Advertisement
ರಸ್ತೆ ಬದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಸಾರಿಗೆ ತಡೆ ಉಂಟಾಗುವ ರೀತಿಯಲ್ಲಿ ಹಾಗೂ ಅನಧಿಕೃತವಾಗಿ ಸ್ಥಾಪಿಸಿರುವ ಜಾಹೀರಾತು ಫಲಕ ಗಳನ್ನು, ಹೋರ್ಡಿಂಗ್, ಫ್ಲೆಕ್ಸ್‌ಗಳನ್ನು ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಎ.ಶ್ರೀನಿವಾಸ್ ನೇತೃತ್ವದಲ್ಲಿ ಹಳೆಯ ಪ್ರಸ್ ಕ್ಲಬ್ ಜಂಕ್ಷನ್‌ನಲ್ಲಿ ತೆರವುಗೊಳಿಸಲು ಚಾಲನೆ ನೀಡಿದರು. ಜಿಲ್ಲೆಯ ಎಲ್ಲೆಡೆ ಏಕ ಸಮಯದಲ್ಲಿ ಜಾಹೀರಾತು ಫಲಕ ತೆರವುಗೊಳಿಸುವ ಕಾರ್ಯ ಆರಂಭಿಸಲಾಗಿದೆ. ಪೊಲೀಸರು, ಲೋಕೋಪಯೋಗಿ ಮೊದಲಾದ ಇಲಾಖೆಗಳು ಪ್ರಕ್ರಿಯೆ ಆರಂಭಿಸಿವೆ.ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳಿಗೆ ಈ ಮೊದಲು ಆದೇಶ ನೀಡಲಾಗಿತ್ತು. ಜಿಲ್ಲಾಯೋಜನಾ ಸಮಿತಿ ಸಭೆ ಹಾಗೂ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಗಳಲ್ಲೂ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದರು. ಜಾಹೀರಾತು ಫಲಕಗಳನ್ನು ಸ್ಥಾಪಿಸಿದವರಿಗೆ ಈ ಮೊದಲು ತೆರವುಗೊಳಿಸುವಂತೆ ಸೂಚನೆ ನೀಡಲಾಗಿತ್ತು. ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ವೆಚ್ಚವನ್ನು ಆಯಾಯ ಸಂಸ್ಥೆಗಳಿಂದ ವಸೂಲು ಮಾಡಲಾಗುವುದು. ಆರಾಧನಾಲಯಗಳು ಸ್ಥಾಪಿಸಿರುವ ಫಲಕಗಳನ್ನು 24 ಗಂಟೆಗಳೊಳಗೆ ತೆರವುಗೊಳಿಸಬೇಕು ಇಲ್ಲದಿದ್ದಲ್ಲಿ ಜಿಲ್ಲಾಡಳಿತ ತೆರವುಗೊಳಿಸಲಿದೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಎಡಿಎಂ ದೇವಿದಾಸ್, ಕಾಂಞಂಗಾಡ್ ಸಬ್ ಕಲೆಕ್ಟರ್ ಅರುಣ್ ಕೆ.ವಿಜಯನ್, ಡೆಪ್ಯೂಟಿ ಕಲೆಕ್ಟರ್‌ಗಳಾದ ಕೆ.ರವಿ ಕುಮಾರ್,ಮಚಂದ್ರನ್, ವಿಹಾಗೂ ಅಧಿಕಾರಿಗಳು ಜಾಹೀರಾತು ಫಲಕ ತೆರವುಗೊಳಿಸಲು ನೇತೃತ್ವ ನೀಡಿದ್ದಾರೆ. ಇದೇ ವೇಳೆ ರಸ್ತೆ ಬದಿಯ ಬೋರ್ಡ್‌ಗಳು ಮತ್ತು ಅನಧಿಕೃತ ಜಾಹೀರಾತು ಫಲಕ ಗಳನ್ನು ತೆರವುಗೊಳಿಸುವ ಕ್ರಮಕ್ಕೆ ಕೆಲವು ಸ್ಥಳೀಯಾಡಳಿತ ಸಂಸ್ಥೆಗಳು ಈಗಾಗಲೇ ಚಾಲನೆ ನೀಡಿವೆ. ಈ ಕಾರ್ಯಾಚರಣೆಯನ್ನು ಅ.30 ರೊಳಗಾಗಿ ಪೂರ್ತಿಗೊಳಿಸಲಾಗುವುದು ಎಂದು ರಾಜ್ಯ ಸರಕಾರದ ಪರ ಸ್ಟೇಟ್ ಅಟರ್ನಿ ಜನರಲ್ ಕೆ.ವಿ.ಸೋಹನ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಆದೇಶವನ್ನು ಪಾಲಿಸುವಲ್ಲಿ ವಿಳಂಬ ನೀತಿ ಅನುಸರಿಸಿದಲ್ಲಿ ಅದರಿಂದ ಸರಕಾರಕ್ಕೆ ಉಂಟಾಗುವ ನಷ್ಟ ಹಾಗೂ ಅಂತಹ ಜಾಹೀರಾತು ಮತ್ತಿತರ ಬೋರ್ಡ್ ಗಳನ್ನು ತೆರವುಗೊಳಿಸಲು ತಗಲುವ ಸಂಪೂರ್ಣ ವೆಚ್ಚ ವನ್ನು ಸಂಬಂಧಪಟ್ಟಡಳಿತ ಸಂಸ್ಥೆಗಳ ಕಾರ್ಯದರ್ಶಿಯವರಿಂದ ವಸೂಲು ಮಾಡಬೇಕೆಂದು ಉತ್ಛ ನ್ಯಾಯಾಲಯವು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ.ರಸ್ತೆ ಬದಿಯ ಬೋರ್ಡ್‌ಗಳು ಮತ್ತು ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕಾಗಿರುವುದು ಆಯಾ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಯವರ ಹೊಣೆಗಾರಿಕೆಯಾಗಿದೆ. ಅದನ್ನು ಅವರು ಸಮರ್ಪಕವಾದ ರೀತಿಯಲ್ಲಿ ನಿರ್ವಹಿಸಬೇಕೆಂದು ನ್ಯಾಯಾಲಯವು ಮನದಟ್ಟು ಮಾಡಿದೆ. ಅ.30ರೊಳಗೆ ತೆರವು
ಅ.30 ರ ಮುಂಚಿತವಾಗಿ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವು ಗೊಳಿಸಬೇಕೆಂದು ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಐದು ದಿನಗಳೊಳಗಾಗಿ ಜಿಲ್ಲೆಯ ಎಲ್ಲೆಡೆ ಸ್ಥಾಪಿಸಲಾಗಿರುವ ಜಾಹೀರಾತು ಸಹಿತ ಎಲ್ಲಾ ಫಲಕಗಳನ್ನು ತೆರವುಗೊಳಿಸಲಾಗುವುದು
ಡಾ| ಸಜಿತ್‌ಬಾಬು,ಜಿಲ್ಲಾಧಿಕಾರಿ