Advertisement

ಚಿನ್ನಸ್ವಾಮಿಯಲ್ಲಿ ಅಂಪಾಯರ್‌ ಲಾಂಗ್‌ ಪುಂಡಾಟ!

02:26 AM May 08, 2019 | sudhir |

ಬೆಂಗಳೂರು: ಕ್ರಿಕೆಟಿಗರು ಅಶಿಸ್ತು ಪ್ರದರ್ಶಿಸುವುದು ಮಾಮೂಲಿ ಸುದ್ದಿ. ಅಂಪಾಯರ್‌ಗಳು ಅಶಿಸ್ತು ಪ್ರದರ್ಶಿಸುವುದನ್ನು ಕೇಳಿದ್ದೀರಾ? ಅದೂ ಸಿಟ್ಟಿನಲ್ಲಿ ಬಾಗಿಲು ಒಡೆದು ಹಾಕುವುದು? ಶನಿವಾರ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು-ಸನ್‌ರೈಸರ್ಸ್‌ ಹೈದರಾಬಾದ್‌ ನಡುವಿನ ಪಂದ್ಯದಲ್ಲಿ ಇಂತಹ ದೊಂದು ಘಟನೆ ಸಂಭವಿಸಿದೆ. ಅಂಪಾಯರ್‌ ನೈಜೆಲ್‌ ಲಾಂಗ್‌ ತಪ್ಪಾಗಿ ನೋಬಾಲ್‌ ತೀರ್ಪು ನೀಡಿದ್ದರು. ಇದರಿಂದ ಸಿಟ್ಟಿಗೆದ್ದ ಬೆಂಗಳೂರು ನಾಯಕ ಕೊಹ್ಲಿ, ಲಾಂಗ್‌ ಜತೆಗೆ ವಾಗ್ವಾದ ನಡೆಸಿದ್ದರು. ಇದೇ ಸಿಟ್ಟಿನಲ್ಲಿದ್ದ ಲಾಂಗ್‌ ಪಂದ್ಯ ಮುಗಿದ ಮೇಲೆ, ಅಂಪಾಯರ್‌ ಕೊಠಡಿಯ ಬಾಗಿಲಿಗೇ ಒದ್ದು ಒಡೆದು ಹಾಕಿದ್ದಾರೆ!

Advertisement

ಒಟ್ಟಾರೆ ನಡೆದಿದ್ದೇನು?
ಹೈದರಾಬಾದ್‌ ಇನ್ನಿಂಗ್ಸ್‌ ವೇಳೆ ಬೆಂಗಳೂರು ವೇಗಿ ಉಮೇಶ್‌ ಯಾದವ್‌ ಬೌಲಿಂಗ್‌ ಮಾಡುತ್ತಿದ್ದರು. ಆಗ ಇಂಗ್ಲೆಂಡ್‌ ಅಂಪಾಯರ್‌ ನೈಜೆಲ್‌ ಲಾಂಗ್‌ ನೋಬಾಲ್‌ ತೀರ್ಪು ನೀಡಿದರು. ಟಿವಿ ಪರಿಶೀಲನೆಯಲ್ಲಿ ಅದು ನೋಬಾಲ್‌ ಅಲ್ಲ ಎಂದು ಕಂಡು ಬಂದಿದೆ. ಇದರಿಂದ ಸಿಟ್ಟಾದ ಬೆಂಗಳೂರು ನಾಯಕ ಕೊಹ್ಲಿ, ಅಂಪಾಯರ್‌ ಜತೆಗೆ ಜೋರಾಗಿ ಮಾತಿನ ಚಕಮಕಿ ನಡೆಸಿದ್ದರು. ಆ ಸಿಟ್ಟನ್ನು ಪಂದ್ಯ ಮುಗಿದ ಮೇಲೆ ಚಿನ್ನಸ್ವಾಮಿ ಮೈದಾನದಲ್ಲಿದ್ದ ಅಂಪಾಯರ್‌ ಕೊಠಡಿಯ ಬಾಗಿಲಿಗೆ ಒದ್ದು ತೀರಿಸಿಕೊಂಡಿದ್ದಾರೆ.

ಕೆಎಸ್‌ಸಿಎ ಆಗ್ರಹ
ಘಟನೆಯ ಅನಂತರ ಕೆಎಸ್‌ಸಿಎ ಸಿಬಂದಿ ಜತೆಗೂ ಬಿರುಸಿನ ವಾಗ್ವಾದ ನಡೆಸಿದ ಲಾಂಗ್‌, 5,000 ರೂ. ದಂಡ ತೆತ್ತಿದ್ದಾರೆ. ಈ ವಿಷಯವನ್ನು ರೆಫ್ರಿ ಗಮನಕ್ಕೆ ತಂದಿರುವ ಕೆಎಸ್‌ಸಿಎ ಕಾರ್ಯದರ್ಶಿ ಸುಧಾಕರ್‌ ರಾವ್‌, ಅಶಿಸ್ತು ತೋರಿದ ಆಟಗಾರರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾದರೆ, ಅಂಪಾಯರ್‌ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಬಿಸಿಸಿಐ ಕಠಿನ ಕ್ರಮ?
ಲಾಂಗ್‌ ಅಶಿಸ್ತು ಪ್ರದರ್ಶಿಸಿರುವುದರಿಂದ ಅವರನ್ನು ಅಂತಿಮ ಪಂದ್ಯದಿಂದ ತೀರ್ಪುಗಾರರ ಪಟ್ಟಿಯಿಂದ ಹೊರಹಾಕುವ ಚಿಂತನೆಯಲ್ಲಿ ಬಿಸಿಸಿಐಯಿದೆ. ಇನ್ನೊಂದು ಕಡೆ ಒಂದೇ ಒಂದು ಘಟನೆಯಿಟ್ಟುಕೊಂಡು ಇಷ್ಟು ಕಠಿನ ಕ್ರಮ ತೆಗೆದು ಕೊಳ್ಳಬೇಕೆ ಎಂಬ ಗೊಂದಲವೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next