Advertisement
ಆತಂಕಕಾರಿ ಬೆಳವಣಿಗೆಯಲ್ಲಿ ಕಳೆದ 2 ವಾರಗಳ ಒಳಗೆ 2,50,00 ಮಂದಿ ನಿರಾಶ್ರಿತ ರೊಹಿಂಗ್ಯಾಗಳು ಬಾಂಗ್ಲಾಕ್ಕೆ ಪಲಾಯನಗೈದಿದ್ದು, ಉಭಯ ದೇಶಗಳ ನಡುವಿನ ನಾಫ್ ನದಿ ದಾಟುವ ವೇಳೆಯಲ್ಲಿ ಹಲವರು ದೋಣಿಗಳು ಮಗುಚಿ ಪ್ರಾಣ ಕಳೆದುಕೊಂಡಿರುವುದಾಗಿ ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ.
Related Articles
Advertisement
ತಯೇಬಾ ಎಂಬ ಸಂತ್ರಸ್ತೆ ಮಾದ್ಯಮಗಳೊಂದಿಗೆ ಮಾತನಾಡಿ ‘ನಾನು ಮತ್ತು ನನ್ನ ಕಟುಂಬ ರಖೈನ್‌ನಿಂದ ತಪ್ಪಿಸಿಕೊಂಡು ಬಂದಿದ್ದು, ಕಳೆದ ನಾಲ್ಕು ದಿನಗಳಿಂದ ಅನ್ನಾಹಾರವಿಲ್ಲದೆ ನದಿ ದಾಟಲು ಕಾಯಬೇಕಾಯಿತು.ಜನರು ಸಿಕ್ಕ ಸಿಕ್ಕ ದೋಣಿಗಳಲ್ಲಿ ಭಾರೀ ಸಂಖ್ಯೆಯಲ್ಲಿ ತುಂಬಿಕೊಂಡು ಬಾಂಗ್ಲಾಕ್ಕೆ ಪಲಾಯನ ಗೈಯುತ್ತಿದ್ದಾರೆ. ನಮ್ಮ ಕಣ್ಣೆದುರೆ 2 ದೋಣಿಗಳು ಮುಳುಗಿ ಹಲವು ಮುಗ್ಧ ಮಕ್ಕಳು ಪ್ರಾಣ ಕಳೆದುಕೊಂಡರು’ ಎಂದು ಭಯಾನಕತೆಯನ್ನು ವಿವರಿಸಿದರು.
ಬಾಂಗ್ಲಾಕ್ಕೆ ಬಂದಿರುವ ಹಲವರು ಮ್ಯಾನ್ಮಾರ್ ಸೇನೆಯ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದು , ‘ಸೈನಿಕರು ನಮ್ಮ ಮೇಲೆ ಅತ್ಯಾಚಾರ ನಡೆಸಿದ್ದು, ಚಿತ್ರಹಿಂಸೆ ನೀಡಿ ಹಲವರನ್ನು ಕೊಂದಿದ್ದಾರೆ’ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ಬಾಂಗ್ಲಾಕ್ಕೆ ಬಂದಿರುವ ಸಂತ್ರಸ್ತರಿಗೆ ಸರಿಯಾದ ಸೂರು ಸಿಗದೆ ಪರದಾಡುತ್ತಿದ್ದು ಮುಜೂರ್ ಮುಸ್ತಫಾ ಎಂಬ ಉದ್ಯಮಿ ಆಹಾರ ನೀಡಲು ಮುಂದೆ ಬಂದಿದ್ದು, ಇನ್ನಷ್ಟು ರೊಹಿಂಗ್ಯಾಗಳು ಬಂದರೆ ಊಟಕ್ಕೂ ಕಷ್ಟವಾಗುವ ಸಾಧ್ಯತೆಗಳಿದ್ದು ಪರಿಸ್ಥಿತಿ ಗಂಭೀರವಾಗಲಿದೆ ಎಂದು ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ಹಲವರು ಹಸಿವಿನಿಂದ ಸಾವನ್ನಪ್ಪುತಿದ್ದು, ಅಲ್ಲಿ ನೀಡುತ್ತಿರುವ ಆಹಾರ ಯಾರೊಬ್ಬರಿಗೂ ಸಾಲುತ್ತಿಲ್ಲ. ಹಲವರು ಕಾಯಿಲೆಗಳಿಗೆ ತುತ್ತಾಗುತ್ತಿದ್ದು ಚಿಕಿತ್ಸೆಯೂ ಲಭ್ಯವಾಗದೆ ಪರದಾಡುತ್ತಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಈ ಬಗ್ಗೆ ಬಾಂಗ್ಲಾದೇಶದ ವಿದೇಶಾಂಗ ಇಲಾಖೆ ಮ್ಯಾನ್ಮಾರ್‌ಗೆ ಸಮನ್ಸ್ ನೀಡಿದ್ದು ಹಿಂಸೆ ನಿಯಂತ್ರಣಕ್ಕೆ ತಂದು ಜನರು ನಮ್ಮ ದೇಶದತ್ತ ನುಸುಳುವುದನ್ನು ತಡೆಯಿರಿ ಎಂದು ಕೇಳಿಕೊಂಡಿದೆ.
ಇದೇ ವೇಳೆ ವಿಶ್ವಸಂಸ್ಥೆ , ಅಂತರಾಷ್ಟ್ರೀಯ ಮಾಧ್ಯಮಗಳು ಮತ್ತು ಎನ್‌ಜಿಓಗಳ ಆರೋಪಗಳನ್ನು ಮ್ಯಾನ್ಮಾರ್ ಸರ್ಕಾರ ತಳ್ಳಿ ಹಾಕಿದ್ದು, ‘ರಖೈನ್‌ನಲ್ಲಿ ಹಿಂಸೆಯಿಂದ ಸಂತ್ರಸ್ತರಾಗಿ 27 ಸಾವಿರ ಬೌದ್ಧರೂ ಪಲಾಯನ ಮಾಡಿದ್ದಾರೆ’ ಎಂದು ಹೇಳಿದೆ.
‘ಇದು ಉಗ್ರರು ಮಾಡಿರುವ ದುಷ್ಕೃತ್ಯ, ಅವರೇ ಬೆಂಕಿ ಹಚ್ಚಿಕೊಂಡು ಆರೋಪ ಮಾಡುತ್ತಿದ್ದು, ಅಗಸ್ಟ್ 25 ರ ನಂತರ 6,600 ರೊಹಿಂಗ್ಯಾ ಮುಸ್ಲಿಮರ ಮನೆಗಳು ಮತ್ತು ಮುಸ್ಲಿಮೇತರ 201 ಮನೆಗಳು ಬೆಂಕಿಗೆ ಆಹುತಿಯಾಗಿವೆ’ ಎಂದು ಹೇಳಿದೆ.
7 ಮಂದಿ ರೊಹಿಂಗ್ಯಾಗಳು,7 ಮಂದಿ ಹಿಂದುಗಳು ಮತ್ತು 16 ಮಂದಿ ಬೌದ್ಧರನ್ನು ಉಗ್ರರು ಹತ್ಯೆಗೈದಿರುವುದಾಗಿ ಮ್ಯಾನ್ಮಾರ್ ಸರ್ಕಾರ ವಿವರ ನೀಡಿದೆ.ಆದರೆ ಮ್ಯಾನ್ಮಾರ್ ಸೇನೆ ನೀಡಿದ ಪ್ರಕಾರ ಹಿಂಸಾಚಾರದಲ್ಲಿ ಸೈನಿಕರು,ಉಗ್ರರು ಸೇರಿದಂತೆ 2 ವಾರದ ಒಳಗೆ 430 ಜನರು ಸಾವನ್ನಪ್ಪಿದ್ದಾರೆ.