ಢಾಕಾ: ಶೇಖ್ ಹಸೀನಾ ಅವರು ಕಳೆದ ವಾರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ಮತ್ತು ನಂತರ ನಡೆದ ಪ್ರತಿಭಟನೆಗಳ ವೇಳೆ ನಡೆದ ಹತ್ಯೆಗಳ ಬಗ್ಗೆ ತನಿಖೆ ನಡೆಸಲು ವಿಶ್ವಸಂಸ್ಥೆಯ ತಜ್ಞರ ತಂಡವು ಮುಂದಿನ ವಾರ ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದೆ ಎಂದು ಗುರುವಾರ(ಆಗಸ್ಟ್15) ಪ್ರಕಟಿಸಲಾಗಿದೆ.
1971 ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ಬಾಂಗ್ಲಾದೇಶದಲ್ಲಿ ವ್ಯಾಪಕವಾದ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ತನಿಖೆ ನಡೆಸಲು ವಿಶ್ವಸಂಸ್ಥೆಯು ಬಾಂಗ್ಲಾದೇಶಕ್ಕೆ ಸತ್ಯಶೋಧನಾ ಕಾರ್ಯಾಚರಣೆ ತಂಡ ಕಳುಹಿಸುತ್ತಿರುವುದು ಇದೇ ಮೊದಲು ಎಂದು ಯುಎನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಜುಲೈ ಮತ್ತು ಈ ತಿಂಗಳ ಆರಂಭದಲ್ಲಿ ನಡೆದ ವಿದ್ಯಾರ್ಥಿ ಕ್ರಾಂತಿಯ ಸಂದರ್ಭದಲ್ಲಿ ನಡೆದ ದೌರ್ಜನ್ಯಗಳ ತನಿಖೆಗಾಗಿ ವಿಶ್ವಸಂಸ್ಥೆಯು ಮುಂದಿನ ವಾರ ವಿಶ್ವಸಂಸ್ಥೆಯ ಸತ್ಯಶೋಧನಾ ತಂಡವನ್ನು ಕಳುಹಿಸುತ್ತಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ವೋಲ್ಕರ್ ಟರ್ಕ್ ಅವರು ಮುಖ್ಯ ಸಲಹೆಗಾರ ಪ್ರೊಫೆಸರ್ ಮುಹಮ್ಮದ್ ಯೂನಸ್ ಅವರಿಗೆ ಬುಧವಾರ ತಡರಾತ್ರಿ ಕರೆ ಮಾಡಿದಾಗ ಈ ಕ್ರಮವನ್ನು ಘೋಷಿಸಿದ್ದಾರೆ” ಎಂದು ಆಗಸ್ಟ್ 8 ರಂದು ಬಾಂಗ್ಲಾದೇಶ ಮಧ್ಯಾಂತರ ಸರಕಾರದ ಸಲಹೆಗಾರರಾಗಿ ಪ್ರಮಾಣ ವಚನ ಸ್ವೀಕರಿಸಿದ ಮುಹಮ್ಮದ್ ಯೂನಸ್ ಅವರು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಹಸೀನಾ ನಿರ್ಗಮನದ ನಂತರ ಬಾಂಗ್ಲಾದೇಶ ತೀವ್ರ ಅತಂತ್ರ ಸ್ಥಿತಿ ಎದುರಿಸುತ್ತಿದ್ದು, ಸರ್ಕಾರಿ ವಿರೋಧಿ ಪ್ರತಿಭಟನೆಗಳು 500 ಕ್ಕೂ ಹೆಚ್ಚು ಜನರನ್ನು ಬಳಿ ಪಡೆದಿವೆ. ಏತನ್ಮಧ್ಯೆ, ವೋಲ್ಕರ್ ಟರ್ಕ್ ತನ್ನ ಬೆಂಬಲದ ಭರವಸೆ ನೀಡಿ ‘ಅಂತರ್ಗತ, ಮಾನವ ಹಕ್ಕು-ಕೇಂದ್ರಿತ ವಿಧಾನವು ಪರಿವರ್ತನೆ ಯಶಸ್ವಿಯಾಗುವುದನ್ನು ಖಚಿತಪಡಿಸುತ್ತದೆ’ ಎಂದು ಹೇಳಿದ್ದಾರೆ.