ಹೇಗ್/ನವದೆಹಲಿ/ಇಸ್ಲಾಮಾಬಾದ್: ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಅಭೂತಪೂರ್ವ ಗೆಲುವು ಸಿಕ್ಕಿದೆ. ಜತೆಗೆ, ರಹಸ್ಯವಾಗಿ ವಿಚಾರಣೆ ನಡೆಸುವ ಮೂಲಕ “ಕಾಂಗರೂ ಕೋರ್ಟ್’ನ ಆದೇಶ ನೀಡಿದ್ದ ಪಾಕಿಸ್ತಾನಕ್ಕೆ ದೊಡ್ಡ ಮುಖಭಂಗವಾಗಿದೆ.
2017ರ ಆಗಸ್ಟ್‌ವರೆಗೂ ಯಾವುದೇ ಕಾರಣಕ್ಕೂ ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್‌ಗೆ ಗಲ್ಲುಶಿಕ್ಷೆ ವಿಧಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಲ್ಲದೆ, ಈ ಪ್ರಕರಣ ಅಂತಾರಾಷ್ಟ್ರೀಯ ಕೋರ್ಟ್ ವ್ಯಾಪ್ತಿಗೆ ಬರುವುದದಿಲ್ಲ ಎನ್ನು°ವ ಪಾಕ್ ವಾದವನ್ನು ಸಂಪೂರ್ಣವಾಗಿ ಕೋರ್ಟ್ ತಳ್ಳಿಹಾಕಿದ್ದು, 1977ರಿಂದ ಭಾರತ ಹಾಗೂ ಪಾಕಿಸ್ತಾನ ವಿಯೆನ್ನಾ ಒಪ್ಪಂದದಡಿ ಬರಲು ಒಪ್ಪಿ ಸಹಿ ಮಾಡಿಲ್ಲವೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದೆ.
ಕುಲಭೂಷಣ್ ಜಾಧವ್‌ಗೆ “ಗೂಢಾಚಾರಿ’ಯ ಪಟ್ಟಕಟ್ಟಿ ಗಲ್ಲುಶಿಕ್ಷೆ ನೀಡಿದ್ದ ಪಾಕಿಸ್ತಾನ ಮಿಲಿಟರಿ ಕೋರ್ಟ್ ಆದೇಶ ಪ್ರಶ್ನಿಸಿ ಭಾರತ ವಿಶ್ವಸಂಸ್ಥೆಯ ಅಧೀನದಲ್ಲಿರುವ ಅಂತಾರಾಷ್ಟ್ರೀಯ ಕೋರ್ಟ್‌ಗೆ ಹೋಗಿತ್ತು. ಈ ಸಂಬಂಧ ಸೋಮವಾರವಷ್ಟೇ ವಿಚಾರಣೆ ನಡೆಸಿದ್ದ 11 ನ್ಯಾಯಮೂರ್ತಿಗಳ ಪೀಠ ಆದೇಶ ಕಾಯ್ದಿರಿಸಿತ್ತು. ಗುರುವಾರ ಮಧ್ಯಾಹ್ನ 3.30ರ ವೇಳೆಗೆ ಆದೇಶ ಪ್ರಕಟಸಿದ ಪೀಠ, ಭಾರತದ ಮನವಿಯನ್ನು ಎತ್ತಿಹಿಡಿಯಿತು.
ವಿಯೆನ್ನಾ ಒಪ್ಪಂದದಂತೆ ಇನ್ನೊಂದು ದೇಶದ ಯಾವುದೇ ಕೈದಿಗೆ ವಕೀಲರ ನೆರವು ನೀಡಲೇಬೇಕು. ಅದು ಗೂಢಾಚಾರಿಗೆ ನೀಡಲು ಬರುವುದಿಲ್ಲ ಎಂದೂ ಹೇಳುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿತು. ಅಂತಾರಾಷ್ಟ್ರೀಯ ಕೋರ್ಟ್‌ನ ಕಡೇ ಆದೇಶದ ವರೆಗೆ ಪಾಕಿಸ್ತಾನ ಜಾಧವ್‌ರನ್ನು ಗಲ್ಲಿಗೇರಿಸಕೂಡದು. ಹಾಗೆಯೇ ಅವರಿಗೆ ವಕೀಲರ ನೆರವು ನೀಡಬೇಕು ಎಂದೂ ಸೂಚಿಸಿತು.
ಅತ್ತ ನೆದರ್ಲೆಂಡ್‌ನ ಹೇಗ್‌ನಲ್ಲಿ ಪಾಕಿಸ್ತಾನಕ್ಕೆ ಹಿನ್ನಡೆಯಾಗುತ್ತಿದ್ದಂತೆ, ಭಾರತದಲ್ಲಿ ಸಂಭ್ರಮೋತ್ಸವವೇ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಹೇಗ್‌ನಲ್ಲಿ ಭಾರತ ಪರ ವಾದಿಸಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರಿಗೆ ಅಭಿನಂದನೆ ಸಲ್ಲಿಸಿದರು. ಸದ್ಯ ಲಂಡನ್ ಪ್ರವಾಸದಲ್ಲಿರುವ ಹರೀಶ್ ಸಾಳ್ವೆ ಅವರೂ, ಈ ಆದೇಶದಿಂದ ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರೂ ಹರೀಶ್ ಸಾಳ್ವೆಗೆ ಅಭಿನಂದಿಸಿದ್ದಾರೆ.
ಪಾಕ್‌ನ ಮೊಂಡುವಾದ
ಅಂತಾರಾಷ್ಟ್ರೀಯ ಕೋರ್ಟ್ ನೀಡಿರುವ ಆದೇಶವನ್ನು ಒಪ್ಪಲ್ಲ ಎಂದಿರುವ ಪಾಕಿಸ್ತಾನ ತನ್ನ ಮೊಂಡು ವಾದ ಮುಂದುವರಿಸಿದೆ. ಇದು ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ವಿಷಯ ಎಂದಿದೆ. ಅಲ್ಲದೆ ಜಾಧವ್ ವಿರುದ್ಧ ಇರುವ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಕೋರ್ಟ್‌ನಲ್ಲಿ ವಾದ ಮುಂದುವರಿಸುವುದಾಗಿ ಹೇಳಿದೆ.