಡಗಳ ನಕ್ಷೆ ಉಲ್ಲಂಘನೆ: ವಿಚಾರಣೆ ವೇಳೆ ಬಿಬಿಎಂಪಿ ಪರ ಹಿರಿಯ ವಕೀಲ ನಂಜುಂಡ ರೆಡ್ಡಿ, ಎರಡು ಬಗೆಯ ಅನಧಿಕೃತ ಕಟ್ಟಡಗಳಿವೆ, ಒಂದು ಪಾಲಿಕೆಯಿಂದ ನಕ್ಷೆ ಪಡೆದು ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡಿರುವವರು, ಮತ್ತೂಂದು ಪಾಲಿಕೆಯಿಂದ ನಕ್ಷೆ ಅನುಮೋದನೆ ಪಡೆಯದ ಕಟ್ಟಡಗಳು.
ಇದನ್ನೂ ಓದಿ:- ಎನ್‌ಇಪಿ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಪ್ರಮುಖ
ಕೋರ್ಟ್ ಆದೇಶದಂತೆ ಅವುಗಳನ್ನು ಗುರುತಿಸುವ ಕಾರ್ಯ ನಡೆದಿದೆ ಎಂದು ಮಾಹಿತಿ ನೀಡಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ 2020ರ ನಂತರ ನಿರ್ಮಾಣವಾದ 5,905 ಕಟ್ಟಡ ಸರ್ವೆ ಮಾಡಲಾಗಿದೆ, ಅವುಗಳಲ್ಲಿ 4,279 ಕಟ್ಟಡಗಳು ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗಿವೆ. ಈ ಕಟ್ಟಡಗಳಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಇನ್ನೂ 2,591 ಕಟ್ಟಡಗಳ ಸರ್ವೆ ಬಾಕಿಯಿದೆ. ನಕ್ಷೆಯಿಲ್ಲದೇ ನಿರ್ಮಾಣವಾದ ಕಟ್ಟಡಗಳ ಸರ್ವೆ ಆರಂಭವಾಗಿಲ್ಲ. ಆದಷ್ಟು ಶೀಘ್ರ ಸಮಿಕ್ಷೆ ನಡೆಸಲಾಗುವುದು, ಇದಕ್ಕೆ ಅಕ್ರಮ ಸಕ್ರಮ ಕಾಯ್ದೆ ಸುಪ್ರೀಂಕೋರ್ಟ್ ನಲ್ಲಿ ಬಾಕಿ ಇರುವುದು ಅಡ್ಡಿಯಾಗಿದೆ ಎಂದು ವಿವರಿಸಿದರು.
- ಸಾರ್ವಜನಿಕ ಪ್ರದೇಶಗಳಲ್ಲಿನ ಅಕ್ರಮ ಕಟ್ಟಡ ತೆರವು ಗೊಳಿಸಲೇಬೇಕು.
- ತೆರವುಗೊಳಿಸಿದ ಅಕ್ರಮ ಕಟ್ಟಡಗಳ ಫೋಟೋ ಸಹಿತ ವರದಿ ಸಲ್ಲಿಸಬೇಕು.
- ಅನಧಿಕೃತ ಕಟ್ಟಡಗಳ ತೆರವು ಕುರಿತು ಕ್ರಮ ಕೈಗೊಂಡಿರುವ ಬಗ್ಗೆ ಡಿ.9ರೊಳಗೆ ವರದಿ ನೀಡಬೇಕು.
ಬಿಬಿಎಂಪಿ ಮುಖ್ಯ ಆಯುಕ್ತರಿಗೆ ತರಾಟೆ
ಬೆಳಗ್ಗೆ ಅರ್ಜಿ ವಿಚಾರಣೆಗೆ ಬಂದಾಗ ಪಾಲಿಕೆ ಮುಖ್ಯ ಆಯುಕ್ತರು ಅವರ ವಕೀಲರ ಕಚೇರಿಯಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದಕ್ಕೆ ತೀವ್ರ ಅಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ. ಖುದ್ದು ಕೋರ್ಟ್‌ಗೆ ಹಾಜರಾಗಲು ಸೂಚಿಸಲಾಗಿತ್ತು.
ಹೀಗಿರುವಾಗ ವಕೀಲರ ಕಚೇರಿಯಿಂದ ವಿಚಾರಣೆಗೆ ಹಾಜರಾಗಲು ಅನುಮತಿ ಕೊಟ್ಟವರು ಯಾರು? ಇದನ್ನು ಒಪ್ಪಲು ಆಗುವುದಿಲ್ಲ. ಮಧ್ಯಾಹ್ನ ಕೋರ್ಟ್‌ಗೆ ಹಾಜರಾಗುವಂತೆ ತಾಕೀತು ಮಾಡಿತು. ಅದರಂತೆ 2.30ಕ್ಕೆ ಮುಖ್ಯ ಆಯುಕ್ತರು ವಿಚಾರಣೆಗೆ ಖುದ್ದು ಹಾಜರಾಗಿದ್ದರು.
ವಿಚಾರಣೆ ಬಳಿಕ ಮುಂದಿನ ವಿಚಾರಣೆಗೆ ಖುದ್ದು ಹಾಜರಿಯಿಂದ ಮುಖ್ಯ ಆಯುಕ್ತರಿಗೆ ವಿನಾಯತಿ ನೀಡಬೇಕು ಎಂದು ಮನವಿ ಮಾಡಿಕೊಂಡರು. ಇದನ್ನು ನಿರಾಕರಿಸಿದ ನ್ಯಾಯಪೀಠ, ಆದೇಶ ಪಾಲನೆ ಮಾಡಿ ತೋರಿಸಿದ ಬಳಿಕವಷ್ಟೇ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಲಾಗುವುದು ಎಂದು ಹೇಳಿತು.