Advertisement

ಜಿಲ್ಲಾದ್ಯಂತ ಅಘೋಷಿತ ಬಂದ್‌ ವಾತಾವರಣ

08:53 PM Mar 14, 2020 | Lakshmi GovindaRaj |

ಕೊರೊನಾ ತಡೆಗೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿರುವಂತೆಯೇ ಜಿಲ್ಲಾದ್ಯಂತ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿದೆ. ಬಸ್‌, ಆಟೋಗಳಲ್ಲೂ ಜನ ಸಂಚಾರ ವಿರಳವಾಗಿತ್ತು. ಪ್ರಮುಖ ಪ್ರವಾಸಿ ಕೇಂದ್ರಗಳಾದ ದೇವರಾಯನ ದುರ್ಗ, ನಾಮದ ಚಿಲುಮೆಯಲ್ಲೂ ಶನಿವಾರ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು…

Advertisement

ತುಮಕೂರು: ಸರ್ಕಾರದ ಕಟ್ಟುನಿಟ್ಟಿನ ಸೂಚನೆಯಂತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಕಟ್ಟುನಿಟ್ಟಿನ ಆದೇಶ ಹೊರಡಿಸಿ ಶಾಲಾ-ಕಾಲೇಜು, ಸಿನಿಮಾ ಮಂದಿರ, ಮಾಲ್‌ ಮುಚ್ಚಿಸಿದ್ದು, ಜಿಲ್ಲಾದ್ಯಂತ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿತ್ತು.

ರೈಲ್ವೇ ನಿಲ್ದಾಣದಲ್ಲಿ, ಬಸ್‌ಗಳಲ್ಲಿ, ಆಟೋಗಳಲ್ಲಿ ಪ್ರಯಾಣಿಕರ ಸಂಚಾರ ಇಳಿಮುಖವಾಗಿತ್ತು. ಅಲ್ಲದೇ ಜನ ಗಿಜಿಗುಡುತ್ತಿದ್ದ ರಸ್ತೆಗಳಲ್ಲಿ ಜನಸಂಚಾರ ಕಡಿಮೆಯಾಗಿತ್ತು. ನಗರದಲ್ಲಿ ಸಸ್ಯಹಾರಿ, ಮಾಂಸಹಾರಿ ಹೋಟೆಲ್‌ಗ‌ಳು, ಪ್ರಾವ್ಹಿಜನ್‌ ಸ್ಟೋರ್‌, ಮಧ್ಯದ ಅಂಗಡಿಗಳು ತೆರೆದಿದ್ದರೂ ವ್ಯಾಪಾರ-ವಹಿವಾಟಿಲ್ಲದೇ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಯಿತು.

ಸಿದ್ಧಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳನ್ನು ಊರಿಗೆ ಕರೆದೊಯ್ಯಲು ಪೋಷಕರು ಮಠಕ್ಕೆ ಆಗಮಿಸುತ್ತಿದ್ದದ್ದು ಕಂಡುಬಂತು. ಊರುಗಳತ್ತ ತೆರಳಲು ಲಗೇಜ್‌ ಸಮೇತ ರೈಲ್ವೇ ನಿಲ್ದಾಣದ ಕಡೆ ಹೊರಡುತ್ತಿದ್ದರು. ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳು ಊರುಗಳತ್ತ ಮುಖ ಮಾಡಿದರು. ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಾದ ದೇವರಾಯನದುರ್ಗ, ನಾಮದ ಚಿಲುಮೆಯಲ್ಲಿ ಪ್ರವಾಸಿಗರು ಸಂಖ್ಯೆ ಕಡಿಮೆಯಾಗಿತ್ತು.

ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಗೊರವನಹಳ್ಳಿ ಮಹಾಲಕ್ಷ್ಮೀ, ಎಡೆಯೂರು ಸಿದ್ದಲಿಂಗೇಶ್ವರ ದೇವಾಲಯಗಳಲ್ಲೂ ಭಕ್ತರ ಸಂಖ್ಯೆ ಅಷ್ಟಿರಲಿಲ್ಲ. ಜಿಲ್ಲೆಯ ಎಲ್ಲಾ ಕಡೆ ವೈರಸ್‌ ಬಗ್ಗೆ ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಜಿಲ್ಲಾಸ್ಪತ್ರೆ, ನಗರದ ಖಾಸಗಿ ಆಸ್ಪತ್ರೆ, ತಾಲೂಕು ಕೇಂದ್ರಗಳಲ್ಲಿ ವಿಶೇಷ ವಾರ್ಡ್‌ ತೆರೆಯಲಾಗಿದೆ. ವದಂತಿಗಳಿಗೆ ಕಿವಿಗೊಡದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮನವಿ ಮಾಡಿದೆ.

