ದುಬೈ: 13ನೇ ಆವೃತ್ತಿಯ ಐಪಿಎಲ್ ಪಂದ್ಯವೇ ಹಲವು ರೋಚಕತೆಗೆ ಸಾಕ್ಷಿಯಾಯಿತು. ಮಾರ್ಕಸ್ ಸ್ಟೋಯಿನಸ್ ಸಾಹಸದಿಂದ ದಿಲ್ಲಿ ಕ್ಯಾಪಿಟಲ್ಸ್ ಸೂಪರ್ ಓವರ್ ನಲ್ಲಿ ವಿಜಯಿ ಸಾಧಿಸಿತು. ಪಂಜಾಬ್ ಪರ ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟ ವ್ಯರ್ಥವಾಯಿತು.
ಆದರೆ ಈ ಪಂದ್ಯದಲ್ಲಿಅಂಪಾಯರ್ ಮಾಡಿದ ಒಂದು ತಪ್ಪು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಒಂದು ತಪ್ಪಿನಿಂದ ಪಂಜಾಬ್ ತಂಡ ಸೋಲನುಭವಿಸಬೇಕಾಯಿತು.
ಆಗಿದ್ದೇನು? 18.3 ನೇ ಎಸೆತವನ್ನು ಮಯಾಂಕ್ ಅಗರ್ವಾಲ್ ಕವರ್ ಏರಿಯಾಗೆ ಬಾರಿಸಿ ಎರಡು ರನ್ ಓಡಿದರು. ಆದರೆ ಮತ್ತೊಂದೆಡೆ ಇದ್ದ ಕ್ರಿಸ್ ಜೋರ್ಡಾನ್ ಎರಡನೇ ರನ್ ಓಡುವಾಗ ಕ್ರೀಸ್ ಮುಟ್ಟಿಲ್ಲ ಎಂದು ಅಂಪಾಯರ್ ಒಂದು ರನ್ ಕಡಿತಗೊಳಿಸಿದರು. ಎರಡು ರನ್ ಓಡಿದರೂ ತಂಡಕ್ಕೆ ಒಂದೇ ರನ್ ನೀಡಲಾಯಿತು. ಈ ಒಂದು ರನ್ ಅಂತಿಮವಾಗಿ ತಂಡಕ್ಕೆ ಮುಳುವಾಯಿತು. ಪಂದ್ಯ ಟೈ ಆಯಿತು. ಸೂಪರ್ ಓವರ್ ನಲ್ಲಿ ರಾಹುಲ್ ಪಡೆ ಸೋಲನುಭವಿಸಿತು.
ಇಷ್ಟೇ ಆಗಿದ್ದರೆ ದೊಡ್ಡ ವಿಷಯ ಆಗುತ್ತಿರಲಿಲ್ಲ. ಆದರೆ ಅಂಪಾಯರ್ ನಿತಿನ್ ಮೆನನ್ ನೀಡಿದ ಆ ತೀರ್ಪು ತಪ್ಪಾಗಿತ್ತು. ಜೋರ್ಡಾನ್ ಸರಿಯಾಗಿ ಕ್ರೀಸ್ ಮುಟ್ಟಿದ್ದು ರೀಪ್ಲೇಯಲ್ಲಿ ಸ್ಪಷ್ಟವಾಗಿತ್ತು. ಐಸಿಸಿ ಎಲೈಟ್ ಪ್ಯಾನೆಲ್ ದರ್ಜೆಯ ಅಂಪಾಯರ್ ನಿತಿನ್ ಮೆನನ್ ತಪ್ಪಿನಿಂದ ಪಂಜಾಬ್ ತಂಡ ಸೋಲಿನೊಂದಿಗೆ ಕೂಟ ಆರಂಭಿಸಬೇಕಾಯಿತು.
ಸೆಹವಾಗ್ ಕಿಡಿ: ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಕಿಂಗ್ಸ್ ಇಲೆವೆನ್ ಆಟಗಾರ ವೀರೇಂದ್ರ ಸೆಹವಾಗ್,” ಮ್ಯಾನ್ ಆಫ್ ದಿ ಮ್ಯಾಚ್ ಗೆ ನಿಮ್ಮ ಆಯ್ಕೆ ತಪ್ಪಾಗಿತ್ತು. ಈ ತೀರ್ಪು ನೀಡಿದ ಅಂಪಾಯರ್ ಗೆ ನೀವು ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಬೇಕಿತ್ತು” ಎಂದು ಹೇಳಿದ್ದಾರೆ.
ಮಾಜಿ ಆಟಗಾರ ಆಕಾಶ್ ಚೋಪ್ರಾ ಕೂಡಾ ಈ ಬಗ್ಗೆ ಮಾತನಾಡಿದ್ದು, ಇಷ್ಟೆಲ್ಲಾ ಟೆಕ್ನಾಲಜಿ ಇರುವಾಗ ಈ ತಪ್ಪು ನಡೆಯಬಾರದು. ಥರ್ಡ್ ಅಂಪಾಯರ್ ಆದರೂ ಇದನ್ನು ಸರಿಪಡಿಸಬಹುದಿತ್ತು ಎಂದಿದ್ದಾರೆ.