Advertisement

132 ಸ್ಥಾಯಿ ಸಮಿತಿ ಸದಸ್ಯರ ಅವಿರೋಧ ಆಯ್ಕೆ

11:17 AM Nov 11, 2017 | Team Udayavani |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 12 ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಶುಕ್ರವಾರ ನಡೆದ ಚುನಾವಣಾ ಸಭೆ ಸುಸೂತ್ರವಾಗಿ ನಡೆದಿದ್ದು, ಯಾವುದೇ ಗೊಂದಲಗಳಿಲ್ಲದೆ 132 ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.

Advertisement

ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯ ಕೆಂಪೇಗೌಡ ಸಭಾಂಗಣದಲ್ಲಿ ಚುನಾವಣಾ ಸಭೆ ನಡೆಸಿದ ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಅವರು, ಎಲ್ಲ 12 ಸ್ಥಾಯಿ ಸಮಿತಿಗಳಿಗೆ ತಲಾ 11 ಸದಸ್ಯರಂತೆ ಒಟ್ಟು 132 ಪಾಲಿಕೆ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಸದಸ್ಯರ ಅಧಿಕಾರವಧಿಯು 2017ರ ನ.10 ರಿಂದ 2018ರ ನವೆಂಬರ್‌ 9ರವರೆಗೆ ಇರಲಿದೆ ಎಂದು ಘೋಷಿಸಿದರು.

ಗುರುವಾರ ಸ್ಥಾಯಿ ಸಮಿತಿಗಳ 132 ಸದಸ್ಯ ಸ್ಥಾನಗಳಿಗೆ ಒಟ್ಟು 137 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಆ ಹಿನ್ನೆಲೆಯಲ್ಲಿ ಚುನಾವಣೆಯ ನಡೆಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಹೆಚ್ಚುವರಿಯಾಗಿ ನಾಮಪತ್ರ ಸಲ್ಲಿಸಿದ್ದ ಸದಸ್ಯರು ಕಣದಿಂದ ಹಿಂದೆ ಸರಿದ ಕಾರಣ ವಿರೋಧ ಆಯ್ಕೆ ಸಾಧ್ಯವಾಯಿತು.

ನಗರ ಯೋಜನೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ಪ್ರಕ್ರಿಯೆ ವೇಳೆ ನಾಮಪತ್ರಗಳನ್ನು ವಾಪಸ್‌ ಪಡೆಯಲು ಪ್ರಾದೇಶಿಕ ಆಯುಕ್ತರು 2 ನಿಮಿಷ ಕಾಲಾವಕಾಶ ನೀಡಿದಾಗ ಕಾಂಗ್ರೆಸ್‌ನ ಶಿಲ್ಪ ಅಭಿಲಾಶ್‌ ಹಾಗೂ ಜಿ.ಬಾಲಕೃಷ್ಣ ತಮ್ಮ ನಾಮಪತ್ರಗಳನ್ನು ವಾಪಸ್‌ ಪಡೆದರು. ನಂತರ ವಾರ್ಡ್‌ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಚುನಾವಣೆ ಪಕ್ರಿಯೆ ವೇಳೆ ವೇಲುನಾಯ್ಕರ್‌ ತಮ್ಮ ನಾಮಪತ್ರ ವಾಪಸ್‌ ಪಡೆದುಕೊಂಡರು. 

ಇದರೊಂದಿಗೆ ಸಿಬ್ಬಂದಿ ಮತ್ತು ಆಡಳಿತ ಸ್ಥಾಯಿ ಸಮಿತಿಗೆ ಪಕ್ಷೇತರ ಸದಸ್ಯ ಲಕ್ಷ್ಮೀನಾರಾಯಣ್‌ ಸಲ್ಲಿಸಿದ್ದ ಎರಡು ನಾಮಪತ್ರದ ಪೈಕಿ ಒಂದನ್ನು ಹಾಗೂ ಈಗಾಗಲೇ ಶಿಕ್ಷಣ ಸ್ಥಾಯಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದ ಆನಂದ್‌ ಕುಮಾರ್‌ ಅವರ ನಾಮಪತ್ರ ಪ್ರಾದೇಶಿಕ ಆಯುಕ್ತರು ರದ್ದುಪಡಿಸಿದರು. 

Advertisement

ಕಣ್ಣೀರಿಟ್ಟ ಪಕ್ಷೇತರ ಸದಸ್ಯ: ಮಾರತಹಳ್ಳಿ ವಾರ್ಡ್‌ನ ಪಕ್ಷೇತರ ಪಾಲಿಕೆ ಸದಸ್ಯ ಎನ್‌.ರಮೇಶ್‌ ತಮಗೆ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ಕಾಂಗ್ರೆಸ್‌ ನಿರ್ಣಯಕ್ಕೆ ಬೇಸರ ವ್ಯಕ್ತಪಡಿಸಿ ತಮ್ಮ ನಾಮಪತ್ರವನ್ನು ಹಿಂಪಡೆಯಲು ಮುಂದಾದರು. ಈ ವೇಳೆ ಕಾಂಗ್ರೆಸ್‌ ಸದಸ್ಯರು ರಮೇಶ್‌ ಅವರನ್ನು ಸಮಾಧಾನಪಡಿಸಿ ನಾಮಪತ್ರ ಹಿಂಪಡೆಯದಂತೆ ತಡೆದ ಹಿನ್ನೆಲೆಯಲ್ಲಿ ಕಣ್ಣೀರಿಟ್ಟ ದೃಶ್ಯ ಕಂಡುಬಂತು.

ತಡವಾಗಿ ಆರಂಭವಾದ ಸಭೆ: ಕೌನ್ಸಿಲ್‌ ಸಭಾಂಗಣದೊಳಗೆ ಸದಸ್ಯರು ಬರುವುದು ತಡವಾದ ಹಿನ್ನೆಲೆಯಲ್ಲಿ ಬೆಳಗ್ಗೆ 11.30ಕ್ಕೆ ಆರಂಭವಾಗಬೇಕಿದ್ದ ಚುನಾವಣಾ ಸಭೆ 15 ನಿಮಿಷಗಳು ತಡವಾಗಿ ಆರಂಭವಾಯಿತು. 11.45 ರಿಂದ ಸದಸ್ಯರ ಹಾರಾಜತಿ ಪಡೆದು ಮಧ್ಯಾಹ್ನ 12 ಗಂಟೆಯಿಂದ ಚುನಾವಣೆ ಪ್ರಕ್ರಿಯೆ ಆರಂಭಿಸಲಾಯಿತು.

ಪ್ರಾದೇಶಿಕ ಆಯುಕ್ತರು ಕಾನೂನು ಬಾಹಿರವಾಗಿ ಸ್ಥಾಯಿ ಸಮಿತಿ ಚುನಾವಣೆ ನಡೆಸಿದ್ದು, ಸ್ಥಾಯಿ ಸಮಿತಿ ಅಧಿಕಾರವಧಿಗೆ ಸಂಬಂಧಿಸಿ ಲಿಖೀತ ಉತ್ತರ ಕೋರಲಾಗಿದೆ. ಆದರೆ, ಈವರೆಗೆ ಉತ್ತರ ನೀಡಿಲ್ಲ. ಹೀಗಾಗಿ ಕೊನೆಯ ವರ್ಷದ ಸ್ಥಾಯಿ ಸಮಿತಿಗಳ ಅಧಿಕಾರ ಅವಧಿ ಕಡಿತಗೊಳ್ಳಲಿದ್ದು, ಈ ಕುರಿತು ನ್ಯಾಯಾಲಯದ ಮೊರೆ ಹೋಗಲಾಗುವುದು.
-ಪದ್ಮನಾಭ ರೆಡ್ಡಿ, ಬಿಬಿಎಂಪಿ ಪ್ರತಿಪಕ್ಷ ನಾಯಕ

ಗೊಂದಲದಲ್ಲಿ ವೇಲು ನಾಯ್ಕರ್‌ ಮತ್ತು ಶಿಲ್ಪ ಅಭಿಲಾಶ್‌ ಅವರು ಸ್ಥಾಯಿ ಸಮಿತಿಗಳಿಗೆ ಹೆಚ್ಚುವರಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದರೆ, ಕಾಂಗ್ರೆಸ್‌ ಸದಸ್ಯರು ಯಾರೂ ಬಂಡಾಯ ವ್ಯಕ್ತಪಡಿಸಿಲ್ಲ.
-ರಾಮಲಿಂಗಾ ರೆಡ್ಡಿ, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next