Advertisement

ಒಂದು ವಾರ ನಿರ್ಬಂಧ: ವೈರಸ್‌ ತಡೆಯುವ ಸಂಬಂಧ ತುಮಕೂರು ಮಹಾನಗರ ಪಾಲಿಕೆ ಮಾ.14ರ ಮಧ್ಯರಾತ್ರಿಯಿಂದ ಒಂದು ವಾರ ನಗರದಲ್ಲಿ ಜನರು ಸೇರುವ ಕಾರ್ಯಕ್ರಮ, ಇನ್ನಿತರ ಪ್ರದೇಶಗಳಿಗೆ ನಿರ್ಬಂಧ ಏರಿ ಆಯುಕ್ತ ಟಿ. ಭೂಬಾಲನ್‌ ಆದೇಶ ಹೊರಡಿಸಿದ್ದಾರೆ.

ಸಿನಿಮಾ ಮಂದಿರ, ಮಾಲ್‌ಗ‌ಳು, ನಾಟಕಗಳು, ರಂಗಮಂದಿರಗಳು, ಪಬ್‌ಗಳು, ನೈಟ್‌ಕ್ಲಬ್‌ಗಳು, ವಸ್ತು ಪ್ರದರ್ಶನಗಳು, ಕಲ್ಯಾಣ ಮಂಟಪಗಳು, ಸಮುದಾಯಗಳು ಹಾಗೂ ಹೆಚ್ಚು ಜನ ಸೇರುವ ಕಾರ್ಯಕ್ರಮ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪಾಲಿಕೆ ಪೂರ್ವಾನುಮತಿ ಪಡೆಯದೆ ಯಾವುದೇ ಬೇಸಿಗೆ ಶಿಬಿರ, ಸಾರ್ವಜನಿಕ ಸಭೆ, ಸಮಾರಂಭಗಳು ಹಾಗೂ ಇತರೆ ಕಾರ್ಯಕ್ರಮ ನಡೆಸುವಂತಿಲ್ಲ.

ಹೆಚ್ಚು ಜನ ಬಳಸುವ ಜಿಮ್‌ ಸೆಂಟರ್‌, ಪಿ.ಜಿ.ಗಳು, ಕೋಚಿಂಗ್‌ ಕ್ಲಾಸ್‌ಗಳು, ಈಜು ಕೊಳ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಹೋಟೆಲ್‌ಗ‌ಳ ಪಾರ್ಟಿಹಾಲ್‌ಗ‌ಳಲ್ಲಿ ನಡೆಯುವ ಸಭೆ-ಸಮಾರಂಭಗಳಿಗೂ ಅವಕಾಶವಿಲ್ಲ. ಹ್ಯಾಂಡ್‌ವಾಶ್‌, ಹ್ಯಾಂಡ್‌ ಸ್ಯಾನಿಟೇಜರ್‌ ಸಾರ್ವಜನಿಕ ಸ್ಥಳಗಳಲ್ಲಿ ಬಳಸಬೇಕು ಎಂದು ತಿಳಿಸಿದ್ದಾರೆ.

ಕೊರೊನಾ ವೈರಸ್‌ ಎಲ್ಲೆಡೆ ಹರಡುತ್ತಿರುವ ಹಿನ್ನೆಲೆಯಲ್ಲಿ ಬೀದಿಬದಿಯಲ್ಲಿ ಕತ್ತರಿಸಿದ ಹಣ್ಣುಗಳ ಮಾರಾಟ ಮಾಡುವವರು, ಮಾಂಸಹಾರಿ ಖಾದ್ಯ ತಯಾರಕರು, ತೆರೆದ ಸ್ಥಳಗಳಲ್ಲಿ ಆಹಾರ ತಯಾರಿಸಿ ಮಾರಾಟ ಮಾಡುವವರು ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು. ನಾಗರಿಕರು ರಸ್ತೆಬದಿ ತೆರೆದಿಟ್ಟ ಆಹಾರ ಸೇವಿಸಬಾರದು. ಸ್ವಚ್ಛತೆ ಕಾಪಾಡಬೇಕು.
-ಟಿ.ಭೂಬಾಲನ್‌, ಮಹಾನಗರ ಪಾಲಿಕೆ ಆಯುಕ್ತ

* ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next