ಇಸ್ಲಾಮಾಬಾದ್: ಪಾಕಿಸ್ತಾನದ ಗುಜ್ರನ್ ವಾಲಾ ಕೋರ್ಟ್ 26/11 ರ ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ತಪ್ಪಿತಸ್ಥ ಎಂದು ಮಹತ್ವದ ತೀರ್ಪು ನೀಡಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಜುಲೈ 17ರಂದು ಪಾಕಿಸ್ಥಾನದ ಪೊಲೀಸರು ಹಫೀಜ್ ಸಯೀದ್ನನ್ನು ಬಂಧಿಸುವಲ್ಲಿ ಸಫಲರಾಗಿದ್ದರು. ಮುಂಬೈ ದಾಳಿ ಸೇರಿದಂತೆ ಇತರ ಕಡೆ ದಾಳಿ ನಡೆಸುವ ಭಯೋತ್ಪಾದಕರಿಗೆ ಹಣಕಾಸು ನೆರವು ಪೂರೈಸಿದ ಆರೋಪ ಈತನ ಮೇಲಿದೆ. ಹಫೀಜ್ನನ್ನು ಒಂದು ವಾರದ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಬಳಿಕ ಆತನ ಬಂಧನವನ್ನು 14 ದಿನಗಳಿಗೆ ವಿಸ್ತರಿಸಲಾಗಿತ್ತು.
ಪಾಕ್ ಕೋರ್ಟ್ ಉಗ್ರರಿಗೆ ಹಣಕಾಸಿನ ನೆರವು ಪೂರೈಸಿಸ ಹಿನ್ನಲೆಯಲ್ಲಿ ವಿಚಾರಣೆಯನ್ನು ತೀವ್ರಗೊಳಿಸಿತ್ತು. ಈ ಸಂಬಂಧ ಗುಜ್ರನ್ವಾಲಾ ಕೋರ್ಟ್ ಆಗಸ್ಟ್ 7ರ ಒಳಗೆ ಚಾರ್ಜ್ಶೀಟ್ ಸಲ್ಲಿಸುವಂತೆ ಕೌಂಟರ್ ಟೆರರಿಸಂ ಡಿಪಾರ್ಟ್ಮೆಂಟ್ (ಸಿಟಿಡಿ)ಗೆ ಸೂಚಿಸಿತ್ತು. ಈ ವೇಳೆ ಹಫೀಜ್ನ ಮೇಲಿನ ಆರೋಪ ಸಾಬೀತಾಗಿದೆ. ಹೆಚ್ಚಿನ ತನಿಖೆಗಾಗಿ ಈ ಪ್ರಕರಣವನ್ನು ಪಾಕಿಸ್ತಾನದಲ್ಲಿರುವ ಗುಜರಾತ್ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ಹೇಳಿವೆ.
ಆದರೆ ಕೆಲವು ಮೂಲಗಳ ಪ್ರಕಾರ ಪಾಕ್ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದೆ ಎಂದು ಹೇಳಲಾಗುತ್ತಿದೆ. ಉಗ್ರರಿಗೆ ಹಣಕಾಸು ನೆರವು ನೀಡುತ್ತಿದ್ದ ಆರೋಪದಡಿ ಬಂಧನಕ್ಕೊಳಗಾಗಿದ್ದ ಮುಂಬಯಿ ದಾಳಿಯ ರೂವಾರಿ ಹಫೀಜ್ ಸಯೀದ್ನನ್ನು ಪಾಕ್ ಬಿಡುಗಡೆಗೊಳಿಸಿದೆ. ಬಿಡುಗಡೆಯನ್ನು ಮರೆ ಮಾಚಲು ತಪ್ಪಿತಸ್ಥ ಎಂಬ ಹಣೆಪಟ್ಟಿಯನ್ನು ಕಟ್ಟಲಾಗಿದೆ ಎಂದು ಹೇಳಲಾಗುತ್ತಿದೆ.
370 ರದ್ದುಗೊಳಿಸಿದ್ದರ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಮಂಗಳವಾರವೇ ಅಹಿತಕರ ಘಟನೆಗಳು ಹೆಚ್ಚಲಿವೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ನೀಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಮುಂದಿನ ದಿನಗಳಲ್ಲಿ ಹಫೀಜ್ ತನ್ನ ಉಗ್ರ ಸಂಘಟನೆಯಿಂದ ಹಲವು ದಾಳಿಗಳನ್ನು ಸಂಘಟಿಸಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ಟೈಮ್ಸ್ ನೌ ವಾಹಿನಿ ವರದಿ ಮಾಡಿದೆ